ಧಾರವಾಡ: ‘ದಂಪತಿಗಳ ಸಾಮರಸ್ಯ ಗಟ್ಟಿಗೊಂಡಷ್ಟೂ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಲಲಿತಾ ಮತ್ತು ಪ್ರೊ. ಸಿ.ವಿ.ಕೆರಿಮನಿ ದತ್ತಿ ಅಂಗವಾಗಿ ಆಯೋಜಿಸಿದ್ದ ಸಾಹಿತ್ಯ ಮತ್ತು ಸಾಮರಸ್ಯ ಉಪನ್ಯಾಸ ಮತ್ತು ಸಾಹಿತ್ಯ ದಂಪತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೌಟುಂಬಿಕ ಸಾಮರಸ್ಯ ಸಾಮಾಜಿಕ ಸಾಮರಸ್ಯಕ್ಕೆ ಮಾಗದರ್ಶಿಯಾಗುತ್ತದೆ. ಸಮರಸವೇ ಜೀವನ ಎಂಬ ಬೇಂದ್ರೆಯವರ ಮಾತಿನಂತೆ ಬದುಕಿನ ಬಂಡಿ ಸಮನಾಗಿ ಸಾಗಿದಾಗ ಸಾಮರಸ್ಯ ಉಂಟಾಗಿ ಜೀವನ ಸಾರ್ಥಕವಾಗುತ್ತದೆ’ ಎಂದರು.
‘ಸ್ವಾರ್ಥದ ಬದುಕು ಸಂಸಾರಕ್ಕೆ ಕಂಟಕವಾಗುತ್ತದೆ. ಅಂತಃಕರಣದಿಂದ ಆರ್ದ್ರತೆ ಹುಟ್ಟಬೇಕಾದದ್ದು ಇಂದಿನ ಅಗತ್ಯವಾಗಿದೆ. ಸಾಮಾನ್ಯವಾಗಿ ಮನುಷ್ಯ ಸಂಬಂಧಗಳ ಬದುಕೇ ಬರವಣಿಗೆಯಾಗಿರುತ್ತದೆ. ವಾತ್ಸಲ್ಯ, ಮಮತೆಯ ಬದುಕು ನೀಳಗತೆಯ ಬದುಕಾಗುತ್ತದೆ. ಆಸೆಗಳನ್ನು ಹುರಿಗೊಳಿಸಿದಷ್ಟು ಆ ಹುರಿ ಎಂಬ ಮನೋರಥ ಸಾಹಿತ್ಯದೆಡೆಗೆ ಎಳೆದುಕೊಂಡು ಹೋಗುತ್ತದೆ’ ಎಂದರು.
‘ಮನುಷ್ಯ ಬಾಳಿನಲ್ಲಿ ಇದ್ದುದನ್ನೇ ಸಾಹಿತ್ಯ ರೂಪದಲ್ಲಿ ಬಳುವಳಿಯಾಗಿ ಕೊಡಬಲ್ಲ. ಜೊತೆಗೆ ಬದುಕುವವರನ್ನು ಗೌರವಿಸುತ್ತಾ ಹೋದಂತೆ ಉತ್ಕೃಷ್ಟವಾದ ಸಾಹಿತ್ಯ ನಿರ್ಮಾಣವಾಗಬಲ್ಲದು’ ಎಂದರು.
ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ‘ಹನ್ನೆರಡನೇ ಶತಮಾನದಿಂದಲೇ ಸಾಹಿತ್ಯ ದಂಪತಿಗಳ ಪರಂಪರೆ ಬೆಳೆದು ಬಂದುದನ್ನು ಕಾಣುತ್ತೇವೆ. ಜೇಡರ ದಾಸಿಮಯ್ಯ ದುಗ್ಗಳೆ, ಬಸವಣ್ಣ ನೀಲಮ್ಮ, ಆಯ್ದಕ್ಕಿ ಲಕ್ಕಮ್ಮ ಮಾರಯ್ಯ, ಮೋಳಿಗೆಯ ಮಾರಯ್ಯ ಮಾದೇವಿ, ಹಡಪದ ಅಪ್ಪಣ್ಣ ಲಿಂಗಮ್ಮ ಮೊದಲಾದ ದಂಪತಿಗಳು ವಚನ ಸಾಹಿತ್ಯ ರಚನೆ ಮಾಡಿದ್ದಾರೆ. ಬಂದುದನ್ನು ಅರಿತ ಬಳಸುವವಳು, ಬಂದದ್ದರಲ್ಲಿ ಸಂತೋಷಪಡಿಸುವವಳು ನಿಜವಾದ ಹೆಂಡತಿ ಎಂದು ಜೇಡರದಾಸಿಮಯ್ಯ ಹೇಳಿದ್ದಾನೆ. ಪ್ರಭುದೇವರು ಉಭಯ ದೃಷ್ಟಿ, ಏಕ ದೃಷ್ಟಿಯಲ್ಲಿ ಕಾಂಬಂತೆ ದಂಪತಿಗಳು ಏಕಭಾವವಾದಲ್ಲಿ ಗುಹೇಶ್ವರ ಲಿಂಗಕ್ಕೆ ಅರ್ಪಿತ ಎಂಬ ಮಾತನ್ನು ಹೇಳಿದ್ದಾನೆ’ ಎಂದರು.
ಪ್ರೊ. ಚಂದ್ರಶೇಖರ ವಸ್ತ್ರದ ಹಾಗೂ ಚಿನ್ನವ್ವ ವಸ್ತ್ರದ ಸಾಹಿತ್ಯ ದಂಪತಿಗೆ ಕೆರಿಮನಿ ದಂಪತಿ ಹೆಸರಿನ ಸಾಹಿತ್ಯ ದಂಪತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ವಸ್ತ್ರದ, ತಮ್ಮ ದಾಂಪತ್ಯ ಜೀವನದ ಸಾಮರಸ್ಯದ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ನಗೆಗಡೆಲಿನಲ್ಲಿ ತೇಲಿಸಿದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳ ಪರ ಸಂಪದಾ ಸುಭಾಷ ಬಕಾಲಿ ಮಾತನಾಡಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.