ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜನವರಿ 15ರಿಂದ ಮಾರ್ಚ್ 15ರವರೆಗೆ ಹಮ್ಮಿಕೊಂಡಿದ್ದ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ5ರಷ್ಟು ಹೆಚ್ಚಿಸುವುದು ಕಾಯಕೋತ್ಸವ ಅಭಿಯಾನದ ಮುಖ್ಯ ಉದ್ದೇಶ.
ಮೊದಲ ಹಂತದ ಅಭಿಯಾನದಲ್ಲಿ 28 ಗ್ರಾಮ ಪಂಚಾಯಿತಿ, 2ನೇ ಹಂತದಲ್ಲಿ 35 ಗ್ರಾಮ ಪಂಚಾಯಿತಿಗಳಲ್ಲಿ ಕಾಯಕೋತ್ಸವ ನಡೆಯಿತು. ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಮಹಿಳೆಯರ ಸಮೀಕ್ಷೆ, ಕೂಲಿಕಾರ್ಮಿಕರನ್ನು ಗುರುತಿಸುವುದರ ಜತೆಗೆ ನರೇಗಾ ಜಾಬ್ ಕಾರ್ಡ್‍ಗಳ ವಿತರಣೆ ಹಾಗೂ ಮಾನವ ದಿನಗಳನ್ನು ಸೃಜಿಸಿ ಕೂಲಿ ಕೆಲಸ ನೀಡಲು ಕ್ರಮ ಕೈಗೊಳ್ಳಲಾಯಿತು.
ಯೋಜನೆಯಡಿ ಮಹಿಳೆಯರು ತೋಟಗಾರಿಕೆ, ಅರಣ್ಯೀಕರಣ, ರೇಷ್ಮೆ ಕಾಮಗಾರಿಗಳಿಗೆ ಗುಂಡಿ ತೆಗೆಯುವುದು, ಬದು ನಿರ್ಮಾಣ, ಕೃಷಿ ಹೊಂಡ, ಮೀನಿನ ಹೊಂಡ ನಿರ್ಮಾಣ, ಭೂ-ಅಭಿವೃದ್ಧಿ ಚಟುವಟಿಕೆಗಳು, ಕೆರೆ ಹೂಳೆತ್ತುವುದು, ನೀರಿನ ಸಂರಕ್ಷಣೆ ಕಾಮಗಾರಿಗಳು, ವೈಯಕ್ತಿಕ ಕಾಮಗಾರಿಗಳನ್ನು ನಿರ್ವಹಿಸಿದರು.
ಹೆಚ್ಚಿದ ಬೇಡಿಕೆ: ಅಭಿಯಾನಕ್ಕೂ ಮುನ್ನ 8,79,954 ಮಾನವ ದಿನಗಳನ್ನು ಸೃಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 2 ಹಂತಗಳಲ್ಲಿ ಕಾಯಕೋತ್ಸವ ಅಭಿಯಾನ ಮಾಡಿದ್ದರಿಂದ ಕೆಲಸಕ್ಕೆ ಬೇಡಿಕೆ ಸಲ್ಲಿಸುವವರ ಸಂಖ್ಯೆ ಅಧಿಕವಾಗಿದ್ದರಿಂದ 9,14,166 ಮಹಿಳಾ ಮಾನವ ದಿನಗಳನ್ನು ಸೃಜಿಸಲಾಯಿತು.
ತಿರ್ಲಾಪೂರ, ಬೆಳಹಾರ, ತುಪ್ಪದಕುರಹಟ್ಟಿ, ಕ್ಯಾರಕೊಪ್ಪ, ನಿಗದಿ, ಮರೆವಾಡ, ಇಬ್ರಾಹಿಂಪೂರ, ಕಡಬಗಟ್ಟಿ, ಸಾಸ್ವಿಹಳ್ಳಿ, ಗುಡಿಸಾಗರ ಜಾವೂರ ಬೆಳಹಾರ ಹಿರೆಹೊನ್ನಳ್ಳಿ, ಗಂಜಿಗಟ್ಟಿಯಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿದ್ದು, ಅಭಿಯಾನ ಪ್ರಗತಿ ಸಾಧಿಸಿದೆ.
ಅಭಿಯಾನ ಆರಂಭಗೊಂಡ ಪ್ರಥಮ ಹಂತದ ಮೊದಲ ತಿಂಗಳು 7 ತಾಲ್ಲೂಕುಗಳ 28 ಗ್ರಾಮ ಪಂಚಾಯಿತಿಗಳಲ್ಲಿ 5,442 ಜನ ಮಹಿಳಾ ಕಾರ್ಮಿಕರು ಕಾರ್ಯ ನಿರ್ವಹಿಸಿದ್ದಾರೆ. 2ನೇ ತಿಂಗಳು 5,334 ಜನ ಮಹಿಳೆಯರು ಕಾರ್ಯ ನಿರ್ವಹಿಸಿದರು.
2,642 ಮಂದಿ ಕಾಯಕೋತ್ಸವ ಅಭಿಯಾನದಲ್ಲಿ ಉದ್ಯೋಗ ಚೀಟಿ ಪಡೆದುಕೊಂಡಿದ್ದಾರೆ.
‘ದುಡಿಯೋಣ ಬಾ’ ಅಭಿಯಾನ
ಧಾರವಾಡ ಜಿಲ್ಲೆಯ ಎಲ್ಲ ತಾಲ್ಲೂಕುಗಳ 144 ಗ್ರಾಮ ಪಂಚಾಯಿತಿಗಳ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ವಲಸೆ ಹೋಗುತ್ತಿವೆ. ಇದನ್ನು ತಡೆಯಲು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜನರಿಗೆ ಸ್ಥಳೀಯವಾಗಿ ಕೆಲಸ ಒದಗಿಸಲಾಗುತ್ತಿದೆ.
ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯಾವುದೇ ಉದ್ಯೋಗ ದೊರೆಯದೇ ಇರುವ ಕಾರಣ, ಈ ಯೋಜನೆಯಡಿ ನಿರಂತರ ಕೆಲಸ ಒದಗಿಸುವ ಉದ್ದೇಶದಿಂದ ಮಾರ್ಚ್ 15ರಿಂದ 3 ತಿಂಗಳವರೆಗೆ ‘ದುಡಿಯೋಣ ಬಾ’ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಅಧಿಕಾರಿ ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಕಾಯಕೋತ್ಸವ ಅಭಿಯಾನ ಯಶ್ವಸಿಗೊಂಡು ಶೇ 52.54ರಷ್ಟು ಪ್ರಗತಿಯಾಗಿದೆ.
–ಡಾ. ಬಿ.ಸುಶೀಲಾ, ಸಿಇಒ, ಜಿಲ್ಲಾ ಪಂಚಾಯ್ತಿ, ಧಾರವಾಡ.
ಅಂಕಿ–ಅಂಶ
2,642
ಕಾಯಕೋತ್ಸವ ಅಭಿಯಾನದಲ್ಲಿ ಉದ್ಯೋಗ ಚೀಟಿ ಪಡೆದುಕೊಂಡವರು
4,818
ಮಹಿಳೆಯರು
2,065
ಪುರುಷರು
3,69,016
ಉದ್ಯೋಗ ಖಾತ್ರಿಯಡಿ ಜಾಬ್ ಕಾರ್ಡ್ ಪಡೆದವರು
1,66,655
ಮಹಿಳಾ ಕಾರ್ಮಿಕರು
1,49,561
ಸಕ್ರಿಯ ಕಾರ್ಮಿಕರು
65,076
ಸಕ್ರಿಯ ಮಹಿಳಾ ಕಾರ್ಮಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.