ADVERTISEMENT

‘ನೌಕರರು ಜನಪರ ಕಾರ್ಯ ನಿರ್ವಹಿಸಲಿ’: ಸಭಾಪತಿ ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 15:26 IST
Last Updated 30 ಡಿಸೆಂಬರ್ 2021, 15:26 IST
ಕಲಘಟಗಿ ತಾಲ್ಲೂಕು ನೌಕರರ ಭವನದ ಅವರಣದಲ್ಲಿ ಗುರುವಾರ ನಡೆದ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ದಿನಾಚರಣೆ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಶಾಸಕ ಸಿ. ಎಂ ನಿಂಬಣ್ಣವರ ಉದ್ಘಾಟಿಸಿದರು
ಕಲಘಟಗಿ ತಾಲ್ಲೂಕು ನೌಕರರ ಭವನದ ಅವರಣದಲ್ಲಿ ಗುರುವಾರ ನಡೆದ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ದಿನಾಚರಣೆ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಶಾಸಕ ಸಿ. ಎಂ ನಿಂಬಣ್ಣವರ ಉದ್ಘಾಟಿಸಿದರು   

ಕಲಘಟಗಿ: ‘ಸರ್ಕಾರಿ ನೌಕರರು ಜನಪರ ಕಾರ್ಯ ನಿರ್ವಹಿಸುವ ಮೂಲಕ ಜನರಿಗೆ ಮಾದರಿಯಾಗಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಪಟ್ಟಣದ ತಾಲ್ಲೂಕು ನೌಕರರ ಭವನದ ಆವರಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ದೇಶಿಸಿ ಅವರು ಮಾತನಾಡಿದರು.

ರೈತರು ಹಾಗೂ ಜನಸಾಮಾನ್ಯರು ನಿಮ್ಮ ಬಳಿ ಬಂದಾಗ ಅವರನ್ನು ಅಲೆದಾಡಿಸದೆ ಅವರ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಿಕೊಡಬೇಕು. ಉದ್ಯೋಗವಿಲ್ಲದೆ ಎಷ್ಟು ಜನರು ಅಲೆದಾಡುತ್ತಿದ್ದಾರೆ. ನೌಕರಿ ಪಡೆದುಕೊಂಡವರು ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದು ಪ್ರಾಮಾಣಿಕವಾಗಿ ಮಾಡಬೇಕು ಎಂದು ಹೇಳಿದರು.

ADVERTISEMENT

ನೌಕರರು ನ್ಯಾಯಯುತವಾಗಿ ಕೆಲಸ ನಿರ್ವಹಿಸಿದಾಗ ಯಾರಾದರೂ ಅನ್ಯಾಯ ಮಾಡಿದರೆ ಹಾಗೂ ತೊಂದರೆ ಕೊಟ್ಟರೆ ನಿಮ್ಮ ಸಂಘಟನೆಯ ಮೂಲಕ ಪ್ರತಿಭಟಿಸಬೇಕು. ನ್ಯಾಯ ಪಡೆದುಕೊಳ್ಳಬೇಕು ಎಂದರು.

ನೌಕರರ ಬಗ್ಗೆ ಅಸಮಾಧಾನ: ಈ ಕಾರ್ಯಕ್ರಮ 11 ಗಂಟೆಗೆ ಇತ್ತು. ನಾನು ಬಂದು 2 ಗಂಟೆಯಾದರೂ ನಿಮ್ಮಲ್ಲಿ ಬಹಳಷ್ಟು ಬಂದಿರಲಿಲ್ಲ. ನೀವೇ ನಿಮ್ಮ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಬರದಿದ್ದರೆ ಜನರ ಕೆಲಸ ಹೇಗೆ ಮಾಡುತ್ತೀರಿ ಎಂದು ಹೊರಟ್ಟಿ ಪ್ರಶ್ನಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎಂ. ನಿಂಬಣ್ಣವರ, ಸರ್ಕಾರಿ ನೌಕರರು ತಮ್ಮ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.

ಕಂದಾಯ ಇಲಾಖೆ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಚೇರಿಯಲ್ಲಿ ಇರುವುದಿಲ್ಲ ಎಂದು ಹಲವು ದೂರುಗಳು ಬಂದಿವೆ. ಸರ್ಕಾರ ನಿಮಗೆ ವೇತನ ನೀಡುತ್ತದೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಆರ್. ಎಂ ಹೋಲ್ತಿಕೋಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಎಸ್.ಎಫ್. ಸಿದ್ದನಗೌಡ್ರ, ತಹಶೀಲ್ದಾರ್‌ ಯಲ್ಲಪ್ಪ ಗೊಣ್ಣೆಣ್ಣವರ, ತಾಲ್ಲೂಕು ಪಂಚಾಯಿತಿ ಇಓ ಶಿವಪುತ್ರಪ್ಪ ಮಠಪತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ.ಜಿ ಗದ್ದಿಗೌಡರ, ಸಿಪಿಐ ಪ್ರಭು ಸೂರಿನ, ವಿ.ಎಫ್ ಚುಳಕಿ, ಆರ್.ಎಸ್ ಜಂಬಗಿ, ಐ.ವಿ. ಜವಳಿ, ಚಂದ್ರಶೇಖರ ಚಿಕ್ಕಮಠ, ಬಿ.ಎಫ್ ಉಳಾಗಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.