ADVERTISEMENT

ಹುಬ್ಬಳ್ಳಿ | ಮೇಲ್ಸೇತುವೆ ಕಾಮಗಾರಿ ವೇಗ ಹೆಚ್ಚಲಿ: ಸಚಿವ ಪ್ರಲ್ಹಾದ ಜೋಶಿ

ಪ್ರಗತಿ ಪರಿಶೀಲನಾ ಸಭೆ; ಕಾಮಗಾರಿಯ ಮಾಹಿತಿ ಪಡೆದ ಕೇಂದ್ರ ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 4:08 IST
Last Updated 7 ಜುಲೈ 2025, 4:08 IST
ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು 
ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು    

ಹುಬ್ಬಳ್ಳಿ: ‘ನಗರ ಮಧ್ಯಭಾಗದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಸವಾರರು ಹೈರಾಣಾಗುತ್ತಿದ್ದಾರೆ. ಕಾಮಗಾರಿಯ ವೇಗ ಹೆಚ್ಚಿಸಿ ಆದಷ್ಟು ಬೇಗ ಪೂರ್ಣಗೊಳಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿಯು ಉತ್ತರ ಕರ್ನಾಟಕ ಭಾಗದ ದೊಡ್ಡ ವ್ಯಾಪಾರ ಕೇಂದ್ರವಾಗಿದೆ. ಸಂಚಾರ ದಟ್ಟಣೆಯಿಂದಾಗಿ ವ್ಯಾಪಾರ ವಹಿವಾಟಿಗೆ ಸಮಸ್ಯೆಯಾಗುತ್ತಿದೆ. ಮೇಲ್ಸೇತುವೆ ಸಮಿತಿ ನೀಡಿರುವ ಮಾರ್ಗಸೂಚಿಯಂತೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಬಂದ್‌ ಮಾಡಿರುವ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಹಗಲು–ರಾತ್ರಿ ಕೆಲಸ ಮಾಡಿ ಯೋಜನೆಯಂತೆ ಕಾಮಗಾರಿ ಮುಗಿಸಿ’ ಎಂದು ಹೇಳಿದರು.

ಪಿ.ಎಂ. ವಿಶ್ವಕರ್ಮ ಯೋಜನೆ: ‘ಬಡವರಿಗೆ ಹಾಗೂ ವಿವಿಧ ವೃತ್ತಿಯಲ್ಲಿರುವವರಿಗೆ ಸ್ವ–ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡುವ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ವಿವಿಧ ಕೌಶಲ ತರಬೇತಿ ಪಡೆದ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸಲಾಗುತ್ತಿದೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಸಚಿವ ಜೋಶಿ ತರಾಟೆ ತೆಗೆದುಕೊಂಡರು.

ADVERTISEMENT

ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳ ಜತೆ ಯೋಜನೆ ಪ್ರಗತಿ ಕುರಿತು ಚರ್ಚಿಸಿದ ಅವರು, ‘ಪಿ.ಎಂ ವಿಶ್ವಕರ್ಮ ಯೋಜನೆಯಡಿ  ವಿವಿಧ ಚಟುವಟಿಕೆಗಳನ್ನು ನಡೆಸಲು ಬ್ಯಾಂಕ್‌ಗಳು ಆರ್ಥಿಕ ನೆರವು ನೀಡಬೇಕು. ಶಿಫಾರಸು ಮಾಡಲಾದ ಎಲ್ಲ ಅರ್ಜಿಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಬೇಕು’ ಎಂದು ಸೂಚಿಸಿದರು.

‘ಯೋಜನೆಯ ಫಲಾನುಭವಿಗಳಿಗೆ ಸಾಲ ನೀಡುವ ಸಂದರ್ಭದಲ್ಲಿ ಕೆಲವು ಬ್ಯಾಂಕ್‌ಗಳು ದುಬಾರಿ ಸ್ಟಾಂಪ್ ಶುಲ್ಕ ಪಡೆಯುತ್ತಿವೆ. ನಿಗದಿತ ಮೌಲ್ಯಕ್ಕಿಂತ ಹೆಚ್ಚಿಗೆ ಪಡೆಯುತ್ತಿರುವ ಬಗ್ಗೆ ಲಿಖಿತವಾಗಿ ದೂರು ಬಂದಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಶಾಸಕ ಅರವಿಂದ ಬೆಲ್ಲದ, ಉಪ ಮೇಯರ್ ಸಂತೋಷ ಚವಾಣ್‌,  ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಲೀಡ್ ಬ್ಯಾಂಕ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇಲ್ಸೇತುವೆ ಕಾಮಗಾರಿ: ಸಂಚಾರ ದಟ್ಟಣೆ ಕಿರಿಕಿರಿ | ಪಿ.ಎಂ. ವಿಶ್ವಕರ್ಮ ಯೋಜನೆ; ಅರ್ಜಿ ವಿಲೇವಾರಿ ಮಾಡಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವ ಜೋಶಿ
ಪಿ.ಎಂ. ವಿಶ್ವಕರ್ಮ ಯೋಜನೆಗೆ ಸಂಬಂಧಿಸಿ ಬ್ಯಾಂಕ್‌ಗಳು ತಿರಸ್ಕರಿಸಿರುವ ಪಟ್ಟಿಯನ್ನು ನೀಡಬೇಕು. ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು
ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಕ್ರಮಕ್ಕೆ ಜೋಶಿ ಸೂಚನೆ

‘ಪಿ.ಎಂ. ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ ಟೂಲ್‌ಕಿಟ್‌ ಮತ್ತು ಸ್ಟೈಫಂಡ್‌ ಇನ್ನೂ ತಲುಪಿಲ್ಲ. ತರಬೇತಿ ಕೇಂದ್ರಗಳನ್ನು ಯಾರು ಮೇಲ್ವಿಚಾರಣೆ ಮಾಡಬೇಕು ತರಬೇತಿ ಪಡೆದ ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲ ನೀಡದಿರುವುದು ಟೂಲ್‌ಕಿಟ್‌ನ ವೋಚರ್‌ ಮತ್ತು ಕ್ಯೂಆರ್ ಕೋಡ್ ಬಗೆಗಿನ ಗೊಂದಲ ಸೇರಿದಂತೆ ಅನೇಕ ಸಮಸ್ಯೆಗಳು ಇವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಏಕಗವಾಕ್ಷಿ ಪದ್ಧತಿ ಇಲ್ಲದಿರುವುದು ಸಹ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.