ಧಾರವಾಡ: ‘ರಾಜ್ಯದ ವಿವಿಧ ಇಲಾಖೆಗಳಲ್ಲಿ 2.70 ಲಕ್ಷ ಹುದ್ದೆಗಳು ಖಾಲಿ ಇದ್ದು, ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಸರ್ಕಾರವು ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲಾ ಘಟಕಗಳ ವತಿಯಿಂದ ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಸನ್ನಿಧಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
‘ಸಂಘದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. ಏಳನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಿವೆ. ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಅಧ್ಯಯನಕ್ಕೆ ರಚಿಸಿರುವ ಸಮಿತಿಯು ಮುಂದಿನ ತಿಂಗಳು ವರದಿ ಸಲ್ಲಿಸಲಿದೆ. ಸರ್ಕಾರವು ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲಿದೆ ಎಂಬ ಭರವಸೆ ಇದೆ’ ಎಂದರು.
‘ಸಂಘದ ವತಿಯಿಂದ ಆರೋಗ್ಯ ಯೋಜನೆ ಶೀಘ್ರದಲ್ಲೇ ಅನುಷ್ಠಾನ ಆಗಲಿದೆ. ನಗದುರಹಿತ ಆರೋಗ್ಯ ಯೋಜನೆ ವ್ಯಾಪ್ತಿಗೆ ಸರ್ಕಾರಿ ನೌಕರರು, ಅವರ ಕುಟುಂಬ ಸದಸ್ಯರು ಸೇರಿದಂತೆ ಅಂದಾಜು 25 ಲಕ್ಷ ಜನರು ಒಳಪಡುತ್ತಾರೆ. ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪ್ಯಾಕೇಜ್ ಖಾತೆ ಸೌಲಭ್ಯ ಅನ್ವಯಿಸಲಾಗಿದೆ. ನೌಕರ ಆಕಸ್ಮಿಕವಾಗಿ ಮೃತಪಟ್ಟರೆ ಕುಟುಂಬಕ್ಕೆ ₹1 ಕೋಟಿ ಪರಿಹಾರ ಲಭಿಸುತ್ತದೆ’ ಎಂದು ಹೇಳಿದರು.
‘ತೆರಿಗೆ ಸಂಗ್ರಹ ಹಾಗೂ ಅಭಿವೃದ್ಧಿಯಲ್ಲಿ ಕರ್ನಾಟಕವು ಇತರೆ ರಾಜ್ಯಗಳಿಗಿಂತ ಮೊದಲ ಸ್ಥಾನದಲ್ಲಿದೆ. ಸರ್ಕಾರದ ಎಲ್ಲ ಅಭಿವೃದ್ಧಿ, ಜನ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಿ ಅನುಷ್ಠಾನಗೊಳಿಸುವಲ್ಲಿ ನೌಕರರ ಪಾತ್ರ ಪ್ರಮುಖವಾಗಿದೆ. ಸರ್ಕಾರಗಳು ನೌಕರರ ರಕ್ಷಣೆ, ಹಿತಾಸಕ್ತಿ ಕಾಪಾಡಲು ಸಂಘಟನೆಯೊಂದಿಗೆ ಕೈಜೋಡಿಸಿವೆ’ ಎಂದರು.
ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಗಿರಿಗೌಡ ಎಚ್., ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಖಜಾಂಚಿ ಮಂಜುನಾಥ ಯಡಳ್ಳಿ, ಕಾರ್ಯದರ್ಶಿ ರಮೇಶ ಲಿಂಗದಾಳ, ಗೌರವಾಧ್ಯಕ್ಷ ಪ್ರಕಾಶ ಹಳಪೇಟ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಎಸ್.ಬಸವರಾಜು, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳ್ಳಾರಿ, ಪತ್ರಕರ್ತ ಅಜಿತ್ ಹನುಮಕ್ಕನವರ ಇದ್ದರು.
ಭಾಷೆ ಕಲಿಕೆಯಲ್ಲಿ ಮಡಿವಂತಿಕೆ ಬೇಡ. ಮಾತೃಭಾಷಾ ಕಲಿಕೆ ಬಹಳ ಮುಖ್ಯ. ಮಕ್ಕಳಿಗೆ ಸಂಸ್ಕಾರ ಕಲಿಸಬೇಕು.– ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಭಾವಕ್ಯ ಪೀಠ ಶಿರಹಟ್ಟಿ
511 ವಿದ್ಯಾರ್ಥಿಗಳಿಗೆ ಸನ್ಮಾನ
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಧಾರವಾಡ ಜಿಲ್ಲೆಯ 187 ಗದಗ ಜಿಲ್ಲೆಯ 124 ಹಾಗೂ ಹಾವೇರಿ ಜಿಲ್ಲೆಯ 200 ಸೇರಿದಂತೆ ಒಟ್ಟು 511 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಲಾ ₹ 1ಸಾವಿರ ಪ್ರೋತ್ಸಾಹಧನ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.