ADVERTISEMENT

ಪಾಲಿಕೆ ಬಜೆಟ್ ₹919 ಕೋಟಿ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ; ₹36. 73 ಲಕ್ಷ ಉಳಿತಾಯ ಬಜೆಟ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 2:01 IST
Last Updated 16 ಮಾರ್ಚ್ 2022, 2:01 IST
pdf Hubli info
pdf Hubli info   

ಹುಬ್ಬಳ್ಳಿ: ಪಾಲಿಕೆಯ 2022–2023ನೇ ಸಾಲಿನ ಬಜೆಟ್‌ನ ಒಟ್ಟು ಮೊತ್ತ ₹919 ಕೋಟಿಯಾಗಿದ್ದು, ₹36.73 ಲಕ್ಷ ಉಳಿತಾಯ ತೋರಿಸಲಾಗಿದೆ.

ವಿವಿಧ ತೆರಿಗೆಗಳಿಂದ ಪಾಲಿಕೆಯು ₹381 ಕೋಟಿ ಆದಾಯ ನಿರೀಕ್ಷಿಸಿದೆ. ಇದರೊಂದಿಗೆ ರಾಜ್ಯ ಸರ್ಕಾರದೊಂದಿಗೆ ವಿವಿಧ ಯೋಜನೆಗಳಡಿ ಅನುದಾನ ದೊರೆಯಲಿದೆ.

ಪಾಲಿಕೆ ವ್ಯಾಪ್ತಿಯ ಪ್ರತಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ಉದ್ದೇಶಿಸಲಾಗಿದೆ. ಅದಕ್ಕಿರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಟ್ಟಡ ಪರವಾನಗಿಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಆರಂಭಿಕ ಹಂತದಲ್ಲೇ ಅನುಷ್ಠಾನಗೊಳಿಲು ಉದ್ದೇಶಿಸಲಾಗಿದೆ. ಮಾರುಕಟ್ಟೆ ಶುಲ್ಕ, ಜಾಹೀರಾತು ಶುಲ್ಕ ಮುಂತಾದವುಗಳಿಗೆ ತಂತ್ರಜ್ಞಾನದ ಸ್ಪರ್ಶ ನೀಡುವ ಜೊತೆಗೆ, ನಿಗದಿತ ಸಮಯದಲ್ಲಿ ಶುಲ್ಕ ವಸೂಲಿಗೆ ಮತ್ತಷ್ಟು ಕ್ರಮ ಕೈಗೊಳ್ಳಲು ಒತ್ತು ನೀಡಲಾಗಿದೆ. ಬಜೆಟ್‌ ಅನುಮೋದನೆಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ADVERTISEMENT

ಸೌಂದರ್ಯೀಕರಣಕ್ಕೆ ₹5 ಕೋಟಿ

ಹುಬ್ಬಳ್ಳಿಯ ಸೌಂದರ್ಯ ವೃದ್ಧಿಗಾಗಿ, ನಗರದ ಪ್ರವೇಶದ್ವಾರದಂತಿರುವ ಗಬ್ಬೂರು ವೃತ್ತ ಸೇರಿದಂತೆ, ವಿವಿಧೆಡೆ ಸೌಂದರ್ಯೀಕರಣಕ್ಕಾಗಿ ₹5 ಕೋಟಿ ಮೀಸಲಿಡಲಾಗಿದೆ. ನಗರ ಪ್ರವೇಶಿಸುವ ಮುಖ್ಯ ರಸ್ತೆಗಳು ಹಾಗೂ ವೃತ್ತಗಳನ್ನು ವಿಸ್ತರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವುದಕ್ಕೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ₹15 ಕೋಟಿ ನಿಗದಿಪಡಿಸಲಾಗಿದೆ. ಪಾರ್ಕಿಂಗ್ ಸ್ಥಳಗಳ ಅಭಿವೃದ್ಧಿಗೆ ₹7 ಕೋಟಿ ಹಾಗೂ ವ್ಯಾಪಾರ ವಲಯಗಳ ಅಭಿವೃದ್ಧಿಗೆ ₹6 ಕೋಟಿ ತೆಗೆದಿರಿಸಲಾಗಿದೆ.

₹5 ಕೋಟಿಯಲ್ಲಿ ‘ತಿನಿಸು ಕಟ್ಟೆ’

ವಿವಿಧ ರೀತಿಯ ತಿನಿಸುಗಳು ಒಂದೆಡೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ,ಈ ಬಾರಿಯ ಬಜೆಟ್‌ನಲ್ಲಿ ಧಾರವಾಡದ ಹೃದಯ ಭಾಗದಲ್ಲಿ ₹5 ಕೋಟಿ ವೆಚ್ಚದಲ್ಲಿ ‘ತಿನಿಸು ಕಟ್ಟೆ’ ನಿರ್ಮಿಸಲು ಉದ್ದೇಶಿಸಿದೆ. ಕಡಿಮೆ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್‌ಗೆ ₹2.50 ಕೋಟಿ ಅನುದಾನ ಮೀಸಲಿರಿಸಿದೆ.

‘ಅಭಿವೃದ್ಧಿ ಕಾರ್ಯಗಳ ಮುಂದುವರಿಕೆ ಜೊತೆಗೆ, ಬಜೆಟ್‌ನಲ್ಲಿ ಒಂದಿಷ್ಟು ಹೊಸ ಘೋಷಣೆಗಳನ್ನು ಮಾಡಲಾಗಿದೆ. ಬಜೆಟ್‌ಗೆ ಪ್ರಾದೇಶಿಕ ಆಯುಕ್ತರ ಅನುಮತಿ ಪಡೆದು, ಸರ್ಕಾರದ ಅನುಮೋದನೆಗೆ ಕಳಿಸಲಾಗಿದೆ ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

₹2 ಕೋಟಿಯಲ್ಲಿ ಮಹಿಳಾ ಬಜಾರ್

ಅವಳಿ ನಗರದಲ್ಲಿ ಮಹಿಳಾ ಕೇಂದ್ರಿತ ವ್ಯಾಪಾರ ಚಟುವಟಿಕೆಗಳಿಗೆ ಒತ್ತು ನೀಡಲು ಮುಂದಾಗಿರುವ ಪಾಲಿಕೆಯು, ಧಾರವಾಡದಲ್ಲಿ ಮಹಿಳೆಯರಿಗಾಗಿಯೇ ₹2 ಕೋಟಿ ವೆಚ್ಚದಲ್ಲಿ ಮಹಿಳಾ ಬಜಾರ್ ಮತ್ತು ಹುಬ್ಬಳ್ಳಿಯಲ್ಲಿ₹2 ಕೋಟಿ ವೆಚ್ಚದಲ್ಲಿ ನಗರ ಮೇಳ ಆರಂಭಿಸಲಿದೆ. ಮಹಿಳೆಯರ ಸುರಕ್ಷತೆಗಾಗಿ ಬಸ್ ನಿಲ್ದಾಣ, ಪ್ರಮುಖ ವೃತ್ತಗಳು ಸೇರಿದಂತೆ ವಿವಿಧೆಡೆ ₹2 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಿದೆ.

ಸೌರಶಕ್ತಿ ಫಲಕ ಅಳವಡಿಕೆಗೆ ₹1 ಕೋಟಿ

ಮಹಾನಗರ ಪಾಲಿಕೆಯ ಕಟ್ಟಡಗಳ ಮೇಲೆ, ಸೌರಶಕ್ತಿ ಫಲಕಗಳನ್ನು ಅಳವಡಿಸಲು ₹1 ಕೋಟಿ ಮೀಸಲಿಡಲಾಗಿದೆ. ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಕಚೇರಿಗಳಲ್ಲೇ ಸೌರಶಕ್ತಿ ಉತ್ಪಾದಿಸುವ ಮೂಲಕ, ಸಾಂಪ್ರದಾಯಿಕ ವಿದ್ಯುತ್ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಲು ಮುಂದಾಗಿದೆ.

ಯಾವುದಕ್ಕೆ ಎಷ್ಟು ಮೊತ್ತ ನಿಗದಿ?

– ₹72.98 ಕೋಟಿ: ಘನತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯೀಕರಣ ನಿರ್ವಹಣೆ

– ₹18.1 ಕೋಟಿ: ರಸ್ತೆ, ಪಾದಚಾರಿ ಮಾರ್ಗ, ತೆರೆದ ಚರಂಡಿ, ಒಳ ಚರಂಡಿಗಳ ನಿರ್ಮಾಣ

– ₹18 ಕೋಟಿ: ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ

– ₹12.70 ಕೋಟಿ: ಬಡತನ ನಿರ್ಮೂಲನೆ, ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯ

– ₹8.78 ಕೋಟಿ: ಪಾಲಿಕೆಯ ಆಸ್ಪತ್ರೆಗಳ ನಿರ್ವಹಣೆ

– ₹5.78 ಕೋಟಿ: ನಗರ ಅರಣ್ಯೀಕರಣ, ಉದ್ಯಾನಗಳ ನಿರ್ವಹಣೆ

– ₹10 ಲಕ್ಷ: ಪತ್ರಕರ್ತರ, ಆಟೊ ಚಾಲಕರ, ಕಲಾವಿದರ ಕ್ಷೇಮಾಭಿವೃದ್ಧಿ ಸಂಘಕ್ಕೆ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.