ಕುಂದಗೋಳ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಯನ್ನು ಭರ್ತಿ ಮಾಡುವಂತೆ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಸೊಫಿಯಾ ದಾಸರಿ ಅವರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ತಾಲ್ಲೂಕು ಆರೋಗ್ಯ ಆಸ್ಪತ್ರೆಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಆರೋಗ್ಯ ಇಲಾಖೆ ನೋಡಲ್ ಅಧಿಕಾರಿ ರವೀಂದ್ರ ಭೋವಿ ಹಾಗೂ ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಕಲ್ಲಪ್ಪ ಹರಕುಣಿ, ‘ತಾಲ್ಲೂಕು ವೈದ್ಯಾಧಿಕಾರಿಗಳು ತಾಲ್ಲೂಕು ಆಸ್ಪತ್ರೆಯಲ್ಲಿ ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಕೇಳಿದರೆ, ಮಾಹಿತಿ ಹಕ್ಕಿನಲ್ಲಿ ಕೇಳಿ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಅವರಿಗೆ ನಾಲ್ಕು ಕಡೆ ಉಸ್ತುವಾರಿ ನೀಡಿರುವುದರಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರನ್ನು ವರ್ಗಾವಣೆ ಮಾಡಿ, ಬೇರೆ ತಾಲ್ಲೂಕು ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಬೇಕು’ ಎಂದು ಒತ್ತಾಯಸಿದರು.
‘ತಾಲ್ಲೂಕು ಆಸ್ಪತ್ರೆಯು 100 ಬೆಡ್ ವ್ಯವಸ್ಥೆ ಹೊಂದಿದೆ. ಆಸ್ಪತ್ರೆಯಲ್ಲಿ ತಲಾ ಒಂದು ಫಿಜಿಷಿಯನ್, ಎಲುಬು ಮತ್ತು ಕೀಲು ತಜ್ಞ, ಕಣ್ಣಿನ ತಜ್ಞ, ರೇಡಿಯೊಲಾಜಿಸ್ಟ್, ಸರ್ಜನ್, ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಹುದ್ದೆ ಹಾಗೂ 27 ಗ್ರೂಪ್ ಡಿ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಶೀಘ್ರವೇ ಭರ್ತಿ ಮಾಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
‘ಇಲ್ಲಿ ತಾಲ್ಲೂಕಿನ 63 ಹಳ್ಳಿಗಳಿಂದ ಬಡ ಜನರು ಬರುತ್ತಾರೆ. ತುರ್ತು ಪರಿಸ್ಥಿತಿಯಲ್ಲಿ ಬರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲವೆಂದು ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ಕಳುಹಿಸುತ್ತಾರೆ. ಆದರೆ ಮಾರ್ಗ ಮಧ್ಯವೇ ರೋಗಿಗಳು ಮೃತಪಟ್ಟ ಉದಾಹರಣೆಗಳಿವೆ’ ಎಂದು ಗಮನ ಸೆಳೆದರು.
ಸಂಘಟನೆಯ ಮಾಧ್ಯಮ ಸಲಹೆಗಾರ ಅಶೋಕ ಘೋರ್ಪಡೆ, ‘ಆಸ್ಪತ್ರೆಯಲ್ಲಿ ಕೇಲವ ಮೂವರು ವೈದ್ಯರಿದ್ದಾರೆ. ತಾತ್ಕಾಲಿಕವಾಗಿ ಕೆಎಂಸಿಆರ್‌ಐ ಆಸ್ಪತ್ರೆಯಿಂದ ವಾರದಲ್ಲಿ ಮೂರು ದಿನ ವೈದ್ಯರ ನಿಯೋಜನೆ ಮಾಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಸಾಗರ ಗಾಯಕವಾಡ, ಚಾಯಪ್ಪ ಹೊಸಮನಿ, ರವಿ ಶಿರಸಂಗಿ, ಅಡೀವೆಪ್ಪ ಹೆಬಸೂರ, ಮಂಜುನಾಥ ಹಾದಿಮನಿ, ಖಲಂದರ ಹಂಚಿನಾಳ, ನೂರಸಾಬ ನಧಾಪ್, ಮಂಗಳೆಶ ಬ್ಯಾಹಟ್ಟಿ, ಖಲಂಧರ ಹಂಚಿನಾಳ, ಪ್ರವೀಣ ಭರದೆಲಿ, ಮಂಜುನಾಥ ಪೂಜಾರ, ಶ್ರೀಕಾಂತ್ ನಾಗರಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.