ಹುಬ್ಬಳ್ಳಿ: ಕೇವಲ ಎರಡು ಚದರ ಕಿ.ಮೀ. ವಿಸ್ತಾರವಿರುವ ಸೆಟ್ಲಮೆಂಟ್, ಹಳೇ ಗಬ್ಬೂರಿನ ಅಕ್ಕಪಕ್ಕದ ಪ್ರದೇಶ ಒಳಗೊಂಡಿರುವ 81ನೇ ವಾರ್ಡ್‌ನಲ್ಲಿ ಸರ್ಕಾರಿ ಇಲಾಖೆಗಳ ಕಚೇರಿಗಳೇ ಪ್ರಾಧಾನವಾಗಿದೆ.
ಶಾಲೆ–ಕಾಲೇಜುಗಳ ಸೌಲಭ್ಯ, ತುರ್ತು ಸಂದರ್ಭದಲ್ಲಿ ಸ್ಥಳೀಯರ ನೆರವಿಗೆ ಠಾಣೆಗಳು ಕೂಗಳತೆ ದೂರದಲ್ಲಿಯೇ ಇವೆ. ಮುಖ್ಯವಾಗಿ, ಹಾಕಿ ಮೈದಾನವಿದ್ದು, ಇದು ಈ ವಾರ್ಡ್‌ನ ವಿಶೇಷತೆಗಳಲ್ಲಿ ಒಂದು.
ಈ ಹಿಂದೆ 66 ಮತ್ತು 67ನೇ ವಾರ್ಡ್‌ಗೆ ಹಂಚಿಕೊಂಡಿದ್ದ ಕೆಲವು ಪ್ರದೇಶಗಳು, ಮರು ವಿಂಗಡಣೆಯಾದಾಗ 81ನೇ ವಾರ್ಡ್‌ಗೆ ಸೇರಿಕೊಂಡವು. ನಗರ ಪ್ರದೇಶದ ಅಂಚಿಗೆ ಇರುವ, ಗ್ರಾಮೀಣ ಭಾಗದ ಮಂಟೂರು ಗ್ರಾಮಕ್ಕೆ ಈ ವಾರ್ಡ್ ತಾಗಿಕೊಂಡಿದೆ. ಸೆಟ್ಲಮೆಂಟ್, ಕರ್ಕಿ ಬಸವೇಶ್ವರ ನಗರ, ಚೈತನ್ಯನಗರ ಕೃಷಿ ಪ್ರದೇಶವಾಗಿದ್ದು, ಕೆಲ ವರ್ಷಗಳಿಂದ ಕೃಷಿಯೇತರ ಪ್ರದೇಶವಾಗಿ ಬದಲಾಗುತ್ತಿದೆ. ದೊಡ್ಡ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಇಲ್ಲಿ ತಲೆ ಎತ್ತಿವೆ. ಹತ್ತಾರು ನೂತನ ಬಡಾವಣೆಗಳು ಸಹ ನಿರ್ಮಾಣವಾಗುತ್ತಿವೆ.
ಸೆಟ್ಲಮೆಂಟ್‌ನ ಮುಖ್ಯ ರಸ್ತೆಯಲ್ಲಿರುವ ಯಂಗ್ ಸ್ಟಾರ್ ಸ್ಪೋರ್ಟ್ಸ್ (ವೈಎಸ್‌ಎಸ್) ಕ್ಲಬ್‌ನ ಹಾಕಿ ಮೈದಾನ, ಸ್ಥಳೀಯ ಜನರ ಮನೆಯಂಗಳವಾಗಿದೆ. ಇಲ್ಲಿರುವ ಪ್ರತಿಯೊಂದು ಮನೆಯಲ್ಲಿ, ಒಬ್ಬೊಬ್ಬರು ಹಾಕಿ ಆಟಗಾರರಿದ್ದಾರೆ. ಪ್ರಾಥಮಿಕ ಶಾಲಾ ದಿನಗಳಲ್ಲಿಯೇ ಇಲ್ಲಿ ಹಾಕಿ ತರಬೇತಿ ಪಡೆದು, ಬಿಡುವಿನ ವೇಳೆಯಲ್ಲಿ ತಂಡಕಟ್ಟಿಕೊಂಡು ಆಟವಾಡುತ್ತಾರೆ. ಸುಮಾರು 50ಕ್ಕೂ ಹೆಚ್ಚು ಮಂದಿ ಹಾಕಿ ಆಟಗಾರರು ಇದೇ ಮೈದಾನದಲ್ಲಿ ತರಬೇತಿ ಪಡೆದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಕ್ರೀಡಾ ಮೀಸಲಾತಿಯಲ್ಲಿ ರೈಲ್ವೆ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆ. ವೈಎಸ್‌ಎಸ್ ಕ್ಲಬ್‌ನಿಂದ ರಾಜ್ಯ, ರಾಷ್ಟ್ರಮಟ್ಟದ ಹಾಕಿ ಟೂರ್ನಿ ಸಹ ಇಲ್ಲಿ ನಡೆದಿದೆ.
ಬೆಂಡಿಗೇರಿ ಪೊಲೀಸ್ ಠಾಣೆ, ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳು ವಾರ್ಡ್ ಮಧ್ಯ ಭಾಗದಲ್ಲಿ ಇರುವುದರಿಂದ, ಸಾರ್ವಜನಿಕರ ಸಮಸ್ಯೆಗಳಿಗೆ ಪೊಲೀಸರಿಂದ ತುರ್ತು ಸಹಾಯ ಪಡೆಯಲು ಅನುಕೂಲವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಶಹರ (ಹುಬ್ಬಳ್ಳಿ) ಕಚೇರಿ, ನ್ಯಾಷನಲ್ ಇಂಗ್ಲಿಷ್ ಸ್ಕೂಲ್, ಸರ್ಕಾರಿ ಬಾಲಕರ ವಸತಿ ನಿಲಯ, ಬಾಲ ಮಂದಿರ, ಹೆಸ್ಕಾಂ ಗ್ರಾಮೀಣ ವಿಭಾಗದ ಕಚೇರಿಗಳು ಇಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ವಾರ್ಡ್ ಚಿಕ್ಕದಾದರೂ, ಸರ್ಕಾರಿ ಆಸ್ತಿಗಳು ಉಳಿದ ವಾರ್ಡ್‌ಗಳಿಗಿಂತ ಜಾಸ್ತಿಯೇ ಇವೆ.
ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಕೇಂದ್ರ ಕಚೇರಿ ಹಾಗೂ ಅದರ ಅಂಗ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳು ಅನೇಕ ವರ್ಷಗಳಿಂದ ವಾರ್ಡ್‌ನ ಘಂಟಿಕೇರಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕ್ರಿಶ್ಚಿಯನ್ ಸಮುದಾಯದ ‘ಯೇಸುನಾಮ ದೇವಾಲಯ’ ಸಹ ಇಲ್ಲಿದೆ.
ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದ ಕರ್ಕಿ ಬಸವೇಶ್ವರ ನಗರ (ಕೆ.ಬಿ.ನಗರ–ಸ್ಲಂ) ಇತ್ತೀಚೆಗೆ ತುಸು ಪ್ರಗತಿ ಕಂಡಿದೆ. ಸ್ಲಂನ ಎಲ್ಲ ಒಳರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿವೆ. ಹದಿನೈದು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು, ಈಗ ಆರು–ಏಳು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಮೂರು ವರ್ಷದ ಹಿಂದೆ ಕತ್ತಲೆಯಲ್ಲಿ ಓಡಾಡುತ್ತಿದ್ದ ಜನರಿಗೆ, ಎಲ್‌ಇಡಿ ಬೀದಿದೀಪ ಆಸರೆಯಾಗಿದೆ.
‘ಸ್ಮಾರ್ಟ್‌ಸಿಟಿ ಯೋಜನೆಯಡಿ ವಾರ್ಡ್‌ನ ಎಲ್ಲ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಗಟಾರ, ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಕೇಂದ್ರ, ರಾಜ್ಯ ಸರ್ಕಾರದ ಹಾಗೂ ಶಾಸಕರ ಅನುದಾನದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು’ ಎಂದು ವಾರ್ಡ್ ಸದಸ್ಯೆ ಮಂಜುಳಾ ಜಾಧವ ಹೇಳಿದರು.
ಪ್ರಮುಖ ಪ್ರದೇಶಗಳು: ಸೆಟ್ಲಮೆಂಟ್, ಗಂಗಾಧರ ನಗರ, ಎಂ.ಡಿ.ಕಾಲೊನಿ, ಯಲ್ಲಾಪುರ ಸ್ಲಂ, ಮಾರುತಿನಗರ, ಕರ್ಕಿ ಬಸವೇಶ್ವರ ನಗರ, ದೊಡ್ಡಕೆರೆ ಪೂರ್ವ–ಪಶ್ಚಿಮ–ಉತ್ತರ.
ಪಾಲಿಕೆ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಬೇಕು ಎನ್ನುವುದು ನನ್ನ ಗುರಿಮಂಜುಳಾ ಜಾಧವ ಪಾಲಿಕೆ ಸದಸ್ಯೆ
ಇತ್ತೀಚೆಗೆ ಕೆಲವು ಬಡಾವಣೆಗಳಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿದೆ. ಕೆಲವು ಕಡೆ ಮಳೆನೀರು ಸರಾಗವಾಗಿ ಹರಿಯಲು ಒಳಚರಂಡಿ ವ್ಯವಸ್ಥೆ ಆಗಬೇಕಿದೆರಮೇಶ ಸ್ಥಳಿಯ ನಿವಾಸಿ
ಬೇಡಿಕೆಗಳು:
* ಯಲ್ಲಾಪುರ ಸ್ಲಂ ಎಂ.ಡಿ.ಕಾಲೊನಿ ದೊಡ್ಡಕೆರೆ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯಾಗಬೇಕು.
* ಕರ್ಕಿ ಬಸವೇಶ್ವರನಗರ ನಗರ ಯಲ್ಲಾಪುರ ಸ್ಲಂಗಳಲ್ಲಿ ಜನಸಂಖ್ಯೆಗೆ ತಕ್ಕಷ್ಟು ಶೌಚಾಲಯಗಳು ಇಲ್ಲ.
* ನ್ಯಾಷನಲ್ ಇಂಗ್ಲಿಷ್ ಸ್ಕೂಲ್ ಮುಂಭಾಗ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆಯೇ ನಿಲ್ಲುತ್ತದೆ.
* ಅಕ್ರಮ–ಸಕ್ರಮ ಬಡಾವಣೆಗಳೇ ಹೆಚ್ಚಿರುವುದರಿಂದ ಮೂಲಸೌಲಭ್ಯ ಪಡೆಯಲು ಸಮಸ್ಯೆಯಾಗುತ್ತಿದೆ.
* ನಾಲ್ಕು ಸಮುದಾಯ ಭವನಗಳಿದ್ದು ಒಂದು ಮಾತ್ರ ಬಳಕೆಯಲ್ಲಿವೆ. ಉಳಿದವು ಪಾಳು ಬಿದ್ದಿವೆ.
* ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎನ್ನುವುದು ಸ್ಥಳೀಯರ ಬೇಡಿಕೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.