ADVERTISEMENT

ಹುಬ್ಬಳ್ಳಿ | ಹೃದಯಾಘಾತ: 6 ತಿಂಗಳಲ್ಲಿ 35 ಸಾವು

ಕೆಎಂಸಿ– ಆರ್‌ಐ: ಹೃದಯ ತಪಾಸಣೆಗೊಳಗಾಗುವವರ ಸಂಖ್ಯೆ ಶೇ 20ರಷ್ಟು ಹೆಚ್ಚಳ

ಶಿವರಾಯ ಪೂಜಾರಿ
Published 4 ಜುಲೈ 2025, 5:51 IST
Last Updated 4 ಜುಲೈ 2025, 5:51 IST
–
   

ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿ– ಆರ್‌ಐ) ಕಳೆದ ಆರು ತಿಂಗಳಲ್ಲಿ 101 ಮಂದಿ ಹೃದ್ರೋಗ ಸಮಸ್ಯೆಯಿಂದ ಮೃತಪಟ್ಟಿದ್ದು, ಅದರಲ್ಲಿ ಹೃದಯಾಘಾತದಿಂದ 35 ಮಂದಿ ಸಾವನ್ನಪ್ಪಿದ್ದಾರೆ.

2025ರ ಜನವರಿಯಿಂದ ಜೂನ್‌ವರೆಗೆ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ 1,449 ಮಂದಿ ಹೃದ್ರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ  ಪಡೆದಿದ್ದಾರೆ. ಅದರಲ್ಲಿ ಹೃದಯಾಘಾತದಿಂದ 40 ವರ್ಷದೊಳಗಿನವರು ಇಬ್ಬರು, ಅದಕ್ಕಿಂತ ಹೆಚ್ಚಿನ ವಯೋಮಾನದ 33 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಜನರು ಆತಂಕಗೊಂಡಿದ್ದಾರೆ. ಧಾರವಾಡ ಜಿಲ್ಲೆ ಮಾತ್ರವಲ್ಲದೆ, ಸುತ್ತಮುತ್ತಲಿನ ಜಿಲ್ಲೆಗಳ ಜನರು ಕೆಎಂಸಿ–ಆರ್‌ಐ ಸೇರಿದಂತೆ ನಗರದ ವಿವಿಧ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ ತಪಾಸಣೆಗೆ ಒಳಗಾಗುತ್ತಿದ್ದಾರೆ.

ADVERTISEMENT

ಈ ಮುಂಚೆ ಹೃದಯ ಸಂಬಂಧ ರೋಗಗಳ ಚಿಕಿತ್ಸೆ ಹಾಗೂ ತಪಾಸಣೆಗಾಗಿ ದಿನವೊಂದಕ್ಕೆ ಅಂದಾಜು 100ರಿಂದ 120 ಜನರು ಕೆಎಂಸಿ–ಆರ್‌ಐ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಕಳೆದ ಮೂರು ವಾರಗಳಿಂದ ಹೃದಯ ತಪಾಸಣೆಗೆ ಬರುವವರ ಸಂಖ್ಯೆ ಶೇ 20ರಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

ಕೆಎಂಸಿ–ಆರ್‌ಐ ಮೂಲಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಹೃದ್ರೋಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದವರ ಸಂಖ್ಯೆ ಈ ವರ್ಷವೇ ಹೆಚ್ಚು. ಪ್ರಸಕ್ತ ವರ್ಷದ ಜೂನ್‌ವರೆಗೆ 13,872 ಮಂದಿ ಹೊರ ರೋಗಿ ಹಾಗೂ 1,752 ಮಂದಿ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಹಾಗೂ ತಪಾಸಣೆಗೆ ಒಳಗಾಗಿದ್ದಾರೆ.

‘ಆಧುನಿಕ ಜೀವನಶೈಲಿಯೇ ಹೃದ್ರೋಗಕ್ಕೆ ಕಾರಣ. ಎದೆ ನೋವು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದ್ದರಿಂದ ಹೃದಯಾಘಾತ ಸಂಭವಿಸಿ ಸಾವಿನ ಪ್ರಕರಣಗಳು ವರದಿ ಆಗುತ್ತಿವೆ’ ಎಂದು ಕೆಎಂಸಿ–ಆರ್‌ಐನ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ ಹಸಬಿ ‘ಪ್ರಜಾವಾಣಿ’ಗೆ ತಿಳಿಸಿದರು.

ಡಾ. ಈಶ್ವರ ಹಸಬಿ
ಅನಾರೋಗ್ಯಕರ ಜೀವನಶೈಲಿಯೇ ಹೃದಯಾಘಾತಕ್ಕೆ ಕಾರಣ. ಉತ್ತಮ ಆಹಾರ ಸೇವಿಸಬೇಕು ದುಶ್ಚಟಗಳಿಂದ ದೂರ ಇರಬೇಕು. ನಿತ್ಯ ವ್ಯಾಯಾಮ ಮಾಡಬೇಕು
ಈಶ್ವರ ಹಸಬಿ ವೈದ್ಯಕೀಯ ಅಧೀಕ್ಷಕ ಕೆಎಂಸಿ–ಆರ್‌ಐ

ಹೃದಯಾಘಾತಕ್ಕೆ ಕಾರಣಗಳೇನು?

* ಅನಾರೋಗ್ಯಕರ ಜೀವನಶೈಲಿ

* ನಿತ್ಯ ವ್ಯಾಯಾಮ ಮಾಡದಿರುವುದು

* ಅಧಿಕ ರಕ್ತದೊತ್ತಡ ಮಧುಮೇಹ

* ಧೂಮಪಾನ ಮಧ್ಯಪಾನ

* ಜಂಕ್‌ಫುಡ್ ಎಣ್ಣೆ ಪದಾರ್ಥ ಸೇವನೆ

* ಮಾನಸಿಕ ಒತ್ತಡ

ಹೃದ್ರೋಗ ತಡೆಗೆ ಏನು ಮಾಡಬೇಕು?

* ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು

* ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಬೇಕು

* ಪ್ರತಿದಿನ ಕನಿಷ್ಠ 2 ಕಿ.ಮೀ ನಡಿಗೆ/ಓಟ

* ಉತ್ತಮ ಆಹಾರ ಹಣ್ಣುಗಳನ್ನು ಸೇವಿಸಬೇಕು

* ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಬೇಕು

* ಸರಿಯಾದ ಸಮಯಕ್ಕೆ ಊಟ ನಿದ್ರೆ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.