ADVERTISEMENT

ಧಾರವಾಡ: ಮೇರು ವ್ಯಕ್ತಿತ್ವದ ಶ್ರೇಷ್ಠ ಸಂತರು

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 4:58 IST
Last Updated 2 ಮಾರ್ಚ್ 2023, 4:58 IST
ಧಾರವಾಡದ ಹಳಿಯಾಳ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರಗಳಿಗೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು. ಡಾ. ವೀರಣ್ಣ ರಾಜೂರ, ಪ್ರೊ. ಬಿ.ಎಸ್. ಹಳಿಯಾಳ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ
ಧಾರವಾಡದ ಹಳಿಯಾಳ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರಗಳಿಗೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು. ಡಾ. ವೀರಣ್ಣ ರಾಜೂರ, ಪ್ರೊ. ಬಿ.ಎಸ್. ಹಳಿಯಾಳ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ   

ಧಾರವಾಡ: ‘ತುಮಕೂರಿನ ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ 21ನೇ ಶತಮಾನ ಕಂಡ ಶ್ರೇಷ್ಠ ಸಂತರು. ಜನಮಾನಸದಲ್ಲಿ ಹೆಚ್ಚು ಪ್ರಭಾವ ಬೀರಿದ್ದ ಇಬ್ಬರೂ ಮೇರು ವ್ಯಕ್ತಿತ್ವದ ಶ್ರೇಷ್ಠ ಸಂತರಾಗಿದ್ದಾರೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಬುಧವಾರ ಹಮ್ಮಿಕೊಂಡಿದ್ದ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಹಾಗೂ ವಿಜಯಪುರ ಸಿದ್ಧೇಶ್ವರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು ಆಶೀರ್ವಚನ ನೀಡಿದರು.

‘ಜನಮಾನಸದಲ್ಲಿ ಈ ಇಬ್ಬರು ಮಹಾತ್ಮರು ಹೆಚ್ಚು ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿದವರು. ನಾಡಿಗೆ ಅನ್ನ, ಅಕ್ಷರ ಮತ್ತು ಆಶ್ರಯ ದಾಸೋಹ ಪರಂಪರೆ ಪರಿಚಯಿಸಿದ ಕೀರ್ತಿ ಸಿದ್ಧಗಂಗಾ ಸ್ವಾಮೀಜಿಗೆ ಸಲ್ಲುತ್ತದೆ. ಆಕಸ್ಮಿಕವಾಗಿ ಸಿಕ್ಕ ಸ್ಥಾನ ಅಲಂಕರಿಸಿ, ಕಾಯಕ ನಿಷ್ಠೆಯಿಂದ ಮಾನವ ಕಲ್ಯಾಣಕ್ಕೆ ಶಿವಕುಮಾರ ಸ್ವಾಮೀಜಿ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದರು.

ADVERTISEMENT

‘ಅದೇ ರೀತಿ ಸಿದ್ಧೇಶ್ವರ ಸ್ವಾಮೀಜಿ ಕಾಯಕ ಜೀವಿ, ಜ್ಞಾನ ಜೀವಿಯಾಗಿದ್ದರು. ಆಧ್ಯಾತ್ಮಿಕ ಚಿಂತನೆಗೆ ಜೀವನ ಮುಡಿಪಾಗಿಟ್ಟು, ಲೋಕದ ಜನತೆಗೆ ಮಾರ್ಗದರ್ಶನ ನೀಡದ ಮಹಾತ್ಮ. ವಚನಗಳನ್ನು ವಿಶಿಷ್ಟವಾಗಿ ವ್ಯಾಖ್ಯಾನ ಮಾಡುತ್ತಿದ್ದ ಅವರು, ತಮ್ಮ ಪ್ರವಚನದಲ್ಲಿ ಪ್ರಕೃತಿಯಲ್ಲಿನ ಉದಾಹರಣೆ ನೀಡುತ್ತಿದ್ದರು. ಸರಳ ವ್ಯಕ್ತಿತ್ವ ಹೊಂದಿದ್ದ ಅವರು ನುಡಿದಂತೆ ನಡೆದ ಪುಣ್ಯಾತ್ಮರು. ಶ್ರೇಷ್ಠ ಸಂತರ ಅಭಿಯಾನ ಶುರುವಾದರೇ ಈ ಇಬ್ಬರು ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ವರ್ತಮಾನದಲ್ಲಿ ನಡೆದಾಡುವ ದೇವರೆಂದು ಪ್ರಸಿದ್ಧಿ ಪಡೆದ ಇಂತಹ ಮಹಾನ್ ವ್ಯಕ್ತಿಗಳ ಕಾಲಘಟ್ಟದಲ್ಲಿ ಬದುಕಿರುವುದೇ ನಮ್ಮೆಲ್ಲರ ಪುಣ್ಯ’ ಎಂದರು.

ಸಾನಿಧ್ಯ ವಹಿಸಿದ್ದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ಧೇಶ್ವರ ಸ್ವಾಮೀಜಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಬದುಕಿನುದ್ದಕ್ಕೂ ಸಮಾಜ ಸೇವೆ ಮಾಡುವ ಮೂಲಕ ಸದಾ ಸ್ಮರಣೀಯರಾಗಿದ್ದಾರೆ. ಅಂತರಗಂದ ಅರಿವಿನ ಮೂಲಕ ಬಹಿರಂಗದಲ್ಲೂ ಕ್ರಿಯಾಶೀಲ ಶುದ್ಧ ಕಾಯಕದಿಂದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅವರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಸಾಹಿತಿ ಡಾ.ವೀರಣ್ಣ ರಾಜೂರು, ಪ್ರೊ. ಬಿ.ಎಸ್. ಹಳಿಯಾಳ ಮಾತನಾಡಿದರು.

ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಆರ್. ರಾಮನಗೌಡರ, ಶಂಕರ ಕುಂಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.