ADVERTISEMENT

‘ನಮ್ಮೂರ ಶಾಲೆ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 3:03 IST
Last Updated 24 ಡಿಸೆಂಬರ್ 2025, 3:03 IST
ಕಲಘಟಗಿ ತಾಲ್ಲೂಕಿನ ಗೌಳಿದಡ್ಡಿ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಮಂಗಳವಾರ ಸರ್ಕಾರದ ವಿರುದ್ಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಪ್ರತಿಭಟನೆ ನಡೆಸಿದರು.
ಕಲಘಟಗಿ ತಾಲ್ಲೂಕಿನ ಗೌಳಿದಡ್ಡಿ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಮಂಗಳವಾರ ಸರ್ಕಾರದ ವಿರುದ್ಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಪ್ರತಿಭಟನೆ ನಡೆಸಿದರು.   

ಕಲಘಟಗಿ: 19 ವರ್ಷ ಗತಿಸಿದ ನಮ್ಮೂರ ಶಾಲೆ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಒತ್ತಾಯಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ತಾಲ್ಲೂಕಿನ ಗೌಳಿದಡ್ಡಿ ಗ್ರಾಮಸ್ಥರು ಮಂಗಳವಾರ ಸರ್ಕಾರದ ವಿರುದ್ಧ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಪ್ರತಿಭಟನೆ ನಡೆಸಿದರು.

ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, 17 ಮಕ್ಕಳ ದಾಖಲಾತಿ ಹೊಂದಿರುವ ಶಾಲೆಯನ್ನು ಮುಚ್ಚುತ್ತಿರುವ ಸರ್ಕಾರವು ಗ್ರಾಮದ ಬಡ ರೈತ-ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೌಳಿದಡ್ಡಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಿಂಗನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ಜುಂಜನಬೈಲ್ ತಾಂಡಾ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ 3 ಶಾಲೆಗಳನ್ನು ಮುಚ್ಚಿ ತಂಬೂರು ಮ್ಯಾಗ್ನೆಟ್ ಶಾಲೆಗೆ ಸೇರಿಸಿ ಮಕ್ಕಳನ್ನು ದೂರದ ಶಾಲೆಗೆ ಕಳಿಸಲಾಗುತ್ತಿದೆ. ಉಚಿತ ಬಸ್ ಸೌಲಭ್ಯ ಹೊರೆ ಎಸ್‌ಡಿಎಂಸಿ ವಹಿಸಿ, ಮ್ಯಾಗ್ನೆಟ್ ಶಾಲೆಯ ನಿರ್ವಹಣೆ ಹೊರಗುತ್ತಿಗೆ ನೀಡಲಾಗುತ್ತಿದೆ. ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ ಬಡ ಮಕ್ಕಳನ್ನು ಶಾಶ್ವತವಾಗಿ ದೂರ ತಳ್ಳುವ ಹುನ್ನಾರ ಮಾಡುತ್ತಿರುವ ಸರ್ಕಾರದ ನಡೆ ಖಂಡಿಸಿದರು.

ADVERTISEMENT

ಹೋರಾಟ ಸಮಿತಿ ಅಧ್ಯಕ್ಷ ರಾಮು ಎಡಗೆ ಮಾತನಾಡಿ, ಬಡವರ ಮಕ್ಕಳು ಓದುವ ಗ್ರಾಮೀಣ ಭಾಗದ ಶಾಲೆಗಳನ್ನು ಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸಬೇಕಾದ ಸರ್ಕಾರವೇ ಶಾಲೆಗಳನ್ನು ಮುಚ್ಚುತ್ತಿದೆ. ಬದಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರ್ಕಾರ ರಚಿಸಿದೆ. ನಮ್ಮ ಗೌಳಿದಡ್ಡಿ ಗ್ರಾಮವು ಸುತ್ತಮುತ್ತ ಕಾಡಿನ ಮಧ್ಯೆ ಇದೆ. ಇಲ್ಲಿ ಶಾಲೆ ಮುಚ್ಚಿದರೆ ನಮ್ಮ ಮಕ್ಕಳನ್ನು ಬೇರೆ ಕಡೆ ಕಳಿಸಲು ಸಾಧ್ಯವಿಲ್ಲ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿಂಧು ಕೌದಿ, ನವಲು ಎಡೆಗೆ, ದೇವರಾಜ್ ಎಡೆಗೆ, ಬಾಗುಬಾಯಿ, ಭಾಗ್ಯರತಿ ಹಾಗೂ ಗ್ರಾಮಸ್ಥರು, ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.