ADVERTISEMENT

ರಾಷ್ಟ್ರಧ್ವಜವಿಲ್ಲದ ಧ್ವಜಸ್ತಂಭ; ಕಳಾಹೀನ: ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:52 IST
Last Updated 20 ಜೂನ್ 2025, 15:52 IST
ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣದಲ್ಲಿ ರಾಷ್ಟ್ರಧ್ವಜವಿಲ್ಲದ 75 ಅಡಿ ಎತ್ತರದ ಧ್ವಜಸ್ತಂಭ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣದಲ್ಲಿ ರಾಷ್ಟ್ರಧ್ವಜವಿಲ್ಲದ 75 ಅಡಿ ಎತ್ತರದ ಧ್ವಜಸ್ತಂಭ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಸ್ಥಾಪಿಸಿರುವ 75 ಅಡಿ ಎತ್ತರದ ಧ್ವಜಸ್ತಂಭ, ಆರು ದಿನಗಳಿಂದ ರಾಷ್ಟ್ರಧ್ವಜವಿಲ್ಲದೆ ಕಳಾಹೀನವಾಗಿದೆ.

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಹಾಗೂ ಗಾಳಿಗೆ ರಾಷ್ಟ್ರಧ್ವಜ ಹರಿದಿತ್ತು. ಕಳೆದ ಭಾನುವಾರ ರಾತ್ರಿ ಸಂಪೂರ್ಣ ಹರಿದಿದ್ದರಿಂದ, ಸೋಮವಾರ ಬೆಳಿಗ್ಗೆ ಅಧಿಕಾರಿಗಳು ಅದನ್ನು ತೆರವು ಮಾಡಿದ್ದರು. ವಾರ ಸಮೀಪಿಸುತ್ತ ಬಂದಿದ್ದರೂ, ಹೊಸ ರಾಷ್ಟ್ರಧ್ವಜ ಮಾತ್ರ ಇನ್ನೂ ಮೇಲೇರಿಲ್ಲ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಸವಿನೆನಪಿಗಾಗಿ 2022ರಲ್ಲಿ ಪಾಲಿಕೆ, 75 ಅಡಿ ಉದ್ದದ ರಾಷ್ಟ್ರಸ್ತಂಭ ನಿರ್ಮಿಸಿ, ವರ್ಷಪೂರ್ತಿ ರಾಷ್ಟ್ರಧ್ವಜ ಹಾರಾಡುವಂತೆ ಮಾಡಿತ್ತು. ಅತಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದೆ ಎನ್ನುವುದು ಹೆಮ್ಮೆಯ ವಿಷಯವಾಗಿತ್ತು. ಆದರೆ, ಐದು–ಆರು ದಿನಗಳಿಂದ ಧ್ವಜ ಹಾರಾಡುತ್ತಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ. ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಆಟೊ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಆಗ್ರಹಿಸಿದರು.

ADVERTISEMENT

‘ಚೆನ್ನೈನ ಬಾಲಾ ಎಂಟರ್‌ಪ್ರೈಸೆಸ್ ಕಂಪನಿ ಧ್ವಜಸ್ತಂಭ ನಿರ್ಮಿಸಿದ್ದು, ಅದೇ ಕಂಪನಿ ರಾಷ್ಟ್ರಧ್ವಜ ಪೂರೈಸುತ್ತದೆ. ಪಾಲಿಕೆ ಆವರಣದಲ್ಲಿ ಹಾರಾಡುವ ಧ್ವಜ ರೇಷ್ಮೆ ಬಟ್ಟೆಯದ್ದಾಗಿದ್ದು, 14X21 ಉದ್ದ–ಅಗಲದ ಅಳತೆ ಹೊಂದಿದೆ. ಒಂದು ಧ್ವಜಕ್ಕೆ ₹20 ಸಾವಿರವಿದೆ. ಅದನ್ನು ಪೂರೈಸುವಂತೆ ಪಾಲಿಕೆ ಬಾಲಾ ಕಂಪನಿಗೆ ಆರ್ಡರ್‌ ಹಾಕಬೇಕು. ಈ ಅಳತೆಯ ಧ್ವಜ ಖರೀದಿಸಲು ಹುಬ್ಬಳ್ಳಿಯ ವಿವಿಧೆಡೆ ಹುಡುಕಾಡಿದ್ದು, ಎಲ್ಲೂ ಸಿಕ್ಕಿಲ್ಲ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

‘ಮಳೆ–ಗಾಳಿಗೆ ರಾಷ್ಟ್ರಧ್ವಜ ಹರಿದಿದೆ. ಖರೀದಿಗಾಗಿ ಇವತ್ತು (ಶುಕ್ರವಾರ) ಏಜೆನ್ಸಿಗೆ ಆರ್ಡರ್‌ ಹಾಕಿದ್ದೇವೆ. ನಾಲ್ಕು–ಐದು ದಿನಗಳಲ್ಲಿ ಪೂರೈಕೆಯಾಗಬಹುದು. ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಧ್ವಜ ಇರುವ ಬಗ್ಗೆ ಮಾಹಿತಿಯಿದ್ದು, ಲಭ್ಯವಿದ್ದರೆ ಅಲ್ಲಿಂದಲೇ ಖರೀದಿಸಲಾಗುವುದು’ ಎಂದು ವಲಯಾಧಿಕಾರಿ ಗಿರೀಶ ತಳವಾರ ತಿಳಿಸಿದರು.

‘75 ಅಡಿ ಎತ್ತರದಲ್ಲಿ ಧ್ವಜ ಹಾರಾಡುವುದರಿಂದ ಗಾಳಿಗೆ ಹರಿಯುತ್ತದೆ. ಇದರಿಂದಾಗಿ ವರ್ಷಕ್ಕೆ ಮೂರು–ನಾಲ್ಕು ಧ್ವಜಗಳು ಹಾಳಾಗುತ್ತವೆ. ಒಂದೊಂದು ಧ್ವಜಕ್ಕೆ ₹20 ಸಾವಿರವಿದ್ದು, ಈಗ ಐದು ಧ್ವಜ ಖರೀದಿಗೆ ನಿರ್ಧರಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.