ADVERTISEMENT

ಹುಬ್ಬಳ್ಳಿ: ಹೆಚ್ಚು ಹಣದ ಆಮಿಷ ತೋರಿ ವಂಚನೆ

₹5 ಲಕ್ಷ ಮೌಲ್ಯದ ರಿಮೋಟ್‌ಗಳ ಕಳ್ಳತನದ ಆರೋಪಿ ಉತ್ತರ ಪ್ರದೇಶದಲ್ಲಿ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 7:44 IST
Last Updated 29 ಜನವರಿ 2022, 7:44 IST

ಹುಬ್ಬಳ್ಳಿ: ಹೆಚ್ಚು ಹಣ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಜನರಿಂದ ₹15ರಿಂದ ₹20 ಲಕ್ಷ ವಂಚಿಸಿದ ಘಟನೆ ನಡೆದಿದ್ದು, ಗೋಕುಲ ಠಾಣೆ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.

ಗೋಕುಲ ರಸ್ತೆಯ ರಾಮಲಿಂಗೇಶ್ವರ ನಗರ, ಕೊಳೆಗೇರಿ ನಿವಾಸಿಗಳು ಮತ್ತು ಕೂಲಿ ಕಾರ್ಮಿಕರಿಂದ ಹಣ ಸಂಗ್ರಹಿಸಿ ಹೆಚ್ಚು ಲಾಭ ಕೊಡುವುದಾಗಿ ನಂಬಿಸಿದ್ದು, ವಿಚಾರಣೆಯಿಂದ ಇನ್ನಷ್ಟು ಸಂಗತಿಗಳು ಹೊರಬರಬೇಕಿದೆ ಎಂದು ಠಾಣೆ ಇನ್‌ಸ್ಟೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ತಿಳಿಸಿದ್ದಾರೆ. ಮೂಲತಃ ಗದಗ ಜಿಲ್ಲೆ ಲಕ್ಕುಂಡಿಯ ಹೊಸಪ್ಲಾಟ್‌ ನಿವಾಸಿ ರಮೇಶ ನಾಗಲೋಟಿ ಬಂಧಿತ. ಸದ್ಯ ರಾಮಲಿಂಗೇಶ್ವರ ನಗರದಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ರಿಮೋಟ್‌ ವಶ: ನಗರದಲ್ಲಿ ವಾಹನಗಳ ರಿಮೋಟ್‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕಸಬಾಪೇಟೆ ಠಾಣೆ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯಿಂದ ₹5 ಲಕ್ಷ ಮೌಲ್ಯದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಘಟನೆ ನಡೆದ ಏಳೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ADVERTISEMENT

ಹೋಟೆಲ್‌ನಲ್ಲಿ ಆತ್ಮಹತ್ಯೆ: ಹಲವೆಡೆ ಸಾಲ ಮಾಡಿಕೊಂಡಿದ್ದ ರಾಣೆಬೆನ್ನೂರು ತಾಲ್ಲೂಕಿನ ಮಾಗೋಡದ ರೈತ ಸಂಜೀವ ಹಾದಿಮನಿ (26) ಕುಂದಗೋಳ ಕ್ರಾಸ್‌ನಲ್ಲಿರುವ ವೈಷ್ಣವಿ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೀವ ತನ್ನ ತಂದೆ ಹಾಗೂ ದೊಡ್ಡಪ್ಪನ ಹೆಸರಿನಲ್ಲಿ ಜಂಟಿಯಾಗಿರುವ ಹೊಲದ ಮೇಲೆ ₹3.5 ಲಕ್ಷ ಬೆಳೆ ಸಾಲ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ ತಾಲ್ಲೂಕಿನ ಪಾಳೆ ಗ್ರಾಮದ ರೈತ ಮಲ್ಲಿಕಾರ್ಜುನಗೌಡ ಹುಡೇದ (37) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇರೊಬ್ಬರ ಜಮೀನು ಲಾವಣಿ ಪಡೆದು, ಸಾಲ ಮಾಡಿ ಉಳುಮೆ ಮಾಡಿದ್ದರು. ಬೆಳೆ ಸರಿಯಾಗಿ ಬಾರದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ, ಸಾವು: ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಹೆಬಸೂರು ಗ್ರಾಮದ ಗೋಲ್ಡನ್‌ ಡಾಬಾ ಎದುರು ರಾತ್ರಿ ನಡೆದ ಅಪಘಾತದಲ್ಲಿ ನರಗುಂದದ ಪೀರಸಾಬ್‌ ಅಗಸರ (24) ಮೃತಪಟ್ಟಿದ್ದಾರೆ.

ನಲವಗುಂದ ತಾಲ್ಲೂಕಿನ ಸೊಟಕನಾಳ ಗ್ರಾಮದ ದಾವಲಸಾಬ್‌ ಕೊತಬಾಳ ಗಾಯಗೊಂಡಿದ್ದಾರೆ. ಹುಬ್ಬಳ್ಳಿ ಕಡೆಯಿಂದ ಬಂದ ಕಾರಿನ ಚಾಲಕ ಪೀರಸಾಬ್‌ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.

ಸುಲಿಗೆ: ಕಿಮ್ಸ್‌ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಸಹೋದರಿಯ ಆರೋಗ್ಯ ವಿಚಾರಿಸಲು ಇಲ್ಲಿಗೆ ಬಂದಿದ್ದ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನ ರೇವಣಸಿದ್ದಯ್ಯ ಛತ್ರಮಠ ಎಂಬುವರನ್ನು ಇಬ್ಬರು ವ್ಯಕ್ತಿಗಳು ಬೈಕ್‌ ಮೇಲೆ ಡ್ರಾಪ್ ಕೊಡುವ ನೆಪದಲ್ಲಿ ವಂಚಿಸಿದ್ದಾರೆ.

ಬೈಕ್‌ ಮೇಲೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ₹1,500 ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗೋವಾದಲ್ಲಿ ನೆಲೆಸಿರುವ ರೇವಣಸಿದ್ದಯ್ಯ ಬಸ್‌ನಲ್ಲಿ ಬಂದು ಹೊಸೂರು ವೃತ್ತದ ಬಳಿ ಆಟೊಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ: ಬ್ಯಾಂಕ್‌ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ನಗರದ ವ್ಯಕ್ತಿಯೊಬ್ಬರಿಂದ ₹7.65 ಲಕ್ಷ ಹಣವನ್ನು ಆನ್‌ಲೈನ್‌ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಲಾಗಿದೆ.

ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದ್ದು ಇದನ್ನು ಸರಿಪಡಿಸಲು, ನಿಮ್ಮ ಮೊಬೈಲ್‌ ಫೋನ್‌ಗೆ ಬಂದಿರುವ ಲಿಂಕ್‌ ಕ್ಲಿಕ್‌ ಮಾಡಬೇಕು ಎಂದು ನಂಬಿಸಿದ್ದಾನೆ. ಬಳಿಕ ಆ ವ್ಯಕ್ತಿಯಿಂದ ಬ್ಯಾಂಕ್‌ಗೆ ಸಂಬಂಧಿಸಿದ ಗುಪ್ತ ಮಾಹಿತಿಗಳನ್ನು ಪಡೆದು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್‌ ಬೈಕ್‌ಗೆ ಡಿಕ್ಕಿ: ಕೋವಿಡ್‌ ನಿಯಮ ಪಾಲಿಸದವರಿಗೆ ಎಚ್ಚರಿಕೆ ನೀಡುವ ಕರ್ತವ್ಯದಲ್ಲಿದ್ದ ಶಹರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಎಸ್‌.ಡಿ. ನದಾಫ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ ವ್ಯಕ್ತಿಯ ವಿರುದ್ಧ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಬಿಟಿ ಕಡೆಯಿಂದ ಶಹರ ಠಾಣೆ ರಸ್ತೆಯಲ್ಲಿ ಬರುತ್ತಿದ್ದ ಅರಳಿಕಟ್ಟಿ ಓಣಿ ನಿವಾಸಿ ರಿಯಾಜ್‌ ಅಹಮದ್‌ ಮುಜಾಹಿದ್‌ ಆರೋಪಿ. ಕೋಳಿಬಜಾರ್‌ ರಸ್ತೆಯಲ್ಲಿ ಬೈಕ್‌ ನಿಲ್ಲಿಸುವಂತೆ ಪೊಲೀಸ್ ಸೂಚಿಸಿದರೂ ನಿಲ್ಲದೆ ಪರಾರಿಯಾಗಲು ಯತ್ನಿಸಿದಾಗ ಈ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.