
ಹುಬ್ಬಳ್ಳಿ: ‘ಬೇರೆ ದೇಶದಿಂದ ಹೋಗಿ ಜರ್ಮನ್ ದೇಶದಲ್ಲಿ ನೆಲೆನಿಂತ ಕುಟುಂಬಗಳ ಯಾವುದೇ ನಿರ್ಧಾರದಲ್ಲಿ ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳು ದಟ್ಟವಾದ ಪ್ರಭಾವ ಬೀರುತ್ತವೆ. ಟರ್ಕಿ ದೇಶದ ಕುಟುಂಬವೊಂದರ ಅನುಭವದ ಕತೆಯನ್ನು ‘ಫಾಟರ್‌ಮಾಲ್’ ಕಾದಂಬರಿ ಒಳಗೊಂಡಿದೆ’ ಎಂದು ಬೆಂಗಳೂರಿನ ಸಾಹಿತಿ ಹರ್ಷ ರಘುರಾಮ್ ಹೇಳಿದರು.
ಇಲ್ಲಿನ ಸಪ್ನ ಬುಕ್ ಹೌಸ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಹುಟ್ಟು ಮಚ್ಚೆ’ ಅನುವಾದ ಪುಸ್ತಕದ ಕುರಿತಾದ ‘ಸಾಹಿತ್ಯ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜರ್ಮನಿಯ ಕಾದಂಬರಿಕಾರ ನೇಜಾತಿ ಒಝರಿ 2023ರಲ್ಲಿ ‘ಫಾಟರ್ ಮಾಲ್’ ಕಾದಂಬರಿ ಬರೆದಿದ್ದು, ನಾನು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಕನ್ನಡದಲ್ಲಿ ಇದಕ್ಕೆ ‘ಹುಟ್ಟು ಮಚ್ಚೆ’ ಎಂದು ಹೆಸರಿಡಲಾಗಿದೆ. ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ಕೃತಿ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.
‘ಜರ್ಮನ್ ದೇಶದ ನಾಟಕ ಕ್ಷೇತ್ರದಲ್ಲಿ ನೆಜಾತಿ ಒಝೀರಿ ಅವರು ಪ್ರಖ್ಯಾತರಾಗಿದ್ದು, ಇದು ಅವರ ಮೊದಲ ಕಾದಂಬರಿಯಾಗಿದೆ. ಈ ಕಾದಂಬರಿಯೂ ಸಾಕಷ್ಟು ಮನ್ನಣೆ ಪಡೆದಿದೆ. ಈ ಕಾದಂಬರಿಗೆ ಜರ್ಮನಿಯ ರೂರ್ ಪ್ರಾಂತ್ಯದ ಸಾಹಿತ್ಯ ಪ್ರಶಸ್ತಿ ಮತ್ತು ಫ್ರೀಡ್ರಿಕ್ ಹೋಲ್ಡರ್ಲಿನ್ ಪ್ರಶಸ್ತಿ ನೀಡಲಾಗಿದೆ. ಈ ಕೃತಿಯಲ್ಲಿ ಟರ್ಕಿ ಕುಟುಂಬದ ಕತೆಯನ್ನು ಮನಮುಟ್ಟುವಂತೆ ಕೃತಿಕಾರರು ನಿರೂಪಿಸಿದ್ದಾರೆ. ಅತ್ಯುತ್ತಮವಾದ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು ವಿಶೇಷವಾಗಿದೆ’ ಎಂದರು.
ಸಾಹಿತಿ ಬಸು ಬೇವಿನಗಿಡದ ಅವರು ಅನುವಾದಿತ ಕೃತಿ ಕುರಿತು ಮಾತನಾಡಿ, ‘ಜರ್ಮನ್ ದೇಶದಲ್ಲಿದ್ದುಕೊಂಡು ಟರ್ಕಿಯ ವ್ಯಕ್ತಿಯೊಬ್ಬರು ಅಲ್ಲಿನ ಪ್ರಜೆ ಆಗುವುದಕ್ಕೆ ಅನುಭವಿಸಿದ ಸಂಕಷ್ಟ, ತಳಮಳ ಹಾಗೂ ಎದುರಿಸಿದ ತೊಂದರೆಗಳನ್ನೆಲ್ಲ ಈ ಕೃತಿಯಲ್ಲಿ ಕತೆಯಾಗಿ ನೀಡಲಾಗಿದೆ. ವಿದೇಶದ ಜೀವನ ಮೇಲ್ನೊಟ್ಟಕ್ಕೆ ಉತ್ತಮವಾಗಿ ಕಾಣುತ್ತದೆ. ಆದರೆ, ಅಲ್ಲಿ ಅನುಭವಿಸುವ ಸಮಸ್ಯೆಗಳ ಸರಮಾಲೆಗಳ ಸತ್ಯವನ್ನು ಈ ಕಾದಂಬರಿ ಅನಾವರಣ ಮಾಡಲಾಗಿದೆ‘ ಎಂದು ಹೇಳಿದರು.
ಸಪ್ನ ಬುಕ್ ಹೌಸ್ ಹುಬ್ಬಳ್ಳಿ ಘಟಕದ ವ್ಯವಸ್ಥಾಪಕ ರಘು ಎಂ.ವಿ. ಅವರು, ‘ಯುವ ಬರಹಗಾರರು ನಿಜವಾಗಿಯೂ ಉತ್ತಮವಾಗಿ ಬರೆಯುತ್ತಿದ್ದು, ಒಳ್ಳೆಯ ಪುಸ್ತಕಗಳು ಹೊರಬರುತ್ತಿವೆ. ಯುವ ಓದುಗರು ಕೂಡಾ ಇಂತಹ ಪುಸ್ತಕಗಳನ್ನು ಖರೀದಿಸಿ ಓದುತ್ತಿರುವುದು ಸಂತೋಷ ಸಂಗತಿಯಾಗಿದೆ’ ಎಂದರು.