ಹುಬ್ಬಳ್ಳಿ: ‘ಕೇತಗಾನಹಳ್ಳಿಯಲ್ಲಿ 14 ಎಕರೆಯಲ್ಲ, 71 ಎಕರೆ ಜಮೀನು ಒತ್ತುವರಿಯಾಗಿದೆ. ಇದನ್ನು ಒತ್ತುವರಿ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.
‘ಒತ್ತುವರಿದಾರರ ಜೊತೆಗೆ ಶಾಮೀಲಾದ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು. ವಶಪಡಿಸಿಕೊಂಡ ಗೋಮಾಳ ಜಮೀನನ್ನು ಪುನಃ ಗೋಮಾಳವಾಗಿ ಪರಿವರ್ತಿಸಬೇಕು. ನ್ಯಾಯಾಲಯಕ್ಕೆ ಅನುಸರಣಾ ವರದಿ ಸಲ್ಲಿಸಬೇಕು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಿಟಿಜನ್ ಫಾರ್ ಡೆಮಾಕ್ರಸಿ (ಸಿಎಫ್‌ಡಿ) ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ದೆಹಲಿಯ ಗಾಂಧಿಶಾಂತಿ ಪ್ರತಿಷ್ಠಾನದಲ್ಲಿ ಏಪ್ರಿಲ್ 19 ರಿಂದ 20ರವರೆಗೆ ನಡೆಯಲಿದೆ. ನ್ಯಾಯಮೂರ್ತಿ ಮದನ್ ಎಂ. ಲೋಕುರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎರಡು ದಿನ ವಿವಿಧ ಗೋಷ್ಠಿಗಳು ನಡೆಯಲಿವೆ’ ಎಂದರು.
‘ಜೆಎನ್‌ಯು ಪ್ರೊ. ಆನಂದ ಕುಮಾರ್, ಪ್ರೊ. ಜಗದೀಪ್ ಚೊಕ್ಕರ್, ಅರ್ಥಶಾಸ್ತ್ರಜ್ಞ ಅರುಣಕುಮಾರ ಸೇರಿ ಸಿಎಫ್‌ಡಿ ಪದಾಧಿಕಾರಿಗಳು ಮಾತನಾಡುವರು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.