ADVERTISEMENT

ಹುಬ್ಬಳ್ಳಿ: ಮನೆ ಬಾಡಿಗೆ ಪಡೆಯುವ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 5:44 IST
Last Updated 22 ಅಕ್ಟೋಬರ್ 2021, 5:44 IST

ಹುಬ್ಬಳ್ಳಿ: ಮನೆ ಬಾಡಿಗೆ ಪಡೆಯಲು ಮುಂಗಡ ಹಣ ಕೊಡುವುದಾಗಿ ನಂಬಿಸಿ ಮನೆ ಮಾಲೀಕನ ಬ್ಯಾಂಕ್‌ ಖಾತೆ ಸಂಖ್ಯೆ ಪಡೆದು ವ್ಯಕ್ತಿಯೊಬ್ಬ ₹75 ಸಾವಿರ ವಂಚಿಸಿದ್ದಾನೆ.

ಇಲ್ಲಿನ ಶಕ್ತಿ ಕಾಲೊನಿಯ ಸಂತೋಷ ಎಸ್‌.ಎಂ. ಎಂಬುವವರು ಮ್ಯಾಜಿಕ್‌ ಬ್ರಿಕ್ಸ್‌ನಲ್ಲಿ ಮನೆ ಬಾಡಿಗೆ ಕೊಡುವುದಿದೆ ಎಂದು ಜಾಹೀರಾತು ನೀಡಿದ್ದರು. ಇದನ್ನು ನೋಡಿದ ವ್ಯಕ್ತಿಯೊಬ್ಬ ‘ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ಹುಬ್ಬಳ್ಳಿಗೆ ವರ್ಗವಾಗಿದ್ದು, ಇಲ್ಲಿಯೇ ಐದು ವರ್ಷ ಇರುತ್ತೇನೆ. ಮನೆ ಬಾಡಿಗೆಗೆ ಬೇಕಾಗಿದ್ದು, ಡಿಪಾಸಿಟ್‌ ಹಣವನ್ನು ಆರ್ಮಿ ರಿಲೋಕೇಷನ್‌ ಫಂಡ್ ಮೂಲಕ ಕಳುಹಿಸುತ್ತೇನೆ. ಆದ್ದರಿಂದ, ನಾನು ಕಳುಹಿಸುವ ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ಗೂಗಲ್‌ ಪೇನಲ್ಲಿ ಹಾಕಿ ಯುಪಿಐ ಪಿನ್‌ ಹಾಕಿ. ಇದರಿಂದ ನೇರವಾಗಿ ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ’ ಎಂದು ನಂಬಿಸಿದ್ದಾನೆ.

ಇದನ್ನು ಸತ್ಯವೆಂದು ತಿಳಿದ ಸಂತೋಷ ಯುಪಿಐ ಪಾಸ್‌ವರ್ಡ್‌ ಹಾಕಿದಾಗ ಆ ವ್ಯಕ್ತಿ ಮೂರು ಹಂತಗಳಲ್ಲಿ ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಕಮಿಷನ್‌ ನೆಪದಲ್ಲಿ ಮೋಸ: ಅಮೆಚಾಜ್‌ ಕಂಪನಿಯ ಉತ್ಪನ್ನಗಳನ್ನು ಮನೆಯಿಂದಲೇ ಮಾರಾಟ ಮಾಡಿದರೆ ಕಮಿಷನ್‌ ಸಿಗುತ್ತದೆ ಎಂಬು ನಂಬಿಸಿದ ವ್ಯಕ್ತಿಯೊಬ್ಬ ಧಾರವಾಡದ ರಾಜೇಶ್ವರಿ ವಿ.ಪಿ. ಎಂಬುವರಿಗೆ ₹1.09 ಲಕ್ಷ ವಂಚಿಸಿದ್ದಾನೆ.

ಮನೆಯಿಂದಲೇ ಆನ್‌ಲೈನ್‌ ಮೂಲಕ ಉದ್ಯೋಗ ಮಾಡಬಹುದು. ನಿಯಮಿತ ಆದಾಯ ಗಳಿಸಬಹುದು ಎಂದು ಮೊದಲು ನಂಬಿಸಿದ ವ್ಯಕ್ತಿ, ಆರಂಭದಲ್ಲಿ ಅಲ್ಪಮಟ್ಟಿಗೆ ಹಣ ನೀಡಿದ್ದಾರೆ. ಮತ್ತೆ ಕಮಿಷನ್‌ ಹಣ ಬೇಕಾದರೆ ಹಣ ನೀಡುವಂತೆ ಹೇಳಿ ಆರೋಪಿ ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ. ಪ್ರಕರಣ ದಾಖಲಾಗಿದೆ.

ಹೊಡೆದಾಟ: ಕೆ.ಬಿ. ನಗರದ ಸನಾದಿ ಅಪ್ಪಣ್ಣ ಸರ್ಕಲ್‌ ಬಳಿ ಗಣೇಶ ಕಾಳೆ ತಮಗೆ ಪರಿಚಯದ ಭೀಮರಾಯ ಸಾವೂರ ಜೊತೆ ತಮಾಷೆ ಮಾಡಿಕೊಂಡಿದ್ದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಭೀಮರಾಯ ಅವಾಚ್ಯ ಪದಗಳಿಂದ ನಿಂದಿಸಿ ರಕ್ತ ಬರುವಂತೆ ನನ್ನ ಹಣೆಗೆ ಹೊಡೆದಿದ್ದಾನೆ ಎಂದು ಗಣೇಶ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೈಕ್‌ ಮೇಲಿಂದ ಬಿದ್ದು ಗಾಯ: ವಿದ್ಯಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಶ್ರೀನಗರ ಕ್ರಾಸ್‌ನಿಂದ ತಾಜನಗರಕ್ಕೆ ಹೋಗುವ ಮಾರ್ಗದ ಚನ್ನಪ್ಪನ ಕೆರೆ ಹತ್ತಿರ ಜನೀತ್‌ ಎನ್ನುವ ವ್ಯಕ್ತಿಯೊಬ್ಬರು ಬೈಕ್‌ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ.

‘ಈ ಮಾರ್ಗದಲ್ಲಿ ಬೈಕ್‌ ಮೇಲೆ ಹೋಗುವಾಗ ಕೆಲವು ಜನ ಚಕ್ಕಡಿಗೆ ಕುದುರೆಗಳನ್ನು ಕಟ್ಟಿ ನಿರ್ಲಕ್ಷ್ಯದಿಂದ ಜೋರಾಗಿ ಓಡಿಸುತ್ತಿದ್ದರಿಂದ ಗಾಬರಿಯಾಗಿ ಬಿದ್ದಿದ್ದೇನೆ’ ಎಂದು ಜನೀತ್‌ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.