ADVERTISEMENT

ಧಾರವಾಡ | ರೈತರ ಚಿತ್ತ ಮುಂಗಾರು ಮಳೆಯತ್ತ: 2.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಗೌರಮ್ಮ ಕಟ್ಟಿಮನಿ
Published 27 ಮೇ 2023, 5:05 IST
Last Updated 27 ಮೇ 2023, 5:05 IST
ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ರೈತರೊಬ್ಬರು ಬಿತ್ತನೆಗೆ ಹೊಲ ಹದಗೊಳಿಸಿರುವುದು
ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ರೈತರೊಬ್ಬರು ಬಿತ್ತನೆಗೆ ಹೊಲ ಹದಗೊಳಿಸಿರುವುದು   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಾರ್ಚ್‍ನಿಂದ ಈತನಕ ಮುಂಗಾರು ಪೂರ್ವ ವಾಡಿಕೆಯಷ್ಟು ಮಳೆ ಸುರಿದಿದ್ದರೇ, ಇಷ್ಟೊತ್ತಿಗೆ ರೈತರ ಹೊಲಗಳಲ್ಲಿದ್ದ ಹೆಂಟೆಗಳು ಕರಗಿ, ಭೂಮಿ ಹರಗುವ ಕೆಲಸ ಪೂರ್ಣಗೊಳ್ಳುತ್ತಿತ್ತು. ಮಳೆ ಕಡಿಮೆ ಪ್ರಮಾಣದಲ್ಲಿ ಆಗಿದ್ದರಿಂದ ರೈತರು ಆಕಾಶದತ್ತ ನೋಡುವಂತಾಗಿದೆ.

ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ 120 ಮಿ.ಮೀ ಮಳೆಯಾಗಬೇಕಿತ್ತು. ಸುರಿದಿದ್ದು ಬರೀ 70ಮಿ.ಮೀ ಮಳೆಯಾಗಿದೆ. ಈ ವರ್ಷ ವಾರ್ಷಿಕ 788 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಗಳಿವೆ.

ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ ಮಳೆಯಾಶ್ರಿತ ಪ್ರದೇಶವಾಗಿದ್ದು, ಸಕಾಲದಲ್ಲಿ ಮಳೆಯಾಗದಿದ್ದರೆ ಈ ಭಾಗದ ರೈತರು ಮುಂಗಾರು ಬಿತ್ತನೆ ವೇಳೆ ಕಷ್ಟ ಅನುಭವಿಸಬೇಕಾಗುತ್ತದೆ.

ADVERTISEMENT

‘ಈಗಾಗಲೇ ಹೆಸರು ಬಿತ್ತನೆಗೆ ಭೂಮಿ ಹದಗೊಳಿಸಿದ್ದೇವೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜೂನ್‌ 15 ರೊಳಗೆ ಉತ್ತಮ ಮಳೆಯಾಗದಿದ್ದರೆ ಇಳುವರಿ ಕಡಿಮೆಯಾಗಲಿದೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿದ್ದಲ್ಲಿ ಹತ್ತಿ ಅಥವಾ ಮೆಣಸಿನಕಾಯಿ ಬೆಳೆಯಬೇಕಾಗುತ್ತದೆ ಎಂದು ಕಿರೇಸೂರಿನ ರೈತ ಗುರು ರಾಯನಗೌಡ್ರ ತಿಳಿಸಿದರು.

ಬಿತ್ತನೆ ಗುರಿ:

ಧಾರವಾಡ ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಒಟ್ಟಾರೆ 2.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಮುಖ್ಯ ಬೆಳೆಗಳಾದ ಹತ್ತಿ 70 ಸಾವಿರ ಹೆಕ್ಟೇರ್, ಸೋಯಾಬಿನ್ 40 ಸಾವಿರ ಹೆಕ್ಟೇರ್, ಮೆಕ್ಕೆಜೋಳ 40 ಸಾವಿರ ಹೆಕ್ಟೇರ್, ಹೆಸರು 50-55 ಸಾವಿರ ಹೆಕ್ಟೇರ್, ಉದ್ದು 8-10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

ಭರಪೂರ ದಾಸ್ತಾನು:

ಕಳೆದ ವರ್ಷ ಜಿಲ್ಲೆಯಲ್ಲಿ 16,900 ಕ್ವಿಂಟಲ್ ಬಿತ್ತನೆ ಬೀಜ ಸಂಗ್ರಹಿಸಲಾಗಿತ್ತು. ಈ ವರ್ಷ 19,000 ಕ್ವಿಂಟಲ್ ಬಿತ್ತನೆ ಬೀಜ ಸಂಗ್ರಹಿಸಲಾಗಿದೆ. ಈ ಪೈಕಿ 1,600 ಕ್ವಿಂಟಲ್ ಹೆಸರು, 500 ಕ್ವಿಂಟಲ್ ಉದ್ದು, 290 ಕ್ವಿಂಟಲ್ ಭತ್ತ, 1,100 ಕ್ವಿಂಟಲ್ ಶೇಂಗಾ, 15,000 ಕ್ವಿಂಟಲ್ ಸೋಯಾಬಿನ್ ಬಿತ್ತನೆ ಬೀಜ ಸಂಗ್ರಹಿಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಬಿತ್ತನೆ ಬೀಜ ಪೂರೈಸಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

ಬಿತ್ತನೆ ಬೀಜ ಹಾಗೂ ರಸಗೊಬ್ಬರ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ. ಮುಂಗಾರಿನಲ್ಲಿ ರೈತರಿಗೆ ತೊಂದರೆಯಾಗದು
– ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ ಕೃಷಿ ಇಲಾಖೆ

‘ರೈತರಿಗೆ ಅನುಕೂಲ ಕಲ್ಪಿಸಲು ಧಾರವಾಡ, ಹುಬ್ಬಳ್ಳಿ, ಗರಗ, ಶಿರಗುಪ್ಪಿ, ಅಮ್ಮಿನಬಾವಿ, ನವಲಗುಂದ, ದುಮ್ಮವಾಡ, ಮೊರಬ, ಛಬ್ಬಿ, ಸಂಶಿ, ಕುಂದಗೋಳ, ಹೆಬಸೂರು, ನವಲಗುಂದ, ಕಲಘಟಗಿಯಲ್ಲಿ ಒಟ್ಟು 14 ರೈತ ಸಂಪರ್ಕ ಕೇಂದ್ರ ಹಾಗೂ ಪ್ರತಿ ಹೋಬಳಿಗೆ ಒಂದು ಅಥವಾ ಎರಡರಂತೆ ಉಪಮಾರಾಟ ಕೇಂದ್ರ ಸೇರಿದಂತೆ 31 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಕ್ರಮವಹಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ರೈತರೊಬ್ಬರು ಬಿತ್ತನೆಗೆ ಭೂಮಿ ಹದಗೊಳಿಸಿರುವುದು

ರಸಗೊಬ್ಬರ ವಿವರ:

‘ಜಿಲ್ಲೆಯಲ್ಲಿ ಸದ್ಯ 10,400 ಮೆಟ್ರಿಕ್‌ ಟನ್ ಯೂರಿಯಾ, 10,100 ಮೆಟ್ರಿಕ್‌ ಟನ್ ಡಿಎಪಿ, 14,500 ಮೆಟ್ರಿಕ್‌ ಟನ್ ಕಾಂಪ್ಲೆಕ್ಸ್ ಸೇರಿದಂತೆ ಒಟ್ಟು 37,300 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಸೆಪ್ಟೆಂಬರ್‌ ತನಕ ಒಟ್ಟು ಜಿಲ್ಲೆಗೆ 58,000 ಮೆಟ್ರಿಕ್ ಟನ್ ರಸಗೊಬ್ಬರ ಬೇಕಾಗುತ್ತೆ. ಪ್ರತಿ ತಿಂಗಳು ಬೇಡಿಕೆಗೆ ತಕ್ಕಂತೆ ರೈತರಿಗೆ ಪೂರೈಸಲಾಗುವುದು’ ಎಂದು ಶಿವನಗೌಡ ಪಾಟೀಲ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.