ನವಲಗುಂದ: ಗ್ರಾಮದ ಜನರ ಕುಡಿಯುವ ನೀರಿನ ಮೂಲವಾದ ಗುಡಿಸಾಗರದ ಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಇದ್ದರೂ ಗ್ರಾಮಾಡಳಿತದ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಜಲ ಕಂಟಕದಿಂದ ಬಳಲುವಂತಾಗಿದೆ.
ತಾಲ್ಲೂಕಿನ ಎಲ್ಲ ಕೆರೆಗಳನ್ನು ಮಲಪ್ರಭಾ ಕಾಲುವೆ ನೀರಿನಿಂದ ತುಂಬಿಸಿಕೊಂಡು ನಲ್ಲಿ ಮೂಲಕ ನೀರು ಪೂರೈಸಲಾಗುತ್ತಿದೆ. ಮಲಪ್ರಭಾ ಕಾಲುವೆ ನೀರು ಹರಿಸುವ ಮುನ್ನ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ಸ್ವಚ್ಛಗೊಳಿಸಿ ಸಂಗ್ರಹವಿದ್ದ ಕಲುಷಿತ ನೀರನ್ನು ಹೊರ ಹಾಕಿ ಪುನಃ ಹೊಸ ನೀರನ್ನು ತುಂಬಿಸಿಕೊಳ್ಳುತ್ತಾ ಬರುತ್ತಾರೆ.
ಆದರೆ ಗುಡಿಸಾಗರ ಕೆರೆ ನೀರು ಈ ಮೊದಲೇ ಸ್ಚಚ್ಛವಿಲ್ಲದೇ ಕಲುಷಿತವಾಗಿದ್ದರೂ ಅದೇ ನೀರಿನಲ್ಲಿಯೇ ಹೊಸದಾಗಿ ನೀರು ತುಂಬಿಸಿಕೊಂಡ ಪರಿಣಾಮ ಕೆರೆಯ ನೀರೆಲ್ಲ ಸಂಪೂರ್ಣ ಕಲುಷಿತಗೊಂಡು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಕಲುಷಿತಗೊಂಡ ಗುಡಿಸಾಗರ ಗ್ರಾಮದ ಕೆರೆಯ ನೀರನ್ನು ಹೊರ ಹಾಕಿ ಶುದ್ದ ನೀರನ್ನು ತುಂಬಿಸಿ ಕೊಡುವಂತೆ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿ ದುಂಬಾಲು ಬಿದ್ದರೂ ಕ್ಯಾರೆ ಎನ್ನದ ಅಧಿಕಾರಿಗಳು ಜನರ ಜೀವದ ಜತೆ ಆಟವಾಡುತ್ತಿದ್ದಾರೆ ಎಂಬುದು ಸ್ಪಷ್ಟ!
ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂಬ ವೈದ್ಯರ ತಪಾಸಣಾ ವರದಿ ಇದ್ದರೂ ಗ್ರಾಮಾಡಳಿತ ನಿರ್ಲಕ್ಷ್ಯ ವಹಿಸಿದ್ದೇಕೆ? ಎಂಬ ಪ್ರಶ್ನೆ ಹಲವಾರು ಸಂಶಯಗಳನ್ನು ಮೂಡಿಸುತ್ತಿದೆ.
ತಾಲ್ಲೂಕು ಪಂಚಾಯಿತಿ ಇಒ ಹಾಗೂ ತಹಶೀಲ್ದಾರರಿಗೆ ಕುಡಿಯಲು ನೀರು ಯೋಗ್ಯವಿಲ್ಲ ಎಂದು ಹಲವು ಬಾರಿ ಮನವಿ ಸಲ್ಲಿಸಿದರೂ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿರುವುದು ಗಂಭೀರ ಪರಿಣಾಮ ಎದುರಿಸುವಂತೆ ಆಗಿದೆ. ನಿತ್ಯ ಹಳ್ಳಿ ಸುತ್ತುವ ಶಾಸಕರ ಗಮನಕ್ಕೆ ಈ ಪರಿಸ್ಥಿತಿ ಬಗ್ಗೆ ಗಮನಕ್ಕೆ ಬಾರದೇ ಇರುವುದು ಅಚ್ಚರಿ ಮೂಡಿಸಿದೆ.
ಜನಜೀವನಕ್ಕೆ ಅವಶ್ಯವಿರುವ ಜೀವ ಜಲ ವಿಷವಾಗಿ ಪರಿಣಮಿಸಿದರೆ ಗ್ರಾಮಸ್ಥರು ಬದುಕುವುದಾದರೂ ಹೇಗೆ. ಹಲವಾರು ಗ್ಯಾರಂಟಿಗಳನ್ನು ನೀಡುತ್ತಿರುವ ಸರ್ಕಾರ ಹಾಗೂ ಸರ್ಕಾರದ ಪ್ರತಿನಿಧಿಗಳು ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರಿನ ಗ್ಯಾರಂಟಿಯನ್ನೂ ನೀಡಿ ನಾಗರಿಕರ ಸ್ವಾಸ್ತ್ಯ ರಕ್ಷಣೆಗೆ ಮುಂದಾಗಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.
ಕೆರೆಯ ನೀರು ಕಲುಷಿತಗೊಂಡು ಗ್ರಾಮಸ್ಥರು ರೋಗಗಳಿಂದ ಬಳಲುವಂತಾಗಿದೆ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದೆ. ಆಡಳಿತದ ನಿರ್ಲಕ್ಷ್ಯದಿಂದ ಹೀಗಾಗಿದೆವಿರಪಾಕ್ಷಗೌಡ ಕುಲಕರ್ಣಿ ಗ್ರಾಮಸ್ಥ
ಕೆರೆಯ ನೀರು ಕಲುಷಿತಗೊಂಡಿದೆ ಎಂದು ಗ್ರಾಮಸ್ಥರ ದೂರಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದುಭಾಗ್ಯಶ್ರೀ ಜಹಗೀರದಾರ ತಾ.ಪಂ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.