ಹುಬ್ಬಳ್ಳಿ: ‘ಸಕಾಲಕ್ಕೆ ಬೆಳೆ ವಿಮೆ ತುಂಬಿದರೂ ನಮಗೆ ಬೆಳೆಹಾನಿ ಪರಿಹಾರ ದೊರೆತಿಲ್ಲ. ಎಲ್ಲರಂತೆ ನಮಗೂ ಬೆಳೆಹಾನಿ ಪರಿಹಾರ ನೀಡಬೇಕು’ ಎಂದು ಭೈರಿದೇವರಕೊಪ್ಪ ಹಾಗೂ ಉಣಕಲ್ ಭಾಗದ ರೈತರು ಆಗ್ರಹಿಸಿದರು.
ನಗರದ ಉಣಕಲ್ ಬಳಿಯ ಹಳೆಯ ಸಿದ್ದಪ್ಪಜ್ಜನ ಗುಡಿ ಸಭಾಂಗಣದಲ್ಲಿ ಮಂಗಳವಾರ ನಡೆದ ಭೈರಿದೇವರಕೊಪ್ಪ ಹಾಗೂ ಉಣಕಲ್ ಭಾಗದ ರೈತರ ಸಂವಾದ ಕಾರ್ಯಕ್ರಮದಲ್ಲಿ ಅವರು ಒತ್ತಾಯಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರು, ’ಈ ಭಾಗದ ರೈತರು 2018ರಿಂದ ಬೆಳೆಹಾನಿ ಪರಿಹಾರದಿಂದ ವಂಚಿತರಾಗಿದ್ದು, ಸರ್ಕಾರದ ನಿಯಮದಂತೆ ಅರ್ಹ ರೈತರಿಗೆ ಬೆಳೆಹಾನಿ ಪರಿಹಾರ ಕೊಡಬೇಕು’ ಎಂದರು.
’ಭೈರಿದೇವರಕೊಪ್ಪ ಹಾಗೂ ಉಣಕಲ್ ಗ್ರಾಮಗಳ ರೈತರ ಜಮೀನು ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಬರುತ್ತಿಲ್ಲ. ಇದರಿಂದಾಗಿ ಸಮಸ್ಯೆ ಆಗುತ್ತಿದೆ. ನವಲಗುಂದ ಮತ್ತು ಕುಂದಗೋಳ ಭಾಗದಲ್ಲಿ ಬೆಣ್ಣೆ ಹಳ್ಳದ ಪ್ರವಾಹದಿಂದ ಬೆಳೆ ಹಾನಿಯಾಗುತ್ತಿದೆ ಎಂದು ಪರಿಗಣಿಸಿ, ಅಲ್ಲಿನ ರೈತರಿಗೆ ಬೆಳೆಹಾನಿ ಪರಿಹಾರ ನೀಡಲಾಗುತ್ತಿದೆ. ಆದರೆ, ಭೈರಿದೇವರಕೊಪ್ಪ, ಉಣಕಲ್ ನಗರ ಪ್ರದೇಶದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿದೆ. ಈ ಅಂಶವನ್ನು ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಪರಿಗಣಿಸಬೇಕು‘ ಎಂದು ಶಾಸಕರು ಹೇಳಿದರು.
‘ನಮ್ಮ ಭಾಗದ ರೈತರಿಗೆ 2018 ರಿಂದ ಇಲ್ಲಿಯ ತನಕ ಬೆಳೆಹಾನಿ ಪರಿಹಾರ ಬಂದಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಸರಿಯಾದ ಸರ್ವೆ ಸಮೀಕ್ಷೆ ಮಾಡುತ್ತಿಲ್ಲ’ ಎಂದು ಉಣಕಲ್ ಗ್ರಾಮದ ಚೆನ್ನುಪಾಟೀಲ, ಉಮೇಶ ಗೌಡ, ಕೌಜಗೇರಿ ಶಂಕ್ರಪ್ಪ ಹಾಗೂ ಭೈರದೇವರಕೊಪ್ಪದ ಮಲ್ಲಿಕಾರ್ಜುನ ಗುಂಡೂರ ದೂರಿದರು.
‘ನಾವು ಸೋಯಾಬೀನ್, ಉದ್ದು, ಹೆಸರು ಬೆಳೆ ಬೆಳೆಯುತ್ತಿದ್ದೇವೆ. ಆದರೆ, ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಸರ್ವೆ ವೇಳೆ ಬೇರೆ ಬೆಳೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು, ’ಅಧಿಕಾರಿಗಳು ಸರಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸುತ್ತಾರೆ. ಆದರೂ ರೈತರು ಜಮೀನಿನಲ್ಲಿದ್ದು, ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಮುಖರಾದ ರಾಜಣ್ಣ ಕೊರವಿ, ಉಮೇಶ ಕೌಜಗೇರಿ, ಮಲ್ಲಿಕಾರ್ಜುನ ಗುಂಡೂರ, ಎಂ.ಡಿ.ಮೆಣಸಿನಕಾಯಿ, ಶಿವು ಪಾಟೀಲ, ಮಂಜುಳಾ, ಶ್ರೀನಿವಾಸ್, ಪರಶುರಾಮ ಹೊಂಬಳ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಮತ್ತೊಮ್ಮೆ ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದುಮಹೇಶ ಟೆಂಗಿನಕಾಯಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.