ADVERTISEMENT

ಬ್ಯಾಡ್ಮಿಂಟನ್‌ನಲ್ಲಿ ಗ್ಲೋರಿಯಾ ಅಠವಾಲೆ ಸಾಧನೆ

ಸತೀಶ ಬಿ.
Published 26 ಜುಲೈ 2025, 5:53 IST
Last Updated 26 ಜುಲೈ 2025, 5:53 IST
ಗ್ಲೋರಿಯಾ ಅಠವಾಲೆ
ಗ್ಲೋರಿಯಾ ಅಠವಾಲೆ   

ಹುಬ್ಬಳ್ಳಿ: ನಗರದ ಗ್ಲೋರಿಯಾ ಅಠವಾಲೆ ಬ್ಯಾಡ್ಮಿಂಟನ್‌ನಲ್ಲಿ ಭರವಸೆ ಮೂಡಿಸಿದ್ದು, ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ.

ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ಪದಕ ಗೆದ್ದಿರುವ ಗ್ಲೋರಿಯಾ, ಸದ್ಯ ಮಹಿಳೆಯರ ವಿಭಾಗದ (ಡಬಲ್ಸ್‌) ರಾಜ್ಯ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.   

ಹುಬ್ಬಳ್ಳಿಯ ಉಣಕಲ್‌ ಕ್ರಾಸ್‌ನ ಸಾಯಿನಗರದಲ್ಲಿರುವ ನಾರಾಯಣ ಪೇಟ್ಕರ್‌ ಮಂಜುನಾಥ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅವರು, ನಗರದ ಐಬಿಎಂಆರ್‌ ಕಾಲೇಜಿನಲ್ಲಿ ಬಿಎ ಮುಗಿಸಿದ್ದಾರೆ. 

ADVERTISEMENT

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ರಾಜ್ಯ ಜೂನಿಯರ್, ಸೀನಿಯರ್‌ ರ‍್ಯಾಂಕಿಂಗ್ ಟೂರ್ನಿಯಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ. 2023ರಲ್ಲಿ ತಮಿಳುನಾಡಿನಲ್ಲಿ ನಡೆದ ಸೌತ್ ಜೋನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌, 2019ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ 65ನೇ ರಾಷ್ಟ್ರೀಯ ಸ್ಕೂಲ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗಳಿದ್ದಾರೆ.

‘ನನ್ನ ತಂದೆ ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗಿಯಾಗಿದ್ದು, ಅವರು ಸಹ ಕ್ರೀಡಾಪಟು. ಚಿಕ್ಕವಳಿದ್ದಾಗ ಮನೆಯಲ್ಲಿ ಬ್ಯಾಡ್ಮಿಂಟನ್‌ ಆಡುತ್ತಿದ್ದೆ. ನನ್ನ ಆಸಕ್ತಿ ಗುರುತಿಸಿ ಐದನೇ ತರಗತಿಯಲ್ಲಿದ್ದಾಗ ವೃತ್ತಿಪರ ತರಬೇತಿಗೆ ನಾರಾಯಣ ಪೇಟ್ಕರ್ ಮಂಜುನಾಥ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಿಸಿದರು’ ಎನ್ನುತ್ತಾರೆ ಗ್ಲೋರಿಯಾ.

ನಂತರ 2020ರಿಂದ 2024ರವರೆಗೆ ಬೆಂಗಳೂರಿನ ಅನೂಪ್‌ ಶ್ರೀಧರ್‌ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆದೆ. ಸದ್ಯ ಮಂಜುನಾಥ ಪೇಟ್ಕರ್‌ ಅವರ ಬಳಿ ಬ್ಯಾಡ್ಮಿಂಟನ್‌, ಡೇನಿಯಲ್ ಸುಳ್ಳದ ಬಳಿ ಫಿಟ್‌ನೆಸ್ ತರಬೇತಿ ಪಡೆಯುತ್ತಿದ್ದೇನೆ ಎಂದರು.

ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಭಾಗವಹಿಸುವ ಜತೆಗೆ ಮುಂದೆ ಎಂಬಿಎ ಓದಬೇಕು ಅಂದುಕೊಂಡಿದ್ದೇನೆ. ಅಂತರರಾಷ್ಟ್ರೀಯ ಟೂರ್ನಿಗಳಿಗೆ ಹೆಚ್ಚಿನ ತರಬೇತಿ ಅಗತ್ಯ. ಅದರೆ, ಆರ್ಥಿಕ ಸಮಸ್ಯೆಯಿಂದ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನನ್ನ ಸಹೋದರಿ ಸಹ ರಾಜ್ಯಮಟ್ಟದ ಫುಟ್‌ಬಾಲ್‌ ಟೂರ್ನಿಗಳಲ್ಲಿ ಆಡಿದ್ದಾರೆ. ನಾನು ಕ್ರೀಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ತಂದೆಯ ಆಸೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ’ ಎಂದರು.

‘ಗ್ಲೋರಿಯಾ ರಾಜ್ಯ, ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾಳೆ. ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಡಿದರೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗುತ್ತವೆ. ರ‍್ಯಾಂಕಿಂಗ್ ಸಹ ಉತ್ತಮವಾಗುತ್ತದೆ’ ಎಂದು ತರಬೇತುದಾರ ಮಂಜುನಾಥ ಪೇಟ್ಕರ್ ತಿಳಿಸಿದರು.

ಗ್ಲೋರಿಯಾ ಅಠವಾಲೆ
ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಈವರೆಗೆ ಭಾಗವಹಿಸಿದ ಟೂರ್ನಿಗಳಲ್ಲಿ ಅಗ್ರ 16ರೊಳಗೆ ಸ್ಥಾನ ಪಡೆದಿದ್ದೇನೆ. ಈ ಸಾಧನೆಯನ್ನು ಇನ್ನೂ ಉತ್ತಮ ಪಡಿಸಿ ಪದಕ ಗೆಲ್ಲುವ ಗುರಿ ಇದೆ 
ಗ್ಲೋರಿಯಾ ಅಠವಾಲೆ ಬ್ಯಾಡ್ಮಿಂಟನ್ ಆಟಗಾರ್ತಿ
ಗ್ಲೋರಿಯಾ 12 ವರ್ಷಗಳಿಂದ ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಅವರಲ್ಲಿದೆ
ಮಂಜುನಾಥ ಪೇಟ್ಕರ್‌ ತರಬೇತುದಾರ, ನಾರಾಯಣ ಪೇಟ್ಕರ್‌ ಬ್ಯಾಡ್ಮಿಂಟನ್‌ ಅಕಾಡೆಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.