ADVERTISEMENT

ಮೌಲ್ಯ ಪ್ರಜ್ಞೆಯಿಂದ ಕಾವ್ಯ ಮೆರೆದಾಡಲಿ: ಕವಿ ಎಂ.ಡಿ. ಒಕ್ಕುಂದ

ಅಕ್ಷರ ಸಾಹಿತ್ಯ ವೇದಿಕೆ, ಪತ್ರಕರ್ತ ಸಾಹಿತ್ಯ ಕೂಟದಿಂದ ‘ಬಾಪೂ ನೆನಪು, ಕವಿಗೋಷ್ಠಿ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 4:31 IST
Last Updated 13 ಅಕ್ಟೋಬರ್ 2025, 4:31 IST
ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಭಾನುವಾರ ಅಕ್ಷರಸಾಹಿತ್ಯ ವೇದಿಕೆ ವತಿಯಿಂದ ‘ಬಾಪೂ ನೆನಪು, ಕವಿಗೋಷ್ಠಿ’ ನಡೆಯಿತು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಭಾನುವಾರ ಅಕ್ಷರಸಾಹಿತ್ಯ ವೇದಿಕೆ ವತಿಯಿಂದ ‘ಬಾಪೂ ನೆನಪು, ಕವಿಗೋಷ್ಠಿ’ ನಡೆಯಿತು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಸಾಂಸ್ಕೃತಿಕ ಅಶುದ್ಧಿ ಒಳಗಡೆ ಪ್ರವೇಶಿಸಿದಾಗ, ಕವಿತೆ ಮೂಲಕ ಶುದ್ಧೀಕರಿಸಲು ಮುಂದಾಗಬೇಕು. ಮೌಲ್ಯ, ಸಂವೇದನೆ, ಮಾನವೀಯತೆ ಮತ್ತು ಸೌಂದರ್ಯ ಪ್ರಜ್ಞೆಯಿಂದ ಕಾವ್ಯ ಮೆರೆದಾಡಬೇಕು’ ಎಂದು ಕವಿ ಎಂ.ಡಿ. ಒಕ್ಕುಂದ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಅಕ್ಷರ ಸಾಹಿತ್ಯ ವೇದಿಕೆ ಮತ್ತು ಪತ್ರಕರ್ತ ಸಾಹಿತ್ಯ ಕೂಟ ಭಾನುವಾರ ಹಮ್ಮಿಕೊಂಡಿದ್ದ ‘ಬಾಪೂ ನೆನಪು, ಕವಿಗೋಷ್ಠಿ’ಯಲ್ಲಿ ಅವರು ಮಾತನಾಡಿದರು. ‘ದೈನಂದಿನ ಬದುಕು, ಆಗುಹೋಗುಗಳು, ಸನ್ನಿವೇಶಗಳು ಸಹ ಕಾವ್ಯದ ಎಳೆಗಳಾಗುತ್ತವೆ. ಅನುಭವ ಮತ್ತು ಸೂಕ್ಷ್ಮತೆಗೆ ಸಾಹಿತ್ಯ ಸೇರಿ, ಪದಕಟ್ಟುವಿಕೆಯಲ್ಲಿ ಧ್ಯಾನಸ್ಥರಾದಾಗ ಚಂದದ ಕವಿತೆ ಹುಟ್ಟುತ್ತದೆ’ ಎಂದರು.

‘ಇತ್ತೀಚಿಗೆ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವುದು ಆತಂಕದ ಬೆಳವಣಿಗೆ. ಡಾ. ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆ ಮಾಡಿದ್ದ ಆರೋಪಿ, ಜೈಲಿನಿಂದ ಹೊರಬಂದಾಗ, ಸಂಭ್ರಮದಿಂದ ಮೆರವಣಿಗೆ ಮಾಡಿದರು. ಹಿಂಸೆಯನ್ನು ಒಪ್ಪಿಕೊಂಡು, ಅಪ್ಪಿಕೊಳ್ಳುವವರು ಈಗಲೂ ಇದ್ದಾರೆ. ಹಿಂಸೆ ಅನಿವಾರ್ಯ, ಸ್ವೀಕರಿಸಲೇಬೇಕು ಎನ್ನುವ ಮನಸ್ಥಿತಿ ಅವರದ್ದಾಗಿದೆ. ಗಾಂಧಿ ನಾಡಲ್ಲಿ ಸಾಂಸ್ಕೃತಿಕ ಮೌಲ್ಯ, ಮಾನವೀಯತೆ ಅಧಃಪತನವಾಗುತ್ತಿರುವುದು ನೋವಿನ ಸಂಗತಿ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಎಂ.ಡಿ. ಅಡ್ನೂರ, ‘ಗಾಂಧೀಜಿ ಅವರ ಕುರಿತು ವಾಚಿಸಿದ್ದ ಕವಿತೆಗಳು ಅರ್ಥಪೂರ್ಣವಾಗಿದ್ದವು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಮುಂದಿಟ್ಟುಕೊಂಡು ರಚಿಸಿರುವ ಕವಿತೆ, ಅವರ ಬದುಕು ಮತ್ತು ವ್ಯಕ್ತಿತ್ವದ ಪ್ರತಿರೂಪದಂತಿದ್ದವು’ ಎಂದರು.

ಮಲ್ಲಮ್ಮ ಯಾಟಗಲ್, ಪ್ರಕಾಶ ಕಡಮೆ, ನಿರ್ಮಲಾ ಶೆಟ್ಟರ್, ರಮಜಾನ್ ಕಿಲ್ಲೆದಾರ, ಗೋವಿಂದ ಹೆಗಡೆ, ಪ್ರೊ. ಎಸ್.ಆರ್. ಆಶಿ, ವೀರೇಶ ಹಂಡಗಿ, ತೇಜಾವತಿ ಎಚ್.ಡಿ, ಚೆನ್ನಪ್ಪ ಅಂಗಡಿ, ರೂಪಾ ಜೋಶಿ, ವೈಭವ್ ಪೂಜಾರ, ಗಾಯತ್ರಿ ರವಿ, ಸುಶೀಲೇಂದ್ರ ಕುಂದರಗಿ, ಸಿ.ಎಂ. ಮುನಿಸ್ವಾಮಿ, ಸಿ.ಎಂ. ಚನ್ನಬಸಪ್ಪ, ರಾಜು ದರ್ಗಾದವರ, ಶಿವರಾಮ ಅಸುಂಡಿ, ಗುರುನಾಥ ಗಬ್ಬೂರ, ವೆಂಕಟೇಶ ಮರೆಗುದ್ದಿ, ಬಸು ಬೇವಿನಗಿಡದ, ಚಿದಾನಂದ ಕಮ್ಮಾರ, ವಿರೂಪಾಕ್ಷ ಕಟ್ಟಿಮನಿ ಕವಿತೆ ವಾಚಿಸಿದರು.

ಮಹಾಂತಪ್ಪ ನಂದೂರು, ಸುನಂದಾ ಕಡಮೆ, ವಿರೂಪಾಕ್ಷ ಕಟ್ಟಿಮನಿ ಇದ್ದರು.

‘ಸಂಘಟನೆ ಹತ್ತಿಕ್ಕುವ ಷಡ್ಯಂತ್ರ’

‘ಬಲಾಢ್ಯ ಶಕ್ತಿಗಳು ಎಲ್ಲ ಸಂಘಟನೆಗಳನ್ನು ಹತ್ತಿಕ್ಕುವ ಷಡ್ಯಂತ್ರ ನಡೆಸುತ್ತಿವೆ. ಗಾಂಧಿ ಚಿಂತನೆಗಳು ಕ್ರಿಯಾಶೀಲವಾಗದಂತೆ ನೋಡಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಅಹಿಂಸೆಯನ್ನು ಮೆಟ್ಟಿ ಹಿಂಸೆಯನ್ನು ಪ್ರತಿಷ್ಠಾಪಿಸುವುದು ಹೇಗೆನ್ನುವ ಬಗ್ಗೆ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಬೇಕು. ಮಹಾತ್ಮನನ್ನು ಒಳಗೊಳ್ಳದೆ ಯಾವ ವಾದವೂ ಚಿಂತನೆಯೂ ರೂಪಿಸಲು ಸಾಧ್ಯವಿಲ್ಲ. ಅವರ ಹತ್ಯೆ ಮಾನವೀಯ ಮತ್ತು ಮೌಲ್ಯದ ಹತ್ಯೆಯಾಗಿದೆ’ ಎಂದು ಕವಿ ಎಂ.ಡಿ. ಒಕ್ಕುಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.