ADVERTISEMENT

ಗೃಹಜ್ಯೋತಿ ಯೋಜನೆ: ನೋಂದಣಿ ಕುಂಠಿತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 14:50 IST
Last Updated 16 ನವೆಂಬರ್ 2023, 14:50 IST
ಕುಂದಗೋಳ ಉಪ ವಿಭಾಗದ ಹೆಸ್ಕಾಂ ಕಚೇರಿ
ಕುಂದಗೋಳ ಉಪ ವಿಭಾಗದ ಹೆಸ್ಕಾಂ ಕಚೇರಿ   

ಕುಂದಗೋಳ: ಕುಂದಗೋಳ ಉಪ ವಿಭಾಗದಲ್ಲಿ ಪ್ರಸ್ತುತ ಒಟ್ಟು 39,439 ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿದ್ದು, ಇವುಗಳಲ್ಲಿ 36,293 ವಿದ್ಯುತ್ ಸಂಪರ್ಕಗಳು ಮಾತ್ರ ನವೆಂಬರ್‌ವರೆಗೆ ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗಿವೆ. ಉಳಿದಂತೆ 3,146 ಸಂಪರ್ಕಗಳು ನೋಂದಣಿಯಾಗದೆ ಈ ಯೋಜನೆಯಿಂದ ಹೊರಗುಳಿದಿವೆ.

ನಿರಾಸಕ್ತಿ: ಬಿಲ್ ಸಂಗ್ರಹಿಸಲು ಹೋದಾಗ ಜನರು ಮನೆಯಲ್ಲಿ ಇಲ್ಲದಿರುವುದು, ಮನೆ ಬಿದ್ದಿರುವುದು, ಯೋಜನೆ ಬಗ್ಗೆ ಕೆಲವರ ನಿರಾಸಕ್ತಿ, ಹಳೆಯ ಬಿಲ್ ಪಾವತಿ ಮಾಡದಿರುವುದು, ಕೆಲವು ಜನರು ಸ್ವಯಂಪ್ರೇರಿತವಾಗಿ ಈ ಯೋಜನೆಯ ಸೌಲಭ್ಯ ಬೇಡ ಎಂದಿರುವ ಕಾರಣ ಶೇಕಡ ನೂರರಷ್ಟು ನೋಂದಣಿಯಾಗಿಲ್ಲ ಎನ್ನುತ್ತಾರೆ ಇಲ್ಲಿನ ಹೆಸ್ಕಾಂ ಸಿಬ್ಬಂದಿ.

‌ಕುಂದಗೋಳ ವ್ಯಾಪ್ತಿಯಲ್ಲಿ ಗುಡಗೇರಿ, ಕುಂದಗೋಳ ಗ್ರಾಮೀಣ ಮತ್ತು ಪಟ್ಟಣ, ಸಂಶಿ ಈ ಮೂರು ವಿಭಾಗಗಳಿವೆ. ಈ ವ್ಯಾಪ್ತಿಯಲ್ಲಿ ಒಟ್ಟು 27 ಪಂಚಾಯಿತಿಗಳು, 59 ಹಳ್ಳಿಗಳು ಸೇರಿವೆ.

ADVERTISEMENT

ಈ ಉಪ ವಿಭಾಗದ ಒಂದನೇ ಹಂತದಲ್ಲಿ ಕುಂದಗೋಳ ನಗರ ಹೊರತುಪಡಿಸಿ, ಗುಡಗೇರಿ, ಕುಂದಗೋಳ ಗ್ರಾಮೀಣ ಸಂಶಿ ವ್ಯಾಪ್ತಿಯ ಒಟ್ಟು 13,186 ವಿದ್ಯುತ್ ಸಂಪರ್ಕಗಳು ನೋಂದಣಿಯಾಗಿವೆ.

ಕುಂದಗೋಳ ಉಪ ವಿಭಾಗದ ಸಿಬ್ಬಂದಿಯ ಪ್ರಯತ್ನದಿಂದ ಈ ಯೋಜನೆಯಡಿ ಎರಡನೇ ಹಂತದಲ್ಲಿರುವ ಗುಡಗೇರಿ, ಕುಂದಗೋಳ ಗ್ರಾಮೀಣ ಮತ್ತು ಪಟ್ಟಣ, ಸಂಶಿಯಲ್ಲಿ ಒಟ್ಟು 26,253 ವಿದ್ಯುತ್ ಸಂಪರ್ಕಗಳಿದ್ದು 23,107 ಮಾತ್ರ ಇದುವರೆಗೆ ನೋಂದಣಿಯಾಗಿವೆ.

ನೋಂದಣಿಯಾಗದ ವಿದ್ಯುತ್ ಸಂಪರ್ಕಗಳ ಪಾಲು ಶೇ 7.98ರಷ್ಟು. ಅಂದರೆ 3,146 ವಿದ್ಯುತ್ ಸಂಪರ್ಕಗಳು ಈ ಯೋಜನೆಯ ವ್ಯಾಪ್ತಿಯಿಂದ ಹೊರಗಿವೆ.

ಈ ಯೋಜನೆಯ ವ್ಯಾಪ್ತಿಯಿಂದ ಹೊರಗುಳಿದ ಸಂಪರ್ಕಗಳಲ್ಲಿ ಗುಡಗೇರಿಯಲ್ಲಿ 14, ಕುಂದಗೋಳ ಗ್ರಾಮೀಣದಲ್ಲಿ 22, ಕುಂದಗೋಳ ಪಟ್ಟಣದಲ್ಲಿ 28, ಸಂಶಿಯಲ್ಲಿ 19 ಸೇರಿ ಒಟ್ಟು  83 ಹೊಸ ವಿದ್ಯುತ್ ಸಂಪರ್ಕಗಳು, 607 ದೇವಸ್ಥಾನ, ಶಾಲಾ-ಕಾಲೇಜುಗಳ ಸಂಪರ್ಕ ಮತ್ತು 200ಕ್ಕೂ ಹೆಚ್ಚಿಗೆ ಯೂನಿಟ್ ಬಳಸಿದ ಕಾರಣ ಈ ಯೋಜನೆಯಿಂದ ಹೊರಗುಳಿದ 103 ವಿದ್ಯುತ್ ಸಂಪರ್ಕಗಳಾಗಿವೆ.

ನಾವು ಜನರಿಗೆ ಗೃಹಜ್ಯೋತಿ ಯೋಜನೆಯ ಉಪಯೋಗದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರೂ ಅವರು ಆಸಕ್ತಿ ತೋರಿಸುತ್ತಿಲ್ಲ.
-ವೀರೇಶ ಮಠದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೆಸ್ಕಾಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.