ADVERTISEMENT

₹11.71 ಕೋಟಿ ದಂಡ ವಿಧಿಸಿದ ಹುಬ್ಬಳ್ಳಿ ಧಾರವಾಡ ಪಾಲಿಕೆ

ನಿಯಮ ಉಲ್ಲಂಘನೆ: ಕಟ್ಟಡ ಮಾಲೀಕರಿಗೆ ಬಿಸಿ ಮುಟ್ಟಿಸಿದ ಎಚ್‌ಡಿಎಂಸಿ

ಎಂ.ನವೀನ್ ಕುಮಾರ್
Published 26 ಸೆಪ್ಟೆಂಬರ್ 2022, 4:53 IST
Last Updated 26 ಸೆಪ್ಟೆಂಬರ್ 2022, 4:53 IST
ಅಂಕಿ ಅಂಶ
ಅಂಕಿ ಅಂಶ   

ಹುಬ್ಬಳ್ಳಿ: ಕಟ್ಟಡ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ‘ದಂಡಾಸ್ತ್ರ’ ಪ್ರಯೋಗಿಸುತ್ತಿದೆ.

ಪರವಾನಗಿ ಪಡೆಯದ ಹಾಗೂ ಉಪ ವಿಧಿ ಉಲ್ಲಂಘನೆಯ 3,667 ಪ್ರಕರಣಗಳನ್ನು ಈಗಾಗಲೇ ಪತ್ತೆ ಮಾಡಿದ್ದು, ₹11.71 ಕೋಟಿ
ದಂಡ ವಿಧಿಸಿದೆ. ₹1.36 ಕೋಟಿಯನ್ನು ಈಗಾಗಲೇ ವಸೂಲಿ ಮಾಡಲಾಗಿದೆ. ಅಧಿಕಾರಿಗಳ ಈ ಕ್ರಮ
ದಿಂದಾಗಿ ಪಾಲಿಕೆಗೆ ಭರ್ಜರಿ ಆದಾಯ ಬರುತ್ತಿದೆ. ಪಾಲಿಕೆ ಆದಾಯದ ಗಳಿಕೆಯ ಮೇಲೆ ಇದು ದೀರ್ಘ
ಕಾಲೀನ ಸಕಾರಾತ್ಮಕ ಪರಿಣಾಮವನ್ನು ಬೀರಲಿದೆ.

ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ಪತ್ತೆ ಮಾಡಲು ಪಾಲಿಕೆಯ 12 ವಲಯಗಳಿಗೆ ಮೂವರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿರುವ ಪಾಲಿಕೆ ಕಮಿಷನರ್ ಗೋಪಾಲ
ಕೃಷ್ಣ ಬಿ., ಅವರು, ಖುದ್ದಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪ್ರಕರಣ ಪತ್ತೆ, ದಂಡ ವಿಧಿಸುವುದು ಹಾಗೂ ದಂಡ ವಸೂಲಿ ಕುರಿತು ಅಧಿಕಾರಿಗಳೊಂದಿಗೆ ಪ್ರತಿವಾರ ವಿಡಿಯೊ ಕಾನ್ಫರೆನ್ಸ್ ಸಹ ಮಾಡುತ್ತಿದ್ದಾರೆ. ಪರವಾನಗಿಯನ್ನೇ ಪಡೆಯದೆ ಪಾಲಿಕೆಗೆ ಭಾರಿ ನಷ್ಟ ಉಂಟು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಮಿಷನರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ADVERTISEMENT

ದಾಖಲೆ– ವಾಸ್ತವದಲ್ಲಿ ವ್ಯತ್ಯಾಸ: ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಅವಳಿನಗರದಲ್ಲಿ ಸಂಪೂರ್ಣ ಸ್ವಚ್ಛತೆ ಕಾಯ್ದುಕೊಳ್ಳುವ ಉದ್ದೇಶದಿಂದ ಖಾಲಿ ಜಾಗ ಮತ್ತು ನಿವೇಶನಗಳ ಕಸ ತೆರವುಗೊಳಿಸಲು ಗೋಪಾಲಕೃಷ್ಣ ಅವರು ಮುಂದಾಗಿದ್ದರು. ಖಾಲಿ ನಿವೇಶನಗಳ (ಪಿಐಡಿ; ಆಸ್ತಿ ದಾಖಲೆ ಸಂಖ್ಯೆ)
ದಾಖಲೆ ಹಿಡಿದು ಸ್ಥಳ ಪರಿಶೀಲನೆ ಮಾಡಿದಾಗ ದಾಖಲೆ ಮತ್ತು ವಾಸ್ತವದಲ್ಲಿ ಭಾರಿ ವ್ಯತ್ಯಾಸ ಇರುವುದು ಪತ್ತೆಯಾಯಿತು.

ಖಾಲಿ ನಿವೇಶನದಲ್ಲಿ ಅದಾಗಲೇ ದೊಡ್ಡ ಕಟ್ಟಡಗಳು ತಲೆ ಎತ್ತಿದ್ದವು! ಇಂತಹ ಕೆಲವು ಪ್ರಕರಣಗಳು ಪತ್ತೆಯಾದ ನಂತರ ಕೂಲಕಂಷ ತನಿಖೆಗೆ ಕಮಿಷನರ್ ಸೂಚನೆ ನೀಡಿದ್ದರು. ಕಂದಾಯ ವಿಭಾಗದ ಸಿಬ್ಬಂದಿ ತಿಂಗಳುಗಳ ಕಾಲ ಸತತವಾಗಿ ಸ್ಥಳ ಪರಿಶೀಲನೆ ನಡೆಸಿದಾಗ ಭಾರಿ ಸಂಖ್ಯೆಯಲ್ಲಿ ಉಲ್ಲಂಘನೆ ಪ್ರಕರಣಗಳು ಪತ್ತೆಯಾದವು.

ನೋಟಿಸ್ ಪಡೆದಿರುವವರು ತಡಮಾಡದೆ ಕೂಡಲೇ ಪಾಲಿಕೆಗೆ ದಂಡ ಪಾವತಿಸಬೇಕು ಎನ್ನುತ್ತಾರೆ ಕಂದಾಯ ವಿಭಾಗದ ಉಪ ಆಯುಕ್ತಕಲ್ಲೋಳಿಕರ್‌.

‘ಸಂಪೂರ್ಣ ಪತ್ತೆಯ ಗುರಿ’

‘ನಿಯಮ ಉಲ್ಲಂಘನೆಯ ಎಲ್ಲ ಪ್ರಕರಣಗಳನ್ನು ಪತ್ತೆ ಮಾಡುವ ವರೆಗೂ ವಿರಮಿಸುವುದಿಲ್ಲ. ಈಗಾಗಲೇ ವಿಧಿಸಿರುವ ದಂಡವನ್ನು ಸಹ ಸಂಪೂರ್ಣವಾಗಿ ವಸೂಲಿ ಮಾಡಲಾಗುವುದು. ದಂಡ ವಿಧಿಸಲು ಮಾನದಂಡ ರೂಪಿಸಲಾಗಿದ್ದು, ನಿಯಮ ಉಲ್ಲಂಘಿಸಿರುವ ಕಟ್ಟಡಕ್ಕೆ ಯಾವ ದಿನಾಂಕದಂದು ವಿದ್ಯುತ್ ಸಂಪರ್ಕ ಲಭ್ಯವಾಗಿದೆಯೋ ಅಂದಿನಿಂದ ದಂಡ ಅನ್ವಯ ಆಗಲಿದೆ. ಶೇ 200ರಷ್ಟು ದಂಡ ವಿಧಿಸಲಾಗುತ್ತಿದೆ’ ಎಂದು ಪಾಲಿಕೆ ಕಮಿಷನರ್ ಗೋಪಾಲಕೃಷ್ಣ ಬಿ., ಅವರು ತಿಳಿಸಿದರು.

ಕೋಟ್‌

ಕಮಿಷನರ್ ಅವರ ವಿಶೇಷ ಆಸಕ್ತಿಯೇ ಅಕ್ರಮ ಪತ್ತೆ ಅಭಿಯಾನದ ರೀತಿಯಲ್ಲಿ ನಡೆಯಲು ಕಾರಣ. ನಮ್ಮ ಸಿಬ್ಬಂದಿ ನಿರಂತರವಾಗಿ ಶ್ರಮವಹಿಸಿ ಅಕ್ರಮ ಪತ್ತೆ ಮಾಡಿದ್ದಾರೆ. ಕಲ್ಲೋಳಿಕರ್, ಕಂದಾಯ ವಿಭಾಗದ ಉಪ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.