ಹುಬ್ಬಳ್ಳಿ: ನಗರದ ವಿವಿಧೆಡೆ ಗುರು ಪೂರ್ಣಿಮೆಯನ್ನು ಗುರುವಾರ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆ ಮತ್ತು ಸಂಜೆ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ, ಪೂಜೆ, ಭಜನೆ, ಆರಾಧನೆ, ಸ್ಮರಣೆ ಮಾಡಿದರು.
ಸಾಯಿ ಮಂದಿರ: ಇಲ್ಲಿನ ಹಳೇ ಕೋರ್ಟ್ ಹತ್ತಿರದ ಸಾಯಿ ಮಂದಿರದಲ್ಲಿ ಶಿರಡಿ ಸಾಯಿ ಸದ್ಭಕ್ತ ಮಂಡಳಿಯಿಂದ ಗುರುಪೂರ್ಣಿಮೆ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಕಾಕಡಾರತಿ, ಮಂಗಲಸ್ನಾನ, ಅಲಂಕಾರ, ಪೂಜೆ, ಆರತಿ, ಸಚ್ಚರಿತ್ರೆ ಪಾರಾಯಣ, ಮಹಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಸಾಯಿಬಾಬಾ ಸ್ವಾಮಿಯ ದರ್ಶನ ಪಡೆದರು.
ಸಂಜೆ ಸಾಯಿಬಾಬಾರ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ರಥೋತ್ಸವ ಮತ್ತು ಸಾಯಿಬಾಬಾರ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯಮೇಳ, ಭಜನೆಯೊಂದಿಗೆ ವಿವಿಧೆಡೆ ಸಾಗಿ ಮರಳಿ ಮಂದಿರ ತಲುಪಿತು. ರಾತ್ರಿ ಸಾಯಿ ಮಂದಿರದಲ್ಲಿ ಅಖಂಡ ಭಜನೆ ಜರುಗಿತು.
ಸಾಯಿ ಮಂದಿರದಲ್ಲಿ ನಡೆದ ಗುರುಪೂರ್ಣಿಮೆ ಉತ್ಸವದ ಸಭಾ ಕಾರ್ಯಕ್ರಮವನ್ನು ಗಂಗಾವತಿ ಸಿಲ್ಕ್ ಪ್ಯಾಲೇಸ್ ಮಾಲೀಕರಾದ ಪಾರ್ವತಿ ಆನಂದ ಕಮತಗಿ ಉದ್ಘಾಟಿಸಿದರು.
ಬಸವರಾಜ ಅಂಬಲಿ, ಗುರುಪೂರ್ಣಿಮೆ ಉತ್ಸವ ಸಮಿತಿಯ ಉಸ್ತುವಾರಿ ಅಧ್ಯಕ್ಷ ಬ್ರಜ್ ಮೋಹನ್ ಭುತಡಾ, ಉತ್ಸವದ ಅಧ್ಯಕ್ಷೆ ಪ್ರಿಯಾಂಕಾ ಕಠಾರೆ, ಧನರಾಜ ಜೋತವಾನಿ, ರೀತೇಶ ತಾತುಸ್ಕಾರ, ಪ್ರಸಾದ ಹಿರೇಮಠ, ಈರಣ್ಣ ಪೂಜಾಮಠ, ಮಂಗಳ ಹಿಪ್ಪರಗಿ ಮಾತನಾಡಿದರು.
ಮಂಡಳಿಯ ಅಧ್ಯಕ್ಷ ಮಹದೇವ ಮಾಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶರಣಪ್ಪ ದೇವನೂರ, ಕೋಶಾಧ್ಯಕ್ಷ ನರಸಿಂಗಸಾ ರತನ್, ಕಾರ್ಯದರ್ಶಿ ಪಿ.ಎನ್. ಧೋಂಗಡಿ, ಸಹ ಕಾರ್ಯದರ್ಶಿ ಪ್ರಕಾಶ ಚಳಗೇರಿ ಮತ್ತು ನಿರ್ದೇಶಕರಾದ ಮೋಹನ ಗಿರಡ್ಡಿ, ಗೋವಿಂದ ಕೋಟಕರ, ಪವಿತ್ರಾ ಕಡಪಟ್ಟಿ ಇದ್ದರು.
ಭಗಿನಿ ನಿವೇದಿತಾ ವಿದ್ಯಾಲಯ: ಇಲ್ಲಿನ ನವನಗರದ ಭಗಿನಿ ನಿವೇದಿತಾ ವಿದ್ಯಾಲಯದಲ್ಲಿ ಗುರು ಪೂರ್ಣಿಮೆ ಆಚರಿಸಲಾಯಿತು.
ವಕ್ತಾರರಾದ ರಾಜು ಹೈಬತ್ತಿಯವರು ಗುರುಪೂರ್ಣಿಮೆಯ ಹಿನ್ನೆಲೆ, ಮಹತ್ವ ಮತ್ತು ಗುರುವಿನ ಆಯ್ಕೆ ಮತ್ತು ಗುರುದಕ್ಷಿಣೆಯ ಬಗ್ಗೆ ಮಾತನಾಡಿದರು.
ಶಾಲೆಯ ಅಧ್ಯಕ್ಷ ಕರವೀರಪ್ಪ ಮಡಿವಾಳರ ಅಧ್ಯಕ್ಷತೆ ವಹಿಸಿದ್ದರು. ಶಕುಂತಲಾ ಬೀರಣ್ಣವರ ಪಾಲ್ಗೊಂಡಿದ್ದರು. ಸುಜಾತಾ ಬೆಟಗೇರಿ, ರಕ್ಷಾ ಚವಟೆ, ಪದ್ಮಜಾ ನವಲಿ, ಕಸ್ತೂರಿ ಒಡೆಯರ ಇದ್ದರು.
ಸಿದ್ಧಾರೂಢ ಮಠ:
ಪಲ್ಲಕ್ಕಿ ರಥೋತ್ಸವ ಸಂಭ್ರಮ ಹುಬ್ಬಳ್ಳಿ: ನಗರದ ಸಿದ್ಧಾರೂಢ ಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ ಪಲ್ಲಕ್ಕಿ ರಥೋತ್ಸವ ಸಂಭ್ರದಿಂದ ಜರುಗಿತು. ಬೆಳಿಗ್ಗೆ ಕಾಕಡಾರತಿ ಪೂಜೆ ಅಭಿಷೇಕ ಮಧ್ಯಾಹ್ನ ಅನ್ನ ಸಂತರ್ಪಣೆ ಸಂಜೆ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ನಡೆಯಿತು. ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕಾಡರಕೊಪ್ಪ ಪೂರ್ಣಾನಂದ ಆಶ್ರಮದ ದಯಾನಂದ ಸರಸ್ವತಿ ಸ್ವಾಮೀಜಿ ‘ಪ್ರತಿಯೊಬ್ಬರು ಜೀವನವನ್ನು ಪರಿಪೂರ್ಣವಾಗಿ ನಡೆಸಬೇಕಾದರೆ ಗುರು ಉಪದೇಶ ಮುಖ್ಯ’ ಎಂದರು. ಚಿಕ್ಕನಂದಿ ಹಾಗೂ ಮಹಾಲಿಂಗಪುರದ ಸಿದ್ಧಾರೂಢ ದರ್ಶನ ಪೀಠದ ಪೀಠಾಧ್ಯಕ್ಷ ಸಹಜಾನಂದ ಸ್ವಾಮೀಜಿ ನೇತೃತ್ವ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಚೇರ್‌ಮನ್ ಸಿ.ಎ.ಚೆನ್ನವೀರ ಮುಂಗುರವಾಡಿ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಶಾಮಾನಂದ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಗುರೂಜಿ ಆತ್ಮಾನಂದ ಸ್ವಾಮಿ ಶಾಂತಾನಂದ ಸ್ವಾಮಿ ಶಶಿಕಲಾ ಮಾತಾ ಮಾಜಿ ಧರ್ಮದರ್ಶಿ ಎಸ್.ಐ ಕೋಳಕೂರ ಮುಖಂಡರು ಕಮಿಟಿ ಸದಸ್ಯರು ಇದ್ದರು.
‘ಗುರುವರ್ಯರ ಸ್ಮರಣೆಗೆ ಹಂಬಲಿಸುವ ಹಬ್ಬ’
ಇಲ್ಲಿನ ಆರ್.ವಿ.ಎಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಖನ್ನೂರಿನಲ್ಲಿ ಗುರುಪೂರ್ಣಿಮೆಯನ್ನು ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಸಲ್ಲಿಸಿ ಅವರ ಸೇವೆಯನ್ನು ಸ್ಮರಿಸಿದರು. ಅತಿಥಿ ಪ್ರಗತಿಪರ ರೈತ ಶೌಕತ್ ಅಲಿ ಹಜಾರೆ ಸಾಬ್ ಲಂಬೂನವರವರ ‘ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನವನ್ನು ಸದಾ ಗೌರವದಿಂದ ಸ್ವೀಕರಿಸಬೇಕು. ಬದುಕು ನೀಡಿದ ಗುರುವರ್ಯರ ಸ್ಮರಣೆಗೆ ಹಂಬಲಿಸುವ ಹಬ್ಬ ಗರುಪೂರ್ಣಿಮೆ’ ಎಂದರು. ಆರ್.ವಿ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಜಂಗ್ಲಪ್ ಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.