ADVERTISEMENT

ಬ್ಯಾಗಿನಲ್ಲಿ ಗಾಂಜಾ: ಕೆಲ ಹೊತ್ತು ಆತಂಕ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 12:03 IST
Last Updated 14 ಸೆಪ್ಟೆಂಬರ್ 2021, 12:03 IST

ಹುಬ್ಬಳ್ಳಿ: ಅಮರಾವತಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯೊಂದರಲ್ಲಿ ಬಿಟ್ಟು ಹೋಗಿದ್ದ ಎರಡು ಬ್ಯಾಗ್‌ಗಳು ರೈಲ್ವೆ ಪೊಲೀಸ್‌, ಆರ್‌ಪಿಎಫ್‌ ಸಿಬ್ಬಂದಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳನ್ನು ಕೆಲಹೊತ್ತು ಆತಂಕಕ್ಕೆ ನೂಕಿದ ಪ್ರಸಂಗ ನಡೆದಿದೆ.

ಶನಿವಾರ ಬೆಳಿಗ್ಗೆ 8.40ಕ್ಕೆ ಅಮರಾವತಿ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದಿದ್ದು, ಎಸ್‌ 10ರ ಬೋಗಿಯಲ್ಲಿ ಟ್ರಾಲಿ ಬ್ಯಾಗ್‌ ಮತ್ತು ಬ್ಯಾಕ್‌ ಪ್ಯಾಕ್‌ ಬ್ಯಾಗ್‌ ಅಲ್ಲಿಯೇ ಇದ್ದವು. ಅದನ್ನು ಗಮನಿಸಿದ ಟಿಕೆಟ್‌ ಪರೀಕ್ಷಕ ರಾಘವೇಂದ್ರ ಆರ್‌.ಜಿ. ಅವರು, ರೈಲ್ವೆ ಅಧೀಕ್ಷಕರ ಕೊಠಡಿಯಲ್ಲಿ ಇಟ್ಟು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರ್‌ಪಿಎಫ್‌, ಪೊಲೀಸ್‌ ಸಿಬ್ಬಂದಿ ಮತ್ತು ಶ್ವಾನ ದಳವನ್ನು ಕರೆಸಿ, ಪರಿಶೀಲನೆಗೆ ಒಳಪಡಿಸಿದರು. ಅಪಾಯವಿಲ್ಲ ಎಂದು ಖಾತ್ರಿಪಡಿಸಿಕೊಂಡು ಆರ್‌ಪಿಎಫ್‌ ಸಿಬ್ಬಂದಿ. ಬ್ಯಾಗ್‌ ತೆರೆದಾಗ ಎಂಟು ಪೊಟ್ಟಣದಲ್ಲಿ ₹1.20 ಲಕ್ಷ ಮೌಲ್ಯದ 15 ಕೆ.ಜೆ. ಹಸಿ ಗಾಂಜಾ ಇರುವುದು ಪತ್ತೆಯಾಗಿದೆ. ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಬಟ್ಟೆ ವ್ಯಾಪಾರಿಗೆ ಜೀವ ಬೆದರಿಕೆ: ಖರೀದಿಸಿ ಬಟ್ಟೆಯ ಹಣ ನೀಡು ಎಂದು ದೂರವಾಣಿಯಲ್ಲಿ ಕೇಳಿದ್ದಕ್ಕೆ ನಗರದ ಬಟ್ಟೆ ವ್ಯಾಪಾರಿ ರಾಮನಿವಾಸ ಪರೀಕ್‌ ಅವರಿಗೆ ಶಿರಸಿಯ ಬಟ್ಟೆ ವ್ಯಾಪಾರಿ ಸೋನು ಬಿಷ್ಣೋವಿ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ್ದಾನೆ.

ರಾಮನಿವಾಸ ಅವರ ದೇಶಪಾಂಡೆ ನಗರದಲ್ಲಿರುವ ಓಂ ಹೋಜರಿ ಹೆಸರಿನ ಸಗಟು ಅಂಗಡಿಯಿಂದ ಆರೋಪಿ ಸೋನು ಮೂರು ವರ್ಷಗಳಿಂದ ಸಾಲ ಮಾಡಿ ಬಟ್ಟೆ ಖರೀದಿಸುತ್ತಿದ್ದ. ಬಾಕಿಯಿರುವ ₹45 ಸಾವಿರ ನೀಡುವಂತೆ ದೂರವಾಣಿಯಲ್ಲಿ ಕೇಳಿದಾಗ ಅವಾಚ್ಯವಾಗಿ ಬೈದು, ಶಿರಸಿಗೆ ಬಂದರೆ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಿ ನೆಪದಲ್ಲಿ ಚಾಕು ಇರಿತ: ಹುಬ್ಬಳ್ಳಿಯ ಇಂದ್ರಪ್ರಸ್ಥ ನಗರದ ಜಮೀರ್‌ಅಹ್ಮದ್‌ ಲಕ್ಕುಂಡಿ ಮತ್ತು ಆನಂದ ನಗರದ ಇಸ್ಮಾಯಿಲ್‌ ಧಾರವಾಡ ಸೇರಿ ರೆಹಮತ್‌ ನಗರದ ದೀಪಕ ಮುಧೋಳಕರ ಅವರನ್ನು ಚಾಕುವಿನಿಂದ ಇರಿದಿದ್ದಾರೆ.

ಜಮೀರ್‌ಅಹ್ಮದ್‌, ಇಸ್ಮಾಯಿಲ್‌ ಇಬ್ಬರೂ ದೀಪಕ ಅವರಿಗೆ ಪರಿಚಯಸ್ಥರಾಗಿದ್ದು, ಕಾರಣವಿಲ್ಲದೆ ತಂಟೆ ತೆಗೆದಿದ್ದಾರೆ. ನಂತರ ರಾಜಿ ಮಾಡಿಕೊಳ್ಳೋಣ ಎಂದು ಅರ್ಜುನ ನಗರದ ಖಾಲಿ ಜಾಗಕ್ಕೆ ಬರಲು ತಿಳಿಸಿದ್ದರು. ಆಗ ದೀಪಕ ಮೇಲೆ ಕೈಯಿಂದ ಹಲ್ಲೆ ನಡೆಸಿ, ಚಾಕುವಿಂದ ಬೆನ್ನಿಗೆ ಇರಿದಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳವು:ಮರಾಠ ಗಲ್ಲಿಯ ರಾಜೇಶ ಮಾನೆ ಅವರ ಮನೆಯಲ್ಲಿ ಕಳವು ನಡೆದಿದೆ. 8 ಗ್ರಾಂ ಚಿನ್ನ, 110 ಗ್ರಾಂ ಬೆಳ್ಳಿ, ಒಂದು ಮೊಬೈಲ್‌, ₹51 ಸಾವಿರ ನಗದು ದೋಚಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹65 ಸಾವಿರ ವಂಚನೆ: ಸಿಮ್‌ ಬ್ಲಾಕ್‌ ತೆಗೆಯಲು ಕೆವೈಸಿ ಅಪ್‌ಡೇಟ್‌ ಮಾಡಬೇಕು ಎಂದು ಮೊರಾರ್ಜಿ ನಗರದ ವೈದ್ಯ ಫಕ್ಕಿರೇಶ ನೇಕಾರ ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ ವಂಚಕ, ₹65 ಸಾವಿರ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಕಳವು ಆರೋಪಿ ಬಂಧನ: ಕಳವು ಮಾಡಿದ ಬೈಕ್‌ನಲ್ಲಿ ಒಡಾಡುತ್ತಿದ್ದ ಆರೋಪಿ, ಚಾಲುಕ್ಯ ನಗರದ ನಿವಾಸಿ ನೆಹಮಿಯಾ ದಾರ್ಲಾನನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿ, ₹40 ಸಾವಿರ ಮೌಲ್ಯದ ಬೈಕ್‌ ವಶಪಡಿಸಿಕೊಂಡಿದ್ದಾರೆ.

ಅರವಿಂದ ನಗರದ ನಾಗೇಶ ದೇವಾಡಿಗ ಅವರು ಮನೆ ಎದುರು ನಿಲ್ಲಿಸಿಟ್ಟಿದ್ದ ಬೈಕ್‌ ಅನ್ನು ನೆಹಮಿಯಾ ಕಳವು ಮಾಡಿದ್ದ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್‌ ಕಾರ್ಯಾಚರಣೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.