ADVERTISEMENT

ಹುಬ್ಬಳ್ಳಿ | ಹೂವು: ಬೆಲೆ ಇಳಿಕೆ, ಬೆಳೆಗಾರರಿಗೆ ಸಂಕಷ್ಟ

ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ವಿವಿಧ ಬಗೆಯ ಹೂವು ಬೆಳೆ 

ಎಲ್‌.ಮಂಜುನಾಥ
Published 22 ಅಕ್ಟೋಬರ್ 2025, 7:23 IST
Last Updated 22 ಅಕ್ಟೋಬರ್ 2025, 7:23 IST
ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯಲ್ಲಿನ ಹೂವಿನ ಮಾರುಕಟ್ಟೆ ವಿಭಾಗದಲ್ಲಿ ಮಂಗಳವಾರ ಚೆಂಡು, ಸೇವತಿಗೆ ಹೂವು ಮಾರಾಟ ನಡೆಯಿತು
ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯಲ್ಲಿನ ಹೂವಿನ ಮಾರುಕಟ್ಟೆ ವಿಭಾಗದಲ್ಲಿ ಮಂಗಳವಾರ ಚೆಂಡು, ಸೇವತಿಗೆ ಹೂವು ಮಾರಾಟ ನಡೆಯಿತು   

ಹುಬ್ಬಳ್ಳಿ: ಗಣೇಶ ಚತುರ್ಥಿ, ವಿಜಯದಶಮಿ ಮತ್ತು ದೀಪಾವಳಿ ಸೇರಿ ಹಬ್ಬಗಳ ದಿನಗಳಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚು. ಜೂನ್‌ ಆರಂಭದಲ್ಲಿ ಮುಂಗಾರು ಹಂಗಾಮಿನ ಮಿಶ್ರ ಬೆಳೆಯಾಗಿ ಬಿತ್ತನೆಯಾಗುವ ಹೂವಿನ ಬೆಳೆಯು ದೀಪಾವಳಿ ಹಬ್ಬ ಮುಗಿಯುವವರೆಗೆ ಏರಿಳಿತದೊಂದಿಗೆ ರೈತನ ಕುಟುಂಬದ ಆರ್ಥಿಕ ಆಸರೆಯಾಗುತ್ತದೆ. 

ಆದರೆ, ಈ ಬಾರಿ ಗಣೇಶ ಚತುರ್ಥಿ ವೇಳೆಗಿದ್ದ ಹೂವುಗಳ ಬೆಲೆ, ದಸರಾ ಹಬ್ಬಕ್ಕಿರಲಿಲ್ಲ. ದಸರಾ ಹಬ್ಬದ ಸಮಯದಲ್ಲಿದ್ದ ಬೆಲೆಯು ದೀಪಾವಳಿ ಹಬ್ಬಕ್ಕೆ ಇಲ್ಲ. ಈ ಬಾರಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ನಡುವೆಯೂ ಹೂವುಗಳ ಉತ್ಪಾದನೆ ಹೆಚ್ಚಾಗಿದೆ. ಆದರೆ, ಬೆಲೆ ಕುಸಿದಿದೆ. 

ನಗರದ ಅಮರಗೋಳದ ಎಪಿಎಂಸಿ‌ ಹೂವಿನ ಮಾರುಕಟ್ಟೆಗೆ ಮುಂಜಾನೆಯೇ ಧಾರವಾಡ ಜಿಲ್ಲೆ ಸೇರಿ ವಿವಿಧೆಡೆಯಿಂದ ನಿತ್ಯ ಕನಿಷ್ಠ 2 ಟನ್‌ ವಿವಿಧ ಬಗೆಯ ಹೂವುಗಳು ಬರುತ್ತವೆ. ಹಬ್ಬದ ದಿನಗಳಲ್ಲಿ 4 ರಿಂದ 5 ಟನ್‌ವರೆಗೂ ಬರುತ್ತವೆ.

ADVERTISEMENT

ದೀಪಾವಳಿ ಹಬ್ಬದಿಂದಾಗಿ ಈ ಬಾರಿ ಧಾರವಾಡ ಜಿಲ್ಲೆ ಸೇರಿತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳಿಂದ ಕಳೆದ ಕೆಲ ದಿನಗಳಿಂದ 5 ಟನ್‌ಗೂ ಅಧಿಕ ಹೂವುಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ, ಬೆಲೆಯ ಏರಿಳಿತದಿಂದ ಬೆಳೆಗಾರರ ಬೆಳೆಯ ಖರ್ಚನ್ನು ಮಾತ್ರ ನಿಭಾಹಿಸಿದಂತಾಗಿದೆ. 

‘ದೀಪಾವಳಿ ಹಬ್ಬಕ್ಕಾಗಿಯೇ ರೈತರು ಮುಂಜಾನೆಯೇ ಚೆಂಡು ಹೂವು, ಸೇವಂತಿಗೆ, ಗುಲಾಬಿ, ಸುಗಂಧರಾಜ, ಮಲ್ಲಿಗೆ, ಕಾಕಡ, ಟೈಗಲ್‌ ಲಿಲ್ಲಿ ಸೇರಿ ವಿವಿಧ ಬಗೆಯ ಹೂವುಗಳ ಮೂಟೆಗಳನ್ನು ಟಿಂಪೊ, ಟ್ರ್ಯಾಕ್ಟರ್‌, ಟಂಟಂ ವಾಹನಗಳಲ್ಲಿ ಇಲ್ಲಿಗೆ ತರುತ್ತಾರೆ. ಆದರೆ, ಬೆಲೆಯಲ್ಲಿ ನಿತ್ಯ ಏರಿಳಿತವಾಗುತ್ತಿದ್ದು, ಅವರು ನಿರಿಕ್ಷಿಸಿದಷ್ಟು ಬೆಲೆ ಸಿಗುತ್ತಿಲ್ಲ. ಬೆಳೆಗೆ ಮಾಡಿದ ಖರ್ಚು ಮಾತ್ರ ಬಂದಿದೆ ಎಂಬ ನಿರಾಸೆ ಮುಖದೊಂದಿಗೆ ಮರಳುತ್ತಿದ್ದಾರೆ’ ಎಂದು ಎಪಿಎಂಸಿಯ ಹೂವಿನ ಮಾರುಕಟ್ಟೆ ವಿಭಾಗದಲ್ಲಿನ ಸಗಟು ಹೂವಿನ ವ್ಯಾಪಾರಿ ಅಬ್ದುಲ್‌ ಖಾದರ್‌ ಹೇಳುತ್ತಾರೆ. 

‘ಗಣೇಶ ಹಬ್ಬದಲ್ಲಿ ಹೂವಿಗೆ ಬೇಡಿಕೆಯಿತ್ತು. ದಸರಾ ಹಬ್ಬದ ಸಮಯದಲ್ಲಿ ಬೆಲೆ ಕಡಿಮೆಯಾಯಿತು. ದೀಪಾವಳಿಗೆ ಇನ್ನೂ ಕಡಿಮೆ ಆಗಿದೆ. ಒಂದು ಕೆಜಿ ಚೆಂಡು ಹೂವು ಗುಣಮಟ್ಟಣದ ಆಧಾರದ ಮೇಲೆ ₹40ರಿಂದ ₹80ರ ವರೆಗೆ ಮಾರಾಟವಾಯಿತು. ಲಕ್ಕುಂಡಿಯ ಹೂವಿನ ಬೆಳೆಗಾರರೊ‌ಬ್ಬರು ತಂದಿದ್ದ 50 ಕೆಜಿ ಹೂವಿಗೆ ₹2 ಸಾವಿರ ಮಾತ್ರ ಸಿಕ್ಕಿದೆ. ಇದು ಹೂವು ಬೆಳೆದ ಖರ್ಚಿಗೂ ಆಗಿಲ್ಲವೆಂದ ರೈತರು ಹೇಳುತ್ತಿದ್ದಾರೆ’ ಎನ್ನುತ್ತಾರೆ ಖಾದರ್. 

‘5 ಎಕರೆಯಲ್ಲಿ ಸೇವಂತಿಗೆ ಹೂವು ಬೆಳೆದಿದ್ದೆ. ₹3ಲಕ್ಷ ಖರ್ಚಾಗಿದೆ. ಗುಣಮಟ್ಟದ ಹೂವು ಬರಲಿಲ್ಲ. ಕೆಜಿಗೆ ₹80ರಿಂದ ₹100ರವರೆಗೆ ಮಾರಾಟ ಮಾಡಿದೆ. ₹2 ಲಕ್ಷ ಬಂದಿದೆ. ಬೆಳೆಯ ಖರ್ಚು ಸಹ ಬಂದಿಲ್ಲ’ ಎಂದು ಎಪಿಎಂಸಿಗೆ ಹೂವು ಮಾರಾಟಕ್ಕೆ ಬಂದಿದ್ದ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಹೊಸೂರು ಗ್ರಾಮದ ಬಸವರಾಜ್‌ ಬೆಸರ ವ್ಯಕ್ತಪಡಿಸಿದರು. 

‘ಹಬ್ಬ, ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಮಾತ್ರ ಅಲ್ಪಮಟ್ಟಿಗೆ ಕೈ ಹಿಡಿಯುವ ಹೂವಿನ ಬೆಳೆ ಉಳಿದ ದಿನಗಳಲ್ಲಿ ಹೇಳಿಕೊಳ್ಳುವಷ್ಟು ಬೆಲೆ ಸಿಗಲ್ಲ. ಈ ಬಾರಿಯ ಮಳೆಯಿಂದ ಹೂವಿನ ಬೆಳೆಗಳು ಹೆಚ್ಚು ನೀರಿಡಿಯಿತು. ಹೂವುಗಳ ಕಪ್ಪಾದವು. ಸಹಜವಾಗಿ ಬೆಲೆ ಕಡಿಮೆಯಾಯಿತು’ ಎನ್ನುತ್ತಾರೆ ಅವರು. 

‘ಮಳೆಯಿಂದಾಗಿ ಹಾಳದ ಸೇವಂತಿಗೆ ಬೆಳೆಯನ್ನು ಮಾರುಕಟ್ಟೆಗೆ ತಾರದೇ ಜಮೀನಿನಲ್ಲಿಯೇ ಗೊಬ್ಬರ ಮಾಡಿಕೊಂಡು ಹಿಂಗಾರು ಬೆಳೆಯನ್ನು ಬಿತ್ತಿದ್ದೇವೆ‘ ಎಂದು ಸ್ನೇಹಿತನೊಂದಿಗೆ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದ ಲಕ್ಕುಂಡಿಯ ರೈತ ಸುರೇಶ ಹೊಸಮನಿ ಹೇಳಿದರು. ಬಹುತೇಕ ಹೂವು ಬೆಳೆಗಾರರ ಮಾತು ಇದಕ್ಕೆ ಹೊರತಾಗಿರಲಿಲ್ಲ. 

ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯಲ್ಲಿನ ಹೂವಿನ ಮಾರುಕಟ್ಟೆ ವಿಭಾಗದಲ್ಲಿ ಮಂಗಳವಾರ ಚೆಂಡು ಸೇವತಿಗೆ ಹೂವು ಮಾರಾಟ ನಡೆಯಿತು

ಹಬ್ಬ, ಹುಣ್ಣಿಮೆ, ಅಮಾವಾಸ್ಯೆ ವೇಳೆ ಹೂವಿಗೆ ಬೇಡಿಕೆ ಅತಿವೃಷ್ಟಿ: ಉತ್ಪಾದನೆ ಹೆಚ್ಚಳ, ಬೇಡಿಕೆ ಕುಸಿತ

ಜಿಲ್ಲೆಯಲ್ಲಿ ಸುಮಾರು 300 ಹೆಕ್ಟೇರ್‌ನಲ್ಲಿ ವಿವಿಧ ಬಗೆಯ ಹೂವುಗಳನ್ನು ಬೆಳೆಯಲಾಗುತ್ತದೆ. ಈ ಬಾರಿ ಬೆಳೆ ಚೆನ್ನಾಗಿ ಬಂದಿದೆ. ಆದರೆ ಕಳೆದ ಬಾರಿಯಷ್ಟು ಬೆಲೆ ರೈತರಿಗೆ ಸಿಕ್ಕಿಲ್ಲ. 
ಕಾಶೀನಾಥ ಭದ್ರಣ್ಣನವರ್‌ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಧಾರವಾಡ ಜಿಲ್ಲೆ  
ಧಾರವಾಡ ತಾಲ್ಲೂಕಿನಲ್ಲಿ 135 ಹೆಕ್ಟೇರ್‌ನಲ್ಲಿ ಹೂವಿನ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 215 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹೂವುಗಳ ಬೆಳೆ ಚೆನ್ನಾಗಿ ಬಂದಿದೆ. ಬೆಲೆಯಲ್ಲಿ ಏರಿಳಿತವಾಗುತ್ತಿದೆ
ಇಮ್ತಿಯಾಜ್‌ ಚೆಂಗಾಪುರ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಧಾರವಾಡ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.