ADVERTISEMENT

ಖಾಸಗೀಕರಣ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 15:28 IST
Last Updated 10 ಆಗಸ್ಟ್ 2021, 15:28 IST
ಹುಬ್ಬಳ್ಳಿಯಲ್ಲಿ ಮಂಗಳವಾರ ಎಐಯುಟಿಯುಸಿ ಸಂಯೋಜಿತ ಆಲ್ ಇಂಡಿಯಾ ಪವರ್ಮೆನ್‌ ಫೆಡರೇಷನ್ ಪದಾಧಿಕಾರಿಗಳು ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ಎಐಯುಟಿಯುಸಿ ಸಂಯೋಜಿತ ಆಲ್ ಇಂಡಿಯಾ ಪವರ್ಮೆನ್‌ ಫೆಡರೇಷನ್ ಪದಾಧಿಕಾರಿಗಳು ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ವಿದ್ಯುತ್‌ ವಲಯ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಆಲ್ ಇಂಡಿಯಾ ಪವರ್ಮೆನ್‌ ಫೆಡರೇಷನ್ (ಎಐಪಿಎಫ್) ಅಖಿಲ ಭಾರತ ಪ್ರತಿಭಟನಾ ದಿನವನ್ನಾಗಿ ಆಚರಿಸಲು ನೀಡಿದ ಕರೆಯ ಹಿನ್ನೆಲೆಯಲ್ಲಿ ಹೆಸ್ಕಾಂ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಎಲ್ಲಾ ಗುತ್ತಿಗೆ ನೌಕರರ ಸೇವೆ ಕಾಯಂ ಮಾಡಬೇಕು, ಲಾಕ್‌ಡೌನ್‌ ಅವಧಿಯಲ್ಲಿ ಕೇಂದ್ರ ಸರ್ಕಾರ ತುಂಬಿದ ನೌಕರರ ಪಾಲಿನ ಪಿಎಫ್‌ ಕಂತಿನ ಹಣವನ್ನು ನೌಕರರ ವೇತನಕ್ಕೆ ಜಮೆ ಮಾಡಬೇಕು, ಪರಿಷ್ಕೃತ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಕನಾಟಕ ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ನೌಕರರ ಸಂಘದ ಗಂಗಾಧರ ಬಡಿಗೇರ ಮಾತನಾಡಿ ‘ಈಗಾಗಲೇ ಕೃಷಿ ನೀತಿಗಳು ಸೇರಿದಂತೆ ವಿದ್ಯುತ್ ಮಸೂದೆ 2021ರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಕಾರ್ಮಿಕ ವರ್ಗ, ರೈತ ಸಮೂಹ ಹಾಗೂ ಜನತೆ ತನ್ನ ವಿರೋಧ ವ್ಯಕ್ತಪಡಿಸುತ್ತಿದೆ. ವಿದ್ಯುತ್ ವಲಯದ ನೌಕರರ ಐಕ್ಯ ಹೋರಾಟದ ಒತ್ತಡದಿಂದ ಕೇಂದ್ರವು ಸದ್ಯಕ್ಕೆ ಮಸೂದೆ ಮಂಡನೆ ತಡೆ ಹಿಡಿದಿದೆ’ ಎಂದರು.

ADVERTISEMENT

ಸಂಘದ ಜಿಲ್ಲಾ ಕಾರ್ಯದರ್ಶಿ ರಮೇಶ ಹೊಸಮನಿ ಮಾತನಾಡಿ ‘ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆಯಿಂದ ಒಂದೇ ಏಟಿಗೆ ಖಾಸಗಿ ಕುಳಗಳಿಗೆ ಒಪ್ಪಿಸುವ ದುರುದ್ದೇಶವನ್ನು ಸರ್ಕಾರ ಹೊಂದಿದೆ. ಇದರಿಂದ ಕೆಪಿಸಿಎಲ್, ಕೆಪಿಟಿಸಿಎಲ್, ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಹಾಗೂ ಜೆಸ್ಕಾಂ ಕಾರ್ಪೊರೇಟ್‌ ಕಂಪನಿಗಳ ಕೈವಶವಾಗುತ್ತಿವೆ. ಬಡವರಿಗಾಗಿ ಇದ್ದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳು ರದ್ದಾಗುತ್ತವೆ. ರೈತರ ಪಂಪ್‌ಸೆಟ್‌ಗಳಿಗೂ ಇದೇ ಗತಿಯಾದರೆ ಅನ್ನದಾತರು ಅಳಿವಿನ ಅಂಚಿಗೆ ಬರುತ್ತಾರೆ’ ಎಂದರು.

ಪಾರ್ವತಿ ಕೌದಿ, ಮಂಜುಳಾ ಪಾಟೀಲ, ವಿಜಯಲಕ್ಷ್ಮೀ ಕಲಬುರ್ಗಿ, ಮೌಲಾಸಾಬ ಕಿರೇಮನಿ, ಸುರೇಶಯ್ಯ ಚಿಕ್ಕಮಠ, ವಿಶಾಲ, ಪದ್ಮಾವತಿ ಎರತೋಟ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.