ಹುಬ್ಬಳ್ಳಿ: ನಗರದ ಮಂಟೂರು ರಸ್ತೆಯ ಅರಳಿಕಟ್ಟಿ ಓಣಿಯಲ್ಲಿ ಬುಧವಾರ ಸಂಜೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಗಾಯಗೊಂಡ ಐದು ಮಂದಿಯನ್ನು ನಗರದ ಅಂಜುಮನ್ ಹಾಗೂ ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೆಟ್ಲಮೆಂಟ್ ಮತ್ತು ಮಂಟೂರು ರಸ್ತೆಯ ಎರಡು ಗುಂಪುಗಳ ಮಧ್ಯೆ ಹೊಡೆದಾಟವಾಗಿದೆ. ತಲ್ವಾರ್, ಹಾಕಿ ಸ್ಟಿಕ್, ಕಲ್ಲು, ಬಡಿಗೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜಿಲಾನಿ ಹಾಗೂ ಜಾಧವ್ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ನಂತರ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಶವ ಸಂಸ್ಕಾರ ಮುಗಿಸಿ ಮರಳುತ್ತಿದ್ದಾಗ ದಾವುದ್ ಕಡೆಯವರು ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಮಂಜುನಾಥ ಗಾಯಕವಾಡ, ರಾಜೇಶ ಕೊರವರ ಅವರಿಗೆ ಗಂಭೀರ ಗಾಯವಾಗಿದೆ’ ಎಂದು ಮಾಧ್ಯದವರಿಗೆ ಪಾಲಿಕೆ ಸದಸ್ಯೆ ಮಂಜುಳಾ ಜಾಧವ ತಿಳಿಸಿದರು.
‘ಒಬ್ಬರಿಗೆ ತೀವ್ರ ಸ್ವರೂಪದ ಗಾಯ ಹಾಗೂ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡೂ ಕಡೆಯಿಂದ ದೂರು ಪಡೆದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡೂ ಗುಂಪಿನ ಕಡೆಯಿಂದ ತಲಾ ನಾಲ್ಕು, ಐದು ಮಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾದವರಲ್ಲಿ ರೌಡಿಗಳು ಇದ್ದಾರೆಯೇ ಎಂದು ಪರಿಶೀಲಿಸಲಾಗುವುದು’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
‘ಅವಳಿನಗರದಲ್ಲಿ ರೌಡಿ ಚಟುವಟಿಕೆ ಮಟ್ಟಹಾಕಲು 80 ಕ್ಚೂ ಹೆಚ್ಚು ಮಂದಿಯನ್ನು ಗಡಿಪಾರು ಮಾಡಿ, ನಾಲ್ವರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ’ ಎಂದು ತಿಳಿಸಿದರು.
ಮಾನಭಂಗಕ್ಕೆ ಯತ್ನ, ಪ್ರಕರಣ ದಾಖಲು: ಕ್ರಿಶ್ಚಿಯನ್ ಕಾಲೊನಿಯ ಮೋಹನ ದೊಡ್ಡಮನಿ ಎಂಬಾತ ಮಗಳಿಗೆ ಅವಾಚ್ಯವಾಗಿ ನಿಂದಿಸಿ, ಮಾನಭಂಗಕ್ಕೆ ಯತ್ನಿಸಿದ್ದನೆಂದು ಆರೋಪಿಸಿ ದೊಡ್ಡಮನಿ ಕಾಲೊನಿ ಮಹಿಳೆಯೊಬ್ಬರು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆನಗರದ ಪುನೀತ್ ಅವರಿಗೆ ಮುಂಬೈ ಕ್ರೈಂ ಬ್ರ್ಯಾಂಚ್‌ನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿದ ವ್ಯಕ್ತಿ, ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಬೆದರಿಸಿ, ಅವರ ಖಾತೆಯಿಂದ ₹6.15 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಪುನೀತ್ ಅವರಿಗೆ ವಾಟ್ಸ್ಆ್ಯಪ್ ವಿಡಿಯೊ ಕರೆ ಮಾಡಿದ ವಂಚಕ, ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಅಕ್ರಮ ವರ್ಗಾವಣೆಯಾಗಿದೆ ಎಂದು ಕೆಲವು ದಾಖಲೆಗಳನ್ನು ತೋರಿಸಿದ್ದ. ಬೆದರಿಸಿ, ಅವರ ಬ್ಯಾಂಕ್ ಖಾತೆಗಳ ವಿವರ ಪಡೆದು ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡದಿದ್ದರೆ ಬಂದ್ ಆಗುತ್ತದೆ ಎಂದು ಇಲ್ಲಿನ ಉಣಕಲ್‌ನ ನಿವಾಸಿ ಪ್ರಸನ್ನ ಅವರ ಮೊಬೈಲ್ ಫೋನ್ ಸಂಖ್ಯೆಗೆ ಸಂದೇಶ ಕಳುಹಿಸಿದ ವ್ಯಕ್ತಿ, ಅವರ ಖಾತೆಯಿಂದ ₹4.83 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಬ್ಯಾಂಕ್ ಆಫ್ ಬರೋಡಾ ಹೆಸರಲ್ಲಿ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.