ADVERTISEMENT

ಅರ್ಹತೆ ಜತೆಗೆ, ಕೌಶಲಾಭಿವೃದ್ಧಿಗೂ ಒತ್ತು ನೀಡಿ

ದೇಶಪಾಂಡೆ ಫೌಂಡೇಷನ್‌ ಸಂಸ್ಥಾಪಕ ಗುರುರಾಜ ದೇಶಪಾಂಡೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 10:08 IST
Last Updated 13 ಜುಲೈ 2019, 10:08 IST
ದೇಶಪಾಂಡೆ ಫೌಂಡೇಷ್‌ನ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪೌಂಡೇಷನ್‌ನ ಸಂಸ್ಥಾಪಕ ಗುರುರಾಜ ದೇಶಪಾಂಡೆ, ಟ್ರಸ್ಟಿ ಸುಶೀಲ್ ವಚಾನಿ ಹಾಗೂ ಸಿಇಒ ವಿವೇಕ್ ಪವಾರ್ ಇದ್ದಾರೆ
ದೇಶಪಾಂಡೆ ಫೌಂಡೇಷ್‌ನ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪೌಂಡೇಷನ್‌ನ ಸಂಸ್ಥಾಪಕ ಗುರುರಾಜ ದೇಶಪಾಂಡೆ, ಟ್ರಸ್ಟಿ ಸುಶೀಲ್ ವಚಾನಿ ಹಾಗೂ ಸಿಇಒ ವಿವೇಕ್ ಪವಾರ್ ಇದ್ದಾರೆ   

ಹುಬ್ಬಳ್ಳಿ: ‘ವಿದ್ಯಾರ್ಥಿಗಳ ಮುಂದೆ ಅನೇಕ ಅವಕಾಶಗಳಿವೆ. ಆದರೆ, ಅವುಗಳನ್ನು ಪಡೆಯುವುದು ಹೇಗೆ ಎಂಬುದು ಅವರಿಗೆ ಗೊತ್ತಿಲ್ಲ. ಪಠ್ಯದಲ್ಲಿ ಪಾರಮ್ಯ ಸಾಧಿಸಿರುವ ಅವರಿಗೆ ಉದ್ಯೋಗ ಪಡೆಯಲು ಬೇಕಾದ ಅಗತ್ಯ ಕೌಶಲ ಇಲ್ಲ. ಈ ನಿಟ್ಟಿನಲ್ಲಿ ಅರ್ಹತೆ ಜತೆಗೆ, ಬೇಕಾದ ಕೌಶಲ ತರಬೇತಿಯನ್ನು ನಮ್ಮ ಫೌಂಡೇಷನ್‌ ನೀಡುತ್ತಿದೆ’ ಎಂದು ದೇಶಪಾಂಡೆ ಫೌಂಡೇಷನ್‌ನ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದರು.

ದೇಶಪಾಂಡೆ ಫೌಂಡೇಷನ್‌ನ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರೈಸಿದ 58 ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಹತೆ ಜತೆಗೆ, ಉತ್ತಮ ಕೌಶಲವಿರುವ ಉದ್ಯೋಗಿಗಳನ್ನು ಕಂಪನಿಗಳು ನಿರೀಕ್ಷಿಸುತ್ತವೆ. ಆದರೆ, ನಮ್ಮಲ್ಲಿ ವಿದ್ಯಾರ್ಹತೆ ಇರುವವರು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ, ಉದ್ಯೋಗವೊಂದಕ್ಕೆ ಬೇಕಾದ ಕೌಶಲ ಹೊಂದಿರುವವರು ಸಿಗುತ್ತಿಲ್ಲ’ ಎಂದರು.

‘ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಕಾಲೇಜುಗಳ ಸಹಯೋಗದೊಂದಿಗೆ ಬಡ ವಿದ್ಯಾರ್ಥಿಗಳಿಗೆ ಕೌಶಾಲಭಿವೃದ್ದಿ ತರಬೇತಿ ನೀಡಲಾಗುತ್ತಿದೆ. ಸದ್ಯ 58 ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ತರಬೇತಿ ನೀಡಲಾಗುತ್ತಿದ್ದು, ಮುಂದೆ ವಿದ್ಯಾರ್ಥಿಗಳ ಸಂಖ್ಯೆಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಲಾಗುವುದು’ ಎಂದು ಹೇಳಿದರು.

ADVERTISEMENT

ಫೌಂಡೇಷನ್‌ನ ಕಾರ್ಯನಿರ್ವಾಹಕಾಧಿಕಾರಿ ವಿವೇಕ್ ಪವಾರ್ ಮಾತನಾಡಿ, ‘ಪ್ರಾಯೋಗಿಕವಾಗಿ ಎಲಿವೆಟ್ ತರಬೇತಿ ಕಾರ್ಯಕ್ರಮವನ್ನು ಗದಗದ ಎಎಸ್‌ಎಸ್‌ ವಾಣಿಜ್ಯ ಕಾಲೇಜು ಹಾಗೂ ಶಿಗ್ಗಾವಿಯ ಜಿಎಫ್‌ಜಿಸಿ ಕಾಲೇಜಿನ ಸಹಯೋಗದಲ್ಲಿ ಆರಂಭಿಸಿ ಯಶಸ್ಸು ಕಂಡಿದ್ದೇವೆ. ಈ ವರ್ಷ ತರಬೇತಿ ಪಡೆದವರ ಪೈಕಿ ಶೇ 80ರಷ್ಟು ಮಂದಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ’ ಎಂದರು.

‘ಕಾರ್ಯಕ್ರಮದ ಭಾಗವಾಗಿ ನಮ್ಮ ಸಿಬ್ಬಂದಿ ಈಗಾಗಲೇ ಕೆಲ ಕಾಲೇಜುಗಳಿಗೆ ಭೇಟಿ ನೀಡಿ, ನಿತ್ಯ ಎರಡು ತಾಸು ಕೌಶಲ ತರಬೇತಿ ನೀಡುತ್ತಿದ್ದಾರೆ. ಇಂಗ್ಲಿಷ್ ಸಂವಹನ, ಕಂಪ್ಯೂಟರ್ ಜ್ಞಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ತರಬೇತಿ ಪಡೆದಿರುವ ವಿದ್ಯಾರ್ಥಿಗಳು, ಕ್ಯಾಂಪಸ್ ನೇಮಕಾತಿಯಲ್ಲಿ ಉದ್ಯೋಗ ಪಡೆದಿದ್ದಾರೆ. ಹಾಗಾಗಿ, ಎಲಿವೆಟ್ ಕಾರ್ಯಕ್ರಮವನ್ನು ಮುಂದೆ ಗ್ರಾಮೀಣ ಭಾಗದ ಮತ್ತಷ್ಟು ಕಾಲೇಜುಗಳಿಗೆ ವಿಸ್ತರಿಸುವ ಯೋಜನೆ ಇದೆ’ ಎಂದು ತಿಳಿಸಿದರು.

ಫೌಂಡೇಷನ್‌ನ ಟ್ರಸ್ಟಿ ಸುಶೀಲ್ ವಚಾನಿ, ‘ಕಲಿಕೆಗೆ ನಿರ್ದಿಷ್ಟ ವಯಸ್ಸಿಲ್ಲ. ಬದುಕಿನುದ್ದಕ್ಕೂ ನಾವು ಕಲಿಯುತ್ತಲೇ ಇರಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ತಮ್ಮ ಬದುಕಿನ ಗತಿಯನ್ನು ಬದಲಿಸಿದವರನ್ನು ವಿದ್ಯಾರ್ಥಿಗಳು ಮರೆಯಬಾರದು. ಬದುಕು ರೂಪಿಸಿದವರಿಗೆ ಸದಾ ಕೃತಜ್ಞರಾಗಿರಬೇಕು’ ಎಂದು ಕಿವಿಮಾತು ಹೇಳಿದರು.

ಗದುಗಿನ ಎಎಸ್‌ಎಸ್‌ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುದ್ದ, ‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಂಗ್ಲಿಷ್‌ ಮಾತನಾಡುವುದಿರಲಿ, ವೇದಿಕೆ ಮೇಲೆ ಬರುವುದಕ್ಕೂ ಭಯಪಡುತ್ತಿದ್ದರು. ಅಂತಹವರು ಕೇವಲ ಎರಡು ತಿಂಗಳಲ್ಲಿ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದಾರೆ. ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಇದರ ಶ್ರೇಯಸ್ಸು ದೇಶಪಾಂಡೆ ಫೌಂಡೇಷನ್‌ಗೆ ಸಲ್ಲಬೇಕು’ ಎಂದು ಕೃತಜ್ಞತೆ ಸಲ್ಲಿಸಬೇಕು.

ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ವಿವಿಧ ಕಾಲೇಜುಗಳ ಪ್ರಾಚಾರ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.