ಹುಬ್ಬಳ್ಳಿ: ‘ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆ (ಎಸ್‌ಸಿಎಸ್‌ಪಿ–ಟಿಎಸ್‌ಪಿ) ಕಾಯ್ದೆಯಡಿ ಮೀಸಲಾದ ನಿಧಿಯನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿಗೆ ಮಾತ್ರ ಬಳಸಬೇಕು’ ಎಂದು ಮಾದಿಗ ದಂಡೋರ (ಎಂಆರ್‌ಪಿಎಸ್) ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹39,121.46 ಕೋಟಿ ನಿಧಿಯಲ್ಲಿ ₹14,730.52 ಕೋಟಿಯನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಇದನ್ನು ಪ್ರಶ್ನಿಸಿ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು (ಎನ್‌ಸಿಎಸ್‌ಸಿ) ರಾಜ್ಯ ಸರ್ಕಾರಕ್ಕೆ ವರದಿ ನೀಡಲು ಸೂಚಿಸಿದ್ದು ಶ್ಲಾಘನೀಯ’ ಎಂದರು.
‘ಭಾರತೀಯ ಯೋಜನಾ ಆಯೋಗವು ನಿಗದಿಪಡಿಸಿದ್ದ ಮಾರ್ಗಸೂಚಿಯಂತೆ, ಈ ನಿಧಿಯನ್ನು ವರ್ಗಾಯಿಸಲಾಗದು ಹಾಗೂ ರದ್ದು ಮಾಡಲಾಗದು. ಎಸ್‌ಸಿ, ಎಸ್‌ಟಿ ಸಮುದಾಯಗಳಿಗಾಗಿಯೇ ಪ್ರತ್ಯೇಕ ಯೋಜನೆ ರೂಪಿಸಬೇಕು. ಬಡತನ ಹಾಗೂ ನಿರುದ್ಯೋಗ ನಿವಾರಣೆ, ಉತ್ಪಾದಕ ಆಸ್ತಿ ಸೃಷ್ಟಿ, ಶಿಕ್ಷಣ ಹಾಗೂ ಆರೋಗ್ಯ ಸೇವೆ, ಶೋಷಣೆ ವಿರುದ್ಧ ಭೌತಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಬೇಕು’ ಎಂದು ವಿವರಿಸಿದರು.
‘ಇದರ ಹೊರತಾಗಿ ವಿವಿಧ ಇಲಾಖೆಗಳ ಹಲವು ಯೋಜನೆಗಳಿಗೆ, ಕಳೆದ 10 ವರ್ಷಗಳಿಂದ ಈ ನಿಧಿ ಬಳಕೆಯಾಗುತ್ತಿದೆ. ಇದರಿಂದ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸತ್ಯನಾರಾಯಣ, ವಿಶ್ವನಾಥ ಬೂದೂರ್, ಹುಲುಗಪ್ಪ, ಪ್ರಕಾಶ ಗುಡಿಹಾಳ, ಕೃಷ್ಣ ಹಂದಿಗೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.