ADVERTISEMENT

ಹುಬ್ಬಳ್ಳಿ | ‘ಶಿಕ್ಷಕರು ರಾಜಕೀಯ ಪಕ್ಷಕ್ಕೆ ಅಂಟಿಕೊಳ್ಳದಿರಿ’: ಸಂತೋಷ ಲಾಡ್‌

ಮಾಧ್ಯಮಿಕ ಶಾಲಾ ನೌಕರರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 4:42 IST
Last Updated 31 ಆಗಸ್ಟ್ 2025, 4:42 IST
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಹುಬ್ಬಳ್ಳಿ ತಾಲ್ಲೂಕು ಮಾಧ್ಯಮಿಕ ಶಾಲಾ ನೌಕರರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ‘ಸುವರ್ಣ ಸಹಕಾರ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಹುಬ್ಬಳ್ಳಿ ತಾಲ್ಲೂಕು ಮಾಧ್ಯಮಿಕ ಶಾಲಾ ನೌಕರರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ‘ಸುವರ್ಣ ಸಹಕಾರ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ‘ದೇಶದ ಭವಿಷ್ಯ ರೂಪಿಸುವ ಶಿಕ್ಷಕರು ಯಾವುದೇ ಪಕ್ಷ, ರಾಜಕೀಯ ನಾಯಕರೊಂದಿಗೆ ಗುರುತಿಸಿಕೊಳ್ಳಬಾರದು. ಶಿಕ್ಷಣ ಪ್ರಗತಿಯ ಸಂಕೇತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಹುಬ್ಬಳ್ಳಿ ತಾಲ್ಲೂಕು ಮಾಧ್ಯಮಿಕ ಶಾಲಾ ನೌಕರರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಕರ ಆಚಾರ, ವಿಚಾರ, ನಡೆ, ವರ್ತನೆಗಳೇ ಮಕ್ಕಳಿಗೆ ಮಾದರಿಯಾಗಿರಬೇಕು. ಮುಂದಿನ ಪೀಳಿಗೆಯ ಬಗ್ಗೆ ಶಿಕ್ಷಕರು ಆಲೋಚನೆ ಮಾಡದಿದ್ದರೆ, ವಿಚಾರ ವಿನಿಮಯ ಮಾಡಿಕೊಳ್ಳದಿದ್ದರೆ ಯುವಸಮುದಾಯ ಉದ್ಧಾರವಾಗಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಸಾಕಷ್ಟು ಸಹಕಾರ ಸಂಘಗಳು ಹುಟ್ಟುತ್ತವೆ. ಅಷ್ಟೇ ಬೇಗ ನಷ್ಟ ಅನುಭವಿಸುತ್ತವೆ. ಆದರೆ, ಶಿಕ್ಷಕರ ಸಹಕಾರ ಸಂಘ 50 ವರ್ಷ ಪೂರೈಸಿ, ಮುನ್ನಡೆಯುತ್ತಿದೆ. ಸಂಘದ ಧ್ಯೇಯೋದ್ದೇಶ ಮಾರ್ಗದರ್ಶಿಯಾಗಿದೆ’ ಎಂದು ಅಭಿಪ್ರಾಯಪಟ್ಟರು. 

‘ದೇಶದಲ್ಲಿ ಶೇ 74ರಷ್ಟು ಸಾಕ್ಷರತೆ ಪ್ರಮಾಣವಿದ್ದರೂ ನಾವು, ಅನಕ್ಷರಸ್ಥರಂತೆ ಬದುಕುತ್ತಿದ್ದೇವೆ. ಬದುಕಿನ ಧ್ಯೇಯ, ಉದ್ದೇಶ ಕ್ಷೀಣಿಸಿದೆ. ಸ್ವಹಿತಾಸಕ್ತಿಯೇ ಮುಖ್ಯವಾಗಿದೆ. ಬೇರೆ ದೇಶಗಳು ಸಾಧನೆಯ ಉತ್ತುಂಗದಲ್ಲಿದ್ದರೆ, ನಾವು ಹಿಂದೂ–ಮುಸ್ಲಿಂ ಎಂದು ಕಚ್ಚಾಡುತ್ತಿದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಗ, ‘ಹಿಂದಿನ ಕಾಲದಲ್ಲಿ ಶಿಕ್ಷಕರು ಅನುಭವಿಸಿದ ಕಷ್ಟ ಈಗಿನ ಶಿಕ್ಷಕರಿಗಿಲ್ಲ. ಸೌಲಭ್ಯಗಳ ಜತೆಗೆ, ಉತ್ತಮ ವೇತನ ಇದೆ. ಸಮಸ್ಯೆ ಎದುರಾಯಿತೆಂದರೆ ಸಂಘದ ಮೂಲಕ ಪರಿಹರಿಸಿಕೊಳ್ಳಬಹುದು. ಶಿಕ್ಷಕರು ಕೆಲವು ಬಾರಿ ನಿಯಮಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ಆವಾಸ್‌ ನಿರ್ಮಾಣ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಕುರಹಟ್ಟಿ, ಎಸ್.ವಿ. ಪಟ್ಟಣಶೆಟ್ಟಿ, ಜಿ.ಆರ್. ಭಟ್, ಸಿ.ಎನ್. ಅಷ್ಟಗಿಮಠ, ಎಫ್.ಬಿ. ಬೀರವಳ್ಳಿ, ಬಿ.ಜಿ. ಪಾಟೀಲ, ವಿ.ಬಿ. ಹಾಗರಗಿ, ಶಾಂತಯ್ಯ ತಂಬೂರ, ರವಿಕುಮಾರ ಸಿನ್ನೂರ, ವಸಂತ ಹೊರಟ್ಟಿ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಇದ್ದರು. 

ಸಹಕಾರ ಪತ್ತಿನ ಸಂಘ ನಿರ್ಮಾಣಕ್ಕೆ ಸಾಕಷ್ಟು ಹೋರಾಡಿದ್ದೇವೆ. ಈ ಹೋರಾಟದಿಂದ ಇಂದು ಶಿಕ್ಷಕರಿಗೆ ಭದ್ರ ಬುನಾದಿ ದೊರಕಿದೆ
ಬಸವರಾಜ ಹೊರಟ್ಟಿ ಸಭಾಪತಿ ವಿಧಾನ ಪರಿಷತ್‌

‘ಹೊರಟ್ಟಿ ಅವಿರೋಧ ಆಯ್ಕೆಗೆ ಶ್ರಮ’:

‘ಸುವರ್ಣ ಸಹಕಾರ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿ ‘ಇದು ಸ್ಪರ್ಧಾತ್ಮಕ ಯುಗವಾಗಿದ್ದು ಶಿಕ್ಷಕರು ಸಾಕಷ್ಟು ಓದಿಕೊಂಡಿರಬೇಕು. ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದು ಭವ್ಯ ಭಾರತ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು. ‘ಶಿಕ್ಷಕರ ಧ್ವನಿಯಾಗಿರುವ ಬಸವರಾಜ ಹೊರಟ್ಟಿ ಅವರನ್ನು ಮುಂದಿನ ಬಾರಿ ವಿಧಾನ ಪರಿಷತ್‌ಗೆ ಅವಿರೋಧವಾಗಿ ಆಯ್ಕೆ ಮಾಡಲು ಪಕ್ಷಾತೀತವಾಗಿ ನಾವು ಶ್ರಮಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.