ಕುಂದಗೋಳ: ‘ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಲ್ಯಾಣ ಮಾಡುತ್ತಿದ್ದು, ಅರ್ಹ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು‘ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಸತೀಶ ಕೊಬ್ಬಯ್ಯನವರ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಬಸ್ ಸೌಲಭ್ಯ ದೊರೆಯುವಂತೆ ಕ್ರಮವಹಿಸಬೇಕು ಎಂದು ಕೆೆಎಸ್‌ಆರ್‌ಟಿಸಿ ಅಧಿಕಾರಿ ಅನೀಲಕುಮಾರ ಹಳ್ಳದ ಅವರಿಗೆ ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆ ಕುರಿತು ಸಿಡಿಪಿಒ ಇಲಾಖೆ ಅಧಿಕಾರಿ ಶಿವಕ್ಕ ತಿರಕಪ್ಪನವರ ಮಾಹಿತಿ ನೀಡುತ್ತಿರುವಾಗ, ಸಮಿತಿ ಸದಸ್ಯ ಅಡಿವೆಪ್ಪ ಹೆಬಸೂರ ಮಾತನಾಡಿ, ‘ಕಳೆದ 2.5 ವರ್ಷದ ಹಿಂದೆ ಗೃಹಲಕ್ಷ್ಮಿ ಯೋಜನೆಗೆ ತಾಲ್ಲೂಕಿನ ಮುಳ್ಳೊಳ್ಳಿ ಗ್ರಾಮದ ಫಲಾನುಭವಿಯೊಬ್ಬರು ಅರ್ಜಿ ಸಲ್ಲಿಸಿದ್ದು ಇದುವೆರೆಗೂ ಸೌಲಭ್ಯ ದೊರೆತಿಲ್ಲ’ ಎಂದು ದೂರಿದರು.
ಅಧ್ಯಕ್ಷ ಕೊಬ್ಬಯ್ಯನವರು ಮಾತನಾಡಿ, ‘ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತೆ ಕ್ರಮವಹಿಸಬೇಕು’ ಎಂದು ಸೂಚಿಸಿದರು.
ವರ್ಗಾವಣೆಯಿಂದ ಆಹಾರ ಇಲಾಖೆಯ ನಿರೀಕ್ಷಕ ಹುದ್ದೆ ಖಾಲಿಯಾಗಿದ್ದು, ಕೂಡಲೆ ಅಧಿಕಾರಿಯನ್ನು ನಿಯೋಜನೆ ಮಾಡುವಂತೆ ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಸದಸ್ಯ ಹೆಬಸೂರ ಮನವಿ ಮಾಡಿದರು.
ಸಭೆಯಲ್ಲಿ ತಾ.ಪಂ ಇಒ ಜಗದೀಶ ಕಮ್ಮಾರ, ತಹಶೀಲ್ದಾರ್ ರಾಜು ಮಾವರಕರ, ಸಮಿತಿಯ ಸದಸ್ಯರಾದ ಗೀತಾ ಕೊಟಿಗೌಡ್ರ, ಯಲ್ಲಪ್ಪ ಶಿಂಗಣ್ಣವರ, ಸೋಮಲಿಂಗಪ್ಪ ಹೊಸಮನಿ, ಸಚೀನ ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.