ADVERTISEMENT

ಹುಬ್ಬಳ್ಳಿ: ಸೆಟ್ಲಮೆಂಟ್‌ನಲ್ಲಿ ‘ಹಬ್ಬ’ದ ಸಡಗರ

ಜಿಲ್ಲೆಯ ಹಾಕಿ ತವರಿನಲ್ಲಿ ಅಭಿಮಾನಿಗಳ ಖುಷಿ

​ಪ್ರಜಾವಾಣಿ ವಾರ್ತೆ
Published 10 ಮೇ 2022, 15:35 IST
Last Updated 10 ಮೇ 2022, 15:35 IST
ಹುಬ್ಬಳ್ಳಿಯ ಸೆಟ್ಲಮೆಂಟ್‌ನಲ್ಲಿ ಮಂಗಳವಾರ ನಡೆದ ಹಾಕಿ ಟೂರ್ನಿಯ ಫೈನಲ್‌ ಪಂದ್ಯವನ್ನು ನೋಡಲು ಸೇರಿದ್ದ ಜನ
ಹುಬ್ಬಳ್ಳಿಯ ಸೆಟ್ಲಮೆಂಟ್‌ನಲ್ಲಿ ಮಂಗಳವಾರ ನಡೆದ ಹಾಕಿ ಟೂರ್ನಿಯ ಫೈನಲ್‌ ಪಂದ್ಯವನ್ನು ನೋಡಲು ಸೇರಿದ್ದ ಜನ   

ಹುಬ್ಬಳ್ಳಿ: ಮನೆಗೆ ಕನಿಷ್ಠ ಒಬ್ಬ ಹಾಕಿ ಆಟಗಾರ ಇರುವ ನಗರದ ಸೆಟ್ಲಮೆಂಟ್‌ ಬಡಾವಣೆಯ ಯಂಗ್‌ ಸ್ಟಾರ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ಮಂಗಳವಾರ ಸಂಭ್ರಮ ಮನೆ ಮಾಡಿತ್ತು. ಅಂತರರಾಷ್ಟ್ರೀಯ ಮಾಜಿ ಆಟಗಾರ ಎ.ಬಿ. ಸುಬ್ಬಯ್ಯ ಅವರೊಂದಿಗೆ ಫೋಟೊ ತೆಗೆಯಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.

ಫೈನಲ್‌ ಪಂದ್ಯವನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಅದರಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು ವಿಶೇಷ. ಜಿಲ್ಲೆಯ ಹಾಕಿ ತವರು ಎಂದೇ ಹೆಸರಾದ ಸೆಟ್ಲಮೆಂಟ್‌ನಲ್ಲಿ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮೈದಾನದ ಆಚೆ ಬಂದು ಬೀಳುತ್ತಿದ್ದ ಚೆಂಡನ್ನು ‘ಬಾಲ್‌ ಬಾಯ್‌’ಗಳು ಆಟಗಾರರಿಗೆ ಕೊಟ್ಟು ಖುಷಿ ಪಡುತ್ತಿದ್ದರು.

ಪಂದ್ಯದ ಬಳಿಕ ಮಾಜಿ, ಹಾಲಿ ಆಟಗಾರರು, ಮಕ್ಕಳು ಹಾಕಿ ಸ್ಟಿಕ್‌ ಹಿಡಿದು ಸುಬ್ಬಯ್ಯ ಅವರೊಂದಿಗೆ ಫೋಟೊ ತೆಗೆಯಿಸಿಕೊಂಡರು. ಸುಬ್ಬಯ್ಯ ಹುಬ್ಬಳ್ಳಿ ಹಾಕಿ ವೈಭವದ ದಿನಗಳನ್ನು ನೆನಪಿಸಿಕೊಂಡರು.

ADVERTISEMENT

ನಿರಂತರ ಪ್ರವಾಸ: ಹಾಕಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿಯೂ ಆದ ಸುಬ್ಬಯ್ಯ ಮಾಧ್ಯಮಗಳ ಜೊತೆ ಮಾತನಾಡಿ ‘ಕೋವಿಡ್‌ ಕಾರಣದಿಂದಾಗಿ ಎರಡ್ಮೂರು ವರ್ಷ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಮಿನಿ ಒಲಿಂಪಿಕ್ಸ್‌ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಾಕಿ ಕರ್ನಾಟಕದ ಸದಸ್ಯರು ನಿಯಮಿತವಾಗಿ ಈ ಭಾಗದ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಕ್ಲಬ್‌ಗಳಿಗೆ ಮಾನ್ಯತೆ ನೀಡಿ ಜಿಲ್ಲಾ ಹಾಕಿ ಸಂಸ್ಥೆಗಳನ್ನು ಸಕ್ರಿಯಗೊಳಿಸುವ ಕೆಲಸ ಮಾಡಲಾಗುವುದು’ ಎಂದು ತಿಳಿಸಿದರು.

‘ರಾಜ್ಯದ ಪ್ರತಿಭಾನ್ವಿತ ಆಟಗಾರರು ಹೊರರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಲು ಹಾಕಿ ಕರ್ನಾಟಕದಿಂದಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಸ್ಟೆಲ್‌ಗಳಲ್ಲಿ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುವಂತೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಒತ್ತಾಯಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.