ADVERTISEMENT

ಅನಧಿಕೃತ 25 ಅಂಗಡಿಗಳ ತೆರವು

ಗಬ್ಬೂರಿನಲ್ಲಿ ಮಹಾನಗರ ಪಾಲಿಕೆಯಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 4:45 IST
Last Updated 23 ಸೆಪ್ಟೆಂಬರ್ 2022, 4:45 IST
ಹುಬ್ಬಳ್ಳಿಯ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿ ಬದಿ ಅನಧಿಕೃತವಾಗಿ ತಲೆ ಎತ್ತಿದ್ದ ಡಬ್ಬಾ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ನೆರವಿನೊಂದಿಗೆ ತೆರವು ಮಾಡಿದರು
ಹುಬ್ಬಳ್ಳಿಯ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿ ಬದಿ ಅನಧಿಕೃತವಾಗಿ ತಲೆ ಎತ್ತಿದ್ದ ಡಬ್ಬಾ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ನೆರವಿನೊಂದಿಗೆ ತೆರವು ಮಾಡಿದರು   

ಹುಬ್ಬಳ್ಳಿ: ನಗರದ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿ ಬದಿ ಅನಧಿಕೃತವಾಗಿ ತಲೆ ಎತ್ತಿದ್ದ ಸುಮಾರು 25 ಡಬ್ಬಾ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬುಧವಾರ ತೆರವು ಮಾಡಿದರು.

ಪಾಲಿಕೆ ವಲಯ ಕಚೇರಿ - 11ರ ಸಹಾಯಕ ಆಯುಕ್ತ ಆನಂದ ಕಾಂಬ್ಳೆ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು, ಹೆದ್ದಾರಿ ಪಕ್ಕ ಹಾಗೂ ಒಳ ಭಾಗದ ರಸ್ತೆಗಳ ಪಕ್ಕ ಇದ್ದ ಹೋಟೆಲ್, ಪಾನ್ ಶಾಪ್, ತಿಂಡಿ–ತಿನಿಸು ಮತ್ತು ಟೀ ಅಂಗಡಿ, ಜೆರಾಕ್ಸ್ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳನ್ನು ತೆರವು ಮಾಡಿದರು.

ರಾಷ್ಟ್ರಪತಿ ಅವರು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ಹಾಕಿರುವ ಅಂಗಡಿಗಳನ್ನು ತೆರವು ಮಾಡುತ್ತಿರುವ ಪಾಲಿಕೆ, ಎಲ್ಲಾ ರಸ್ತೆಗಳನ್ನು ಸೌಂದರ್ಯೀಕರಣಕ್ಕೆ ಮುಂದಾಗಿದೆ. ತೆರವು ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ADVERTISEMENT

‘ಮೂರು ದಿನಗಳ ಹಿಂದೆಯೇ ಅಂಗಡಿಗಳನ್ನು ಖಾಲಿ ಮಾಡುವಂತೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಕೆಲವರು ಖಾಲಿ ಮಾಡಿದ್ದರೆ, ಉಳಿದವರು ಹಾಗೆಯೇ ಬಿಟ್ಟಿದ್ದರು. ಬೆಳಿಗ್ಗೆ ಸಿಬ್ಬಂದಿಯೊಂದಿಗೆ ತೆರಳಿ ಅಂಗಡಿಗಳನ್ನು ತೆರವು ಮಾಡಲಾಯಿತು’ ಎಂದು ಪಾಲಿಕೆ ವಲಯ ಕಚೇರಿ - 11ರ ಸಹಾಯಕ ಆಯುಕ್ತ ಆನಂದ ಕಾಂಬ್ಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆ ಅಧಿಕಾರಿಗಳಾದ ಜಸ್ಮೀತಾ, ಸಂಗಮೇಶ ಕೊಪ್ಪದ, ಸಂತೋಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.