ADVERTISEMENT

ಅಳ್ನಾವರ | ಜಾನಪದಕ್ಕೆ ಕೆಟ್ಟ ಹೆಸರು ತರುತ್ತಿವೆ ಅಶ್ಲೀಲ ಸಾಹಿತ್ಯ: ಶಂಕರ ಹಲಗತ್ತಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:09 IST
Last Updated 22 ಡಿಸೆಂಬರ್ 2025, 6:09 IST
ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೂಲಿಕೇರಿಯಲ್ಲಿ ಆಯೋಜಿಸಿದ್ದ ಎನ್‍ಎಸ್‍ಎಸ್ ಶಿಬಿರದಲ್ಲಿ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿದರು
ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೂಲಿಕೇರಿಯಲ್ಲಿ ಆಯೋಜಿಸಿದ್ದ ಎನ್‍ಎಸ್‍ಎಸ್ ಶಿಬಿರದಲ್ಲಿ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿದರು   

ಅಳ್ನಾವರ: ‘ಮನುಷ್ಯನ ದೈನಂದಿನ ಚಟುವಟಿಕೆಗಳ ಪ್ರತಿಯೊಂದು ಹಂತದಲ್ಲಿ ಜಾನಪದ ಹಾಸುಹೊಕ್ಕಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರ ಬದುಕಲ್ಲಿ ಜಾನಪದ ಸೊಗಡು ಅಡಗಿದ್ದು, ಇದನ್ನು ಉಳಿಸಿ ಬೆಳೆಸಬೇಕು’ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ಹೂಲಿಕೇರಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ‘ಗ್ರಾಮೀಣ ಬದುಕಲ್ಲಿ ಜಾನಪದ’ ಕುರಿತು ಗುರುವಾರ ಉಪನ್ಯಾಸ ನೀಡಿ, ‘ಆಧುನಿಕ ಬದುಕಿನಿಂದ ಜಾನಪದ ನಶಿಸುತ್ತಿದೆ. ಪ್ರಾಚೀನ ಕಲೆಗಳನ್ನು ಉಳಿಸಿಕೊಳ್ಳಬೇಕು. ಆಧುನಿಕತೆಯ ಭರಾಟೆಯಲ್ಲಿ ಈ ನೆಲದ ಸಾಹಿತ್ಯ ಕಲೆಗಳು ಕಳೆದು ಹೋಗುತ್ತಿವೆ. ಜಾನಪದ ಎಂದರೆ ಅಶ್ಲೀಲ ಹಾಡುಗಳು ಎನ್ನುವ ಮಟ್ಟಕ್ಕೆ ಅವುಗಳನ್ನು ಹಾಳು ಮಾಡುತ್ತಿದ್ದಾರೆ’ ಎಂದು ವಿಷಾದಿಸಿದರು.

ಹಳಿಯಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪಿ.ಕೆ. ನಾಗರಾಳ ಮಾತನಾಡಿ, ‘ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದೆ. ಗಾಳಿಯನ್ನು ಖರೀದಿಸಿ ಸೇವಿಸುವ ಕಾಲ ಬರಬಹುದು, ಈಗಲೇ ಎಚ್ಚೆತ್ತುಕೊಂಡು ಅರಣ್ಯ ಬೆಳೆಸುವ ಪ್ರವೃತ್ತಿ ರೂಢಿಸಿಕೊಳ್ಳಬೇಕು’ ಎಂದರು.

ADVERTISEMENT

ಪರಿಸರವಾದಿ ಶಂಕರ ಕುಂಬಿ ಮಾತನಾಡಿ, ‘ಪ್ಲಾಸ್ಟಿಕ್ ಬಳಕೆ ಮಾನವನ ಬದುಕಿನ ಭಾಗವಾಗಿದ್ದು, ಅಪಾಯಕಾರಿ ಬೆಳವಣಿಗೆ. ಗಿಡಗಳನ್ನು ನೆಡುವ ನೆಪದಲ್ಲಿ ನಿರುಪಯುಕ್ತವಾದ ಆಕರ್ಷಣೀಯ ಗಿಡಗಳನ್ನು ಬೆಳೆಸುತ್ತಿದ್ದಾರೆ. ಬದಲಿಗೆ ಪ್ರಾಣಿಪಕ್ಷಿಗಳಿಗೆ ಅನುಕೂಲವಾಗುವಂತೆ ಹಣ್ಣಿನ ಗಿಡಗಳನ್ನು ನೆಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಹಾಗೂ ಎನ್‍ಎಸ್‍ಎಸ್ ಅಧಿಕಾರಿ ಈರಪ್ಪ ಪತ್ತಾರ ಮಾತನಾಡಿದರು.

ಆನಂದ ಸಬನೀಸ್, ಡಾ.ಸೌಂದರ್ಯ ಕಿತ್ತೂರ (ಗುರವ) ದಂಪತಿ, ಬಸವರಾಜ ಕುಬಸದ, ಶಿವನಪ್ಪ ಅಗಸರ, ಬಸವರಾಜ ಕಿತ್ತೂರ, ನಾಗಪ್ಪ ರಾಧಣ್ಣವರ, ಈರಪ್ಪ ತಾರೊಳ್ಳಿ, ಸಂತೋಷ ಕಂಬಾರ, ಶಂಕರ ಕುಮಾರ, ನಿಂಗಪ್ಪ ಹೂಗಾರ, ದೇವೇಂದ್ರ ತಳವಾರ, ವಿ.ಬಿ. ಪಾಟೀಲ ಇದ್ದರು.

ಇಮಾಮಸಾಬ ವಲ್ಲೆಪ್ಪನವರ ತಂಡದವರು ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.