ADVERTISEMENT

ತಂದೆಯ ಕನಸು ನನಸಾಗಿಸಿದ ಸಾಧಕಿ

ಬಸವರಾಜ ಹವಾಲ್ದಾರ
Published 26 ಡಿಸೆಂಬರ್ 2019, 10:27 IST
Last Updated 26 ಡಿಸೆಂಬರ್ 2019, 10:27 IST
ಪ್ರಭಾವತಿ
ಪ್ರಭಾವತಿ   

ಹುಬ್ಬಳ್ಳಿ: ಹೆಣ್ಣು ಮಕ್ಕಳು ಯಾವುದರಲ್ಲಿಯೂ ಕಡಿಮೆ ಇಲ್ಲ. ನೀವೂ ಸಾಧನೆ ಮಾಡಲು ಸಾಧ್ಯ ಎಂದು ಹೇಳುತ್ತಿದ್ದ ತಂದೆ ಪಾಂಡುರಂಗ ಅವರು, ನನ್ನನ್ನು ಗಂಡು ಮಕ್ಕಳಂತೆಯೇ ಬೆಳೆಸಿದ್ದರು. ಅವರ ಕನಸನ್ನು ನನಸಾಗಿಸುವ ನಿಟ್ಟಿನ ಪ್ರಯತ್ನಕ್ಕೆ ಈಗ ಫಲ ದೊರೆತಿದೆ.

ಹೀಗೆಂದು ತಮ್ಮ ಮನದಾಳದ ಮಾತನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿ, ಡಿಎಸ್‌ಪಿ ಹುದ್ದೆಗೆ ಆಯ್ಕೆಯಾಗಿರುವ ಹುಬ್ಬಳ್ಳಿಯ ಬಸವೇಶ್ವರ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದು, ಇತ್ತೀಚೆಗಷ್ಟೇ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಪ್ರಭಾವತಿ ಪಾಂಡುರಂಗ.

‘ನಮ್ಮ ತಂದೆ–ತಾಯಿಗೆ ಇಬ್ಬರು ಹೆಣ್ಣುಮಕ್ಕಳಿದ್ದೆವು. ಹಾಗೆಂದು ನಮಗೆಂದು ಕೊರತೆ ಮಾಡಿರಲಿಲ್ಲ. ಸಾಧನೆ ಮಾಡಲು ನಿಮ್ಮಿಂದಲೂ ಸಾಧ್ಯ ಎಂದು ಸದಾ ಪ್ರೇರೇಪಿಸುತ್ತಿದ್ದರು. ಹೆಣ್ಣು ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದಕ್ಕೆ ಅವರ ಮಾದರಿ ತಂದೆಯಾಗಿದ್ದಾರೆ. ಮದುವೆಯಾದ ಪತಿಯ ಮನೆಯವರ ಪ್ರೋತ್ಸಾಹವೂ ಸೇರಿಕೊಂಡಿತು. ಹಾಗಾಗಿ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದರು.

ADVERTISEMENT

‘ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದರೂ ತಂದೆಯವರ ಮಾತುಗಳು ಕಿವಿಯಲ್ಲಿ ಹಾಗೆಯೇ ಗುನುಗುಡುತ್ತಿದ್ದವು. ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಕೆಲಸದಲ್ಲಿರುವುದರಿಂದ ಕೋಚಿಂಗ್‌ ಹೋಗಲು ಸಾಧ್ಯವಿರಲಿಲ್ಲ. ಸ್ವತಃ ಸಿದ್ಧತೆ ಮಾಡಿಕೊಂಡು ಪಾಸಾಗಿದ್ದೇನೆ’ ಎಂದು ಹೇಳಿದರು.

‘ಐಚ್ಛಿಕ ವಿಷಯವನ್ನಾಗಿ ಗ್ರಾಮೀಣ ಅಭಿವೃದ್ಧಿ ಆಯ್ಕೆ ಮಾಡಿಕೊಂಡಿದ್ದೆ. ಮನೆ ಕೆಲಸ, ಶಾಲಾ ಕರ್ತವ್ಯದ ನಡುವೆಯೇ ಓದುತ್ತಿದ್ದೆ. ಎಷ್ಟು ಗಂಟೆ ಓದಿದೆವು ಎನ್ನುವುದಕ್ಕಿಂತ ಎಷ್ಟು ಅರ್ಥ ಮಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ’ ಎನ್ನುತ್ತಾರೆ ಅವರು.

‘ಮಕ್ಕಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಇಂಗ್ಲಿಷ್‌ ಶಿಕ್ಷಕಿಯಾಗಿ ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ಹೇಳುತ್ತಿದ್ದರು. ಮಕ್ಕಳನ್ನೂ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೋತ್ಸಾಹಿಸುತ್ತಿದ್ದರು’ ಎಂದು ಅವರ ಸಹದ್ಯೋಗಿಯಾಗಿದ್ದ ಶಿಕ್ಷಕ ಎಚ್‌.ಬಿ. ಕೊರವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.