ADVERTISEMENT

ಅಂತರರಾಜ್ಯ ಗಾಂಜಾ ಮಾರಾಟ ಜಾಲ ಭೇದಿಸಿದ ಪೊಲೀಸ್

‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಸಿಕ್ಕ ಮಾಹಿತಿ ಆಧರಿಸಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 9:41 IST
Last Updated 16 ಜನವರಿ 2019, 9:41 IST
ಹುಬ್ಬಳ್ಳಿ– ಧಾರವಾಡ ಕಮಿಷನರೇಟ್ ಪೊಲೀಸರು ಬಂಧಿಸಿರುವ ಗಾಂಜಾ ಮಾರಾಟ ಪ್ರಕರಣದ ಆರೋಪಿಗಳು. ಇನ್‌ಸ್ಪೆಕ್ಟರ್ ವಿನೋದ್ ಮೊಕ್ತೇದಾರ್‌, ಡಿಸಿಪಿ ರವೀಂದ್ರ ಗಡಾದಿ, ಕಮಿಷನರ್ ಎಂ.ಎನ್. ನಾಗರಾಜ, ಡಿಸಿಪಿ ಬಿ.ಎಸ್. ನೇಮಗೌಡ, ಇನ್‌ಸ್ಪೆಕ್ಟರ್ ಮಾರುತಿ ಎಸ್ ಗುಳ್ಳಾರಿ ಇದ್ದಾರೆ– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ– ಧಾರವಾಡ ಕಮಿಷನರೇಟ್ ಪೊಲೀಸರು ಬಂಧಿಸಿರುವ ಗಾಂಜಾ ಮಾರಾಟ ಪ್ರಕರಣದ ಆರೋಪಿಗಳು. ಇನ್‌ಸ್ಪೆಕ್ಟರ್ ವಿನೋದ್ ಮೊಕ್ತೇದಾರ್‌, ಡಿಸಿಪಿ ರವೀಂದ್ರ ಗಡಾದಿ, ಕಮಿಷನರ್ ಎಂ.ಎನ್. ನಾಗರಾಜ, ಡಿಸಿಪಿ ಬಿ.ಎಸ್. ನೇಮಗೌಡ, ಇನ್‌ಸ್ಪೆಕ್ಟರ್ ಮಾರುತಿ ಎಸ್ ಗುಳ್ಳಾರಿ ಇದ್ದಾರೆ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಅಂತರರಾಜ್ಯ ಗಾಂಜಾ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹1 ಲಕ್ಷ ಮೌಲ್ಯದ 14 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

‘ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ’ದಲ್ಲಿ ಭಾಗವಹಿಸಿದ್ದ ಕಮಿಷನರ್ ಎಂ.ಎನ್‌. ನಾಗರಾ‌ಜ ಅವರಿಗೆ ಹುಬ್ಬಳ್ಳಿಯ ನಾಗರಿಕರೊಬ್ಬರು ಗಾಂಜಾ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದರು. ಅದೇ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂ.ಎನ್. ನಾಗರಾಜ, ‘ಗಾಂಜಾ ಮಾರಾಟದ ಬಗ್ಗೆ ನಮಗೂ ಕೆಲ ದಿನಗಳಿಂದ ಮಾಹಿತಿ ಇತ್ತು. ಆದರೆ ಆರೋಪಿಗಳ ವರೆಗೆ ತಲುಪಲು ಸಾಧ್ಯವಾಗಿರಲಿಲ್ಲ. ‘ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ’ದಲ್ಲಿ ಭಾಗವಹಿಸಿದ್ದ ವೇಳೆ ಕರೆ ಮಾಡಿದ ವ್ಯಕ್ತಿಯೊಬ್ಬರು ಗಾಂಜಾ ಮಾರಾಟದ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸೆದವು’ ಎಂದರು.

ADVERTISEMENT

‘ಆಂಧ್ರಪ್ರದೇಶದಿಂದ ಗಾಂಜಾ ತರುತ್ತಿದ್ದ ಆರೋಪಿಗಳು ಅದನ್ನು ಹಳೇ ಹುಬ್ಬಳ್ಳಿ, ಹಳಿಯಾಳ, ದಾಂಡೇರಿ ಮುಂತಾದೆಡೆ ಮಾರಾಟ ಮಾಡುತ್ತಿದ್ದರು. ಸ್ಥಳೀಯರನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಬಸ್ ಮತ್ತು ರೈಲಿನ ಮೂಲಕ ಸಾಗಣೆ ಮಾಡುತ್ತಿದ್ದರು. ಆದ್ದರಿಂದ ರೈಲ್ವೆ ರಕ್ಷಣಾ ದಳದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ನಿಗಾ ವಹಿಸುವಂತೆ ಮನವಿ ಮಾಡಲಾಗಿದೆ. ರೈಲ್ವೆ ಪೊಲೀಸರಿಗೂ ಪತ್ರ ಬರೆಯಲಾಗಿದೆ’ ಎಂದರು.

‘ದಾಂಡೇಲಿ, ಹಳಿಯಾಳದ ಕೆಲವು ಕಡೆ ಗಾಂಜಾ ಬೆಳೆಯುತ್ತಿರುವ ಬಗ್ಗೆ ಈ ಹಿಂದೆ ಮಾಹಿತಿ ಸಿಕ್ಕಿತ್ತು. ಅದನ್ನು ಆಧರಿಸಿ ಪರಿಶೀಲನೆ ನಡೆಸಿದ್ದರೂ ಪತ್ತೆಯಾಗಿರಲಿಲ್ಲ’ ಎಂದರು.

‘ಮಾದಕ ವಸ್ತುಗಳ ಬಗ್ಗೆ ಜನರಲ್ಲಿ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಧಾರವಾಡದಲ್ಲಿ ಇದೇ 18ರಂದು ವಿದ್ಯಾರ್ಥಿಗಳ ಜಾಥಾ ಹಮ್ಮಿಕೊಳ್ಳಲಾಗಿದ್ದು, ಸುಮಾರು 5 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವರು’ ಎಂದರು.

ಆಂಧ್ರಪ್ರದೇಶದ ವಿಶಾಖಪಟ್ಟಣದ ರೋಶನ್ (24), ಹಳೇ ಹುಬ್ಬಳ್ಳಿಯ ಸಚಿನ (22), ಹೆಗ್ಗೇರಿಯ ಅಜಯ (25), ಗಿರಿಯಾಲ ಗ್ರಾಮದ ಕಾಳಪ್ಪ (76) ಮತ್ತು ಹಳಿಯಾಳದ ಕಾವಲವಾಡದ ಮೆಹಬೂಬಸಾನಿ (48) ಬಂಧಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.