ADVERTISEMENT

ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರ ಬದ್ಧ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 11 ಮೇ 2021, 4:12 IST
Last Updated 11 ಮೇ 2021, 4:12 IST
ಹುಬ್ಬಳ್ಳಿ ಪ್ರವಾಸಿ ಮಂದಿರದ ಹೊರಾಂಗಣದಲ್ಲಿ ಸೋಮವಾರ ಸಚಿವ ಜಗದೀಶ ಶೆಟ್ಟರ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದಾರೆ
ಹುಬ್ಬಳ್ಳಿ ಪ್ರವಾಸಿ ಮಂದಿರದ ಹೊರಾಂಗಣದಲ್ಲಿ ಸೋಮವಾರ ಸಚಿವ ಜಗದೀಶ ಶೆಟ್ಟರ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದಾರೆ   

ಹುಬ್ಬಳ್ಳಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದ ಆಕ್ಸಿನ್ ಸರಬರಾಜು ಮಾಡಿ, ಆಕ್ಸಿಜನ್ ಕೊರತೆ ನೀಗಿಸಲು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು, ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ಸಮನ್ವಯಗೊಳಿಸಿ ಆಕ್ಸಿಜನ್ ವಿತರಣೆ ಸರಬರಾಜನ್ನು ಕ್ರಮಬದ್ಧಗೊಳಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ನಗರದ ಪ್ರವಾಸಿ ಮಂದಿರದ ಹೊರಾಂಗಣದಲ್ಲಿ ಸೋಮವಾರ ಲಾಕ್‌ಡೌನ್ ಹಾಗೂ ಜಿಲ್ಲೆಯ ಆರೋಗ್ಯ ಸ್ಥಿತಿಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ‘ಜಿಲ್ಲೆಯಲ್ಲಿ 14 ದಿನ ಕಠಿಣ ಲಾಕ್‌ಡೌನ್ ಜಾರಿ ಮಾಡಲಾಗುತ್ತಿದೆ. ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿ, ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಅನಗತ್ಯವಾಗಿ ಹೊರಗಡೆ ತಿರುಗಾಡದೆ, ಮನೆಯಲ್ಲಿಯೇ ಇರಬೇಕು. 14 ದಿನ ನಮ್ಮನ್ನು ನಾವು ನಿಯಂತ್ರಿಸಿದರೆ, ಕೊರೊನಾ ವೈರಸ್‌ನ್ನು ನಿಯಂತ್ರಿಸಿದಂತೆಯೇ’ ಎಂದರು.

‘ಬಡಾವಣೆಗಳಿಗೆ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಲು ಅವಕಾಶ ಕಲ್ಪಿಸಲಾಗಿದೆ. ದಿನಸಿ ವಸ್ತುಗಳು ಸಹ ಬಡಾವಣೆಗಳಲ್ಲಿ ಸಿಗುವ ವ್ಯವಸ್ಥೆ ಮಾಡಬೇಕು. ಜನರು ಅಗತ್ಯ ವಸ್ತಗಳ ಖರೀದಿಗೆ ಬೀದಿಗೆ ಬರುವುದನ್ನು ತಪ್ಪಿಸಬೇಕಿದೆ. ಕಿರಾಣಿ ಅಂಗಡಿಗಳಿಗೆ ನಿಶ್ಚಿತವಾದ ಗ್ರಾಹರು ಇರುತ್ತಾರೆ. ಅವರಿಂದ ಫೋನ್‌ನಲ್ಲಿ ಆರ್ಡರ್ ಪಡೆದು ಮನೆಗೆ ದಿನಸಿ ಕಳುಹಿಸಿದರೆ ಅನುಕೂಲವಾಗುತ್ತದೆ. ಗ್ರಾಹರು ಅಗತ್ಯ ವಸ್ತುಗಳು, ಔಷಧಗಳ ನೆಪ ಮಾಡಿ ಓಡಾಡಬಾರದು’ ಎಂದು ಹೇಳಿದರು.

ADVERTISEMENT

ಶಾಸಕ ಪ್ರಸಾದ ಅಬ್ಬಯ್ಯ, ‘ಕಿಮ್ಸ್‌ನಲ್ಲಿ ಸಾಮಾನ್ಯ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಅದಕ್ಕಾಗಿ, ಎಸ್.ಎಂ. ಕೃಷ್ಣನಗರ ಹಾಗೂ ಸೋನಿಯಾ ಗಾಂಧಿ ನಗರದಲ್ಲಿ ತಲಾ ₹75 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉದ್ಘಾಟಿಸಿ ಸಾಮಾನ್ಯ ಆರೋಗ್ಯ ತಪಾಸಣಾ ಕೇಂದ್ರವನ್ನಾಗಿ ಬಳಸಿಕೊಳ್ಳಬೇಕು ಎಂದು ವಿನಂತಿಸಿದರು.

50 ಸಾವಿರ ಔಷಧ ಕಿಟ್ ವಿತರಣೆ: ಜಿಲ್ಲೆಯಲ್ಲಿ 25 ರಿಂದ 50 ಸಾವಿರ ಕೋವಿಡ್ ಔಷಧಿಗಳ ಕಿಟ್‌ಗಳನ್ನು ತಯಾರಿಸಿ ಮನೆಗಳಿಗೆ ತೆರಳಿ ಹಂಚಲು ತಯಾರಿ ನಡೆಸಲಾಗುತ್ತಿದೆ. ಈ ಕುರಿತು ಕರ್ನಾಟಕ ರಾಜ್ಯ ಔಷಧ ಉಗ್ರಾಣದಿಂದ ಅಗತ್ಯವಿರುವ ವಿಟಮಿನ್‌ ಹಾಗೂ ಜಿಂಕ್ ಸೇರಿದಂತೆ ಇತರೆ ಔಷಧಗಳನ್ನು ಪಡೆಯಲು ಇಂಡೆಂಟ್ ಸಲ್ಲಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಎಸ್‌ಪಿ ಪಿ. ಕೃಷ್ಣಕಾಂತ, ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದೀನಕರ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.