ಹುಬ್ಬಳ್ಳಿ: ‘ಹವ್ಯಕ ಭಾಷೆ ಪ್ರಾಚೀನ ಕನ್ನಡ ಭಾಷೆಗೆ ಸಾಮೀಪ್ಯ ಹೊಂದಿದೆ. ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಹೊಂದಿದ್ದರೂ, ಸಮಾಜದವರನ್ನು ಮುಖ್ಯಮಂತ್ರಿ, ಸಭಾಪತಿಯನ್ನಾಗಿ ಮಾಡಿದ ಕೀರ್ತಿ ನಮ್ಮದಾಗಿದೆ’ ಎಂದು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ ಹೇಳಿದರು.
ನಗರದ ಗೋಕುಲ ರಸ್ತೆಯ ಲೂತಿಮಠ ಬಡಾವಣೆಯ ಹವ್ಯಕ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹವ್ಯಕ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಪ್ರತಿಯೊಂದು ಆಚರಣೆ, ವಿಚಾರದಲ್ಲಿ ವೈಶಿಷ್ಟ್ಯತೆಯನ್ನು ಹೊಂದಿದ್ದೇವೆ. ಹುಟ್ಟಿದ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಿ ಸಾಧನೆ ಮಾಡಿದವರಾಗಿದ್ದೇವೆ. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಇಂಥ ಕಾರ್ಯಕ್ರಮಗಳು ಅಗತ್ಯ. ಸಮಾಜದೊಂದಿಗೆ ಪರಸ್ಪರ ಬೆರೆತಾಗ ಶಾಂತಿ, ನೆಮ್ಮದಿ ದೊರೆಯುತ್ತದೆ’ ಎಂದರು.
‘ಪರೋಪಕಾರ ಹವ್ಯಕರ ಮೂಲ ಗುಣ. ಲೋಕ ಕಲ್ಯಾಣಕ್ಕಾಗಿ ಹುಟ್ಟಿದವರಾಗಿದ್ದಾರೆ. ರಾಜ್ಯದಲ್ಲಿ ಇಂದಿಗೂ 15 ಸಾವಿರ ಹವ್ಯಕರು ಪುರೋಹಿತ, 10 ಸಾವಿರಕ್ಕೂ ಹೆಚ್ಚು ಮಂದಿ ಶಿಕ್ಷಕ ವೃತ್ತಿಯಲ್ಲಿದ್ದಾರೆ. ಕಷ್ಟ ಎದುರಾಯಿತು ಎಂದು ಕೃಷಿ ಕಾರ್ಯ ಬಿಟ್ಟಿಲ್ಲ’ ಎಂದು ಹೇಳಿದರು.
‘ಇತ್ತೀಚಿಗಿನ ಯುವ ಹವ್ಯಕರು ಮಠಗಳ ಜೊತೆ ನಿಕಟ ಸಂಬಂಧ ಇಟ್ಟುಕೊಂಡಿಲ್ಲ. ಹವ್ಯಕ ಪರಂಪರೆ, ಶ್ರೇಷ್ಠತೆ ಅವರಿಗೆ ತಿಳಿಸುವ ಕಾರ್ಯವಾಗಬೇಕು. ಸಮಾಜ ಚಿಕ್ಕದಾಗಿರುವುದರಿಂದ ಎಚ್ಚರಿಕೆಯಿಂದ ಇದ್ರು, ಸಮುದಾಯದ ರಕ್ಷಣೆಗೆ ಮುಂದಾಗಬೇಕು. ಮುಂದಿನ ಪೀಳಿಗೆಗೆ ನಮ್ಮ ಪರಂಪರೆ, ಇತಿಹಾಸದ ಬಗ್ಗೆ ತಿಳಿಸುವ ಕೆಲಸವಾಗಬೇಕಿದೆ’ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಹವ್ಯಕರು ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಶಿಸ್ತುಬದ್ಧವಾಗಿರುತ್ತದೆ. ಧಾರವಾಡದಲ್ಲಿ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿ ವಸತಿ ನಿಲಯಕ್ಕೆ ₹10 ಲಕ್ಷ ಅನುದಾನ ನೀಡಲು ಸಿದ್ಧನಿದ್ದೇನೆ’ ಎಂದು ಹೇಳಿದರು.
ಹವ್ಯಕ ಸೇತು ಡೈರೆಕ್ಟರಿ ಬಿಡುಗಡೆ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು. ಅರ್ಥಶಾಸ್ತ್ರಜ್ಞ ಗೋಪಾಲಕೃಷ್ಣ ಕಡೆಕೋಡಿ, ಸಂಸ್ಥೆ ಅಧ್ಯಕ್ಷ ವಿ.ಎಂ. ಭಟ್, ಗೌರವ ಕಾರ್ಯದರ್ಶಿ ಸುದರ್ಶನ ಜಿ.ಎಚ್., ಎಂ.ಕೆ. ಹೆಗಡೆ, ಪತ್ರಕರ್ತ ಅರುಣಕುಮಾರ ಹಬ್ಬು ಇತರರು ಪಾಲ್ಗೊಂಡಿದ್ದರು.
ಹವ್ಯಕ ಹಬ್ಬದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ, ಚಿತ್ರಕಲಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ಅಡುಗೆ ಸ್ಪರ್ಧೆ, ಆರತಿಕಟ್ಟು ಸ್ಪರ್ಧೆ, ಹಾಡಿನ ಸ್ಪರ್ಧೆಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.