ADVERTISEMENT

ಬಿಟಿ ಹತ್ತಿ, ಈರುಳ್ಳಿ ಬೆಳೆಗಳಿಗೆ ಹಾನಿ: ರೈತರು ಕಂಗಾಲು

ಮೆಕ್ಕೆಜೋಳ, ಜೋಳದ ರಾಶಿ ಮಳೆಗೆ ಸಿಲುಕಿ ಹಾಳು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 21:14 IST
Last Updated 17 ನವೆಂಬರ್ 2021, 21:14 IST
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಸಮೀಪದ ರಾಮಗಿರಿ ಗ್ರಾಮದ ಹೊಲವೊಂದರಲ್ಲಿ ನೀರು ನಿಂತಿರುವುದು
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಸಮೀಪದ ರಾಮಗಿರಿ ಗ್ರಾಮದ ಹೊಲವೊಂದರಲ್ಲಿ ನೀರು ನಿಂತಿರುವುದು   

ಹುಬ್ಬಳ್ಳಿ: ಧಾರವಾಡ, ವಿಜಯನಗರ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳು ಸೇರಿ ವಿವಿಧೆಡೆ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದ್ದು ಭತ್ತ, ಕೆಂಪುಮೆಣಸು, ಬಿಟಿ ಹತ್ತಿ, ಈರುಳ್ಳಿ ಬೆಳೆ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಮಳೆಗೆ ಸಿಲುಕಿ ಹಾನಿಯಾಗಿವೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸೇರಿದಂತೆ ಮಂಗಳವಾರ ರಾತ್ರಿ ತಾಲ್ಲೂಕಿನಾದ್ಯಂತ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿದಿದ್ದರಿಂದ ಕೊಯ್ಲಿಗೆ ಬಂದಿದ್ದ ಕೆಂಪುಮೆಣಸು, ಬಿಟಿ ಹತ್ತಿ, ಈರುಳ್ಳಿ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಸದ್ಯ ಕೆಂಪುಮೆಣಸನ್ನು ಗಿಡದಿಂದ ಬಿಡಿಸಿ ಕೆಲವು ರೈತರು ಈಗಾಗಲೇ ಕಣದಲ್ಲಿ ಒಣಗಿಸಲು ಹಾಕಿದ್ದಾರೆ. ಆದರೆ ವಾರದಿಂದ ಆಗಾಗ ಸುರಿಯುತ್ತಿರುವ ಮಳೆ ಅದಕ್ಕೆ ಮಾರಕವಾಗಿದೆ. ತಾಡಪತ್ರಿಯಿಂದ ಇವುಗಳನ್ನು ಮುಚ್ಚಿದ್ದರೂ ಒಳಗೇ ಕೊಳೆತು ನಾರುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಸದ್ಯ ಮೆಣಸಿನಕಾಯಿ ಹಣ್ಣು ಆಗಿದ್ದು ಬಿಡಿಸಲು ಬಂದೇತ್ರಿ. ಆದರ ಮಳಿ ಬಂದು ಎಲ್ಲಾ ಲುಕ್ಸಾನ್ ಆಗೇತಿ. ಮಳಿ ನೀರು ಹಣ್ಣಿಗೆ ಬಡದ್ರಾ ಅದು ಕೊಳೀತದೇ, ಏನ್ ಮಾಡದ್ರೀ? ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಅನ್ನಂಗ ಆಗೇತ್ರೀ ರೈತನ ಬಾಳು’ ಎಂದು ಸಮೀಪದ ಗೋವನಾಳ ಗ್ರಾಮದ ರೈತರಾದ ಚಂದ್ರು ತಳವಾರ, ಶೇಖರಗೌಡ ಕೊರಡೂರ ಅಳಲು ತೋಡಿಕೊಂಡರು.

ADVERTISEMENT

ಇನ್ನು ರೈತರು ಅಲ್ಪಸ್ವಲ್ಪ ಬೆಳೆದ ಈರುಳ್ಳಿಯನ್ನು ಕಿತ್ತು ಒಣ ಹಾಕಿದ್ದರು. ಆದರೆ ಅಕಾಲಿಕ ಮಳೆಗೆ ಸಿಕ್ಕು ಅದೂ ಸಹ ನಾಶವಾಗಿದ್ದು ರೈತನ ಕಣ್ಣಲ್ಲಿ ನೀರು ತರಿಸಿದೆ.

ಈರುಳ್ಳಿ ಬೆಳೆ ಹಾಳು: ವಿಜಯಪುರ ತಾಲ್ಲೂಕಿನ ಜುಮನಾಳ ಗ್ರಾಮದಲ್ಲಿ ಮಳೆ ಪರಿಣಾಮ ಸುಮಾರು 100 ಎಕರೆಗಿಂತ ಹೆಚ್ಚು ಈರುಳ್ಳಿ ಕೊಳೆತು ಹಾಳಾಗಿದೆ. ಈರುಳ್ಳಿ ಗಿಡಗಳು ಮಳೆಯ ರಭಸಕ್ಕೆ ಬುಡಸಮೇತ ಕಿತ್ತು ಚೆಲ್ಲಾಪಿಲ್ಲಿಯಾಗಿ ಹೊಲದಲ್ಲಿ ಬಿದ್ದಿದ್ದು, ರೈತರು ಕಣ್ಣೀರು ಸುರಿಸುವಂತಾಗಿದೆ.

ಉಕ್ಕಿದ ಕೆರೆ– ಕೊಚ್ಚಿದ ಹೋದ ಬೆಳೆ: ಧಾರವಾಡ, ಕಲಘಟಗಿ ಹಾಗೂ ಅಳ್ನಾವರ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಿಂದ ನೀರಸಾಗರ ಜಲಾಶಯ ಕೋಡಿಬಿದ್ದು ಗಂಭ್ಯಾಪುರ, ಎಮ್ಮೆಟ್ಟಿ, ಮುತ್ತಗಿ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಭತ್ತ, ಗೋವಿನಜೋಳ, ಸೋಯಾಬಿನ್, ಜೋಳ ಬೆಳೆಗಳು ನೀರು ಪಾಲಾಗಿವೆ.

ಅಳ್ನಾವರ ತಾಲ್ಲೂಕಿನಲ್ಲಿ ಸುರಿದ ಭಾರೀ ಮಳೆಗೆ ಡವಗಿ ನಾಲಾ ಮತ್ತೆ ಉಕ್ಕಿ ಹರಿಯಿತು. ತಾಲ್ಲೂಕಿನ ಇಂದಿರಮ್ಮನ ಕೆರೆಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಮಳೆಯಿಂದಾಗಿ ಅಳ್ನಾವರ, ಬೆಣಚಿ, ಕಂಬಾರಗಣವಿ, ಕಾಶೆನಟ್ಟಿ ಗ್ರಾಮದ ಗದ್ದೆಗಳಲ್ಲಿದ್ದ ಭತ್ತ ಹಾಗೂ ಕಬ್ಬು ಬೆಳೆಗೆ ಸಾಕಷ್ಟು ಹಾನಿಯಾಗಿದೆ. ಗುಡಗೇರಿಯಲ್ಲಿ ಮೆಣಸಿನಕಾಯಿ, ಹತ್ತಿ ಬೆಳೆ ಮಳೆಯ ಪಾಲಾಗಿವೆ.

ವಿಜಯನಗರ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಸೇರಿದಂತೆ ಹಲವೆಡೆ ರಾತ್ರಿ ಸಾಧಾರಣ ಮಳೆಯಾಗಿದೆ. ರೈತರು ಒಕ್ಕಣೆ ಮಾಡಿ ಒಣಗಲು ಹಾಕಿರುವ ಮೆಕ್ಕೆಜೋಳ, ಜೋಳದ ರಾಶಿ ಮಳೆಗೆ ಸಿಲುಕಿವೆ.

ಲದ್ದಿ ಹುಳು ಬಾಧೆ: ಬಾಗಲಕೋಟೆ ಜಿಲ್ಲೆಯಲ್ಲಿ ಹಿಂಗಾರಿ ಜೋಳ ಮತ್ತು ಗೋವಿನ ಜೊಳದಲ್ಲಿ ಲದ್ದಿ ಹುಳು ಬಾಧೆ (ಫಾಲ್ ಆರ್ಮರ್‌ವರ್ಮ್) ಕಂಡುಬಂದಿದೆ. ಸದ್ಯ ಮೋಡ ಕವಿದ ಹಾಗೂ ತುಂತುರು ಮಳೆಯಿಂದ ಕೂಡಿದ ವಾತಾವರಣ ಇರುವುದರಿಂದ ಈ ಕೀಟದ ಹರಡುವಿಕೆ ಇನ್ನೂ ಹೆಚ್ಚಾಗುವ ಸಂಭವ ಇದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಭತ್ತದ ಬೇಸಾಯಕ್ಕೆ ಹಾನಿ: ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅಬ್ಬರಿಸಿದ್ದ ಮಳೆ, ಬುಧವಾರ ಕಡಿಮೆಯಾಗಿತ್ತು. ದಿನವಿಡೀ ಮೋಡ, ಬಿಸಿಲು ಕಾಣಿಸಿಕೊಂಡಿತ್ತು. ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಭತ್ತದ ಬೆಳೆ ಹಾನಿಯಾಗಿದೆ.

ಹಳಿಯಾಳದಲ್ಲಿ ಅತಿ ಹೆಚ್ಚು 8.3 ಸೆ.ಮೀ ಮಳೆಯಾಗಿದ್ದು ಕಾರವಾರದಲ್ಲಿ 6.9 ಸೆ.ಮೀ ಹಾಗೂ ಜೊಯಿಡಾದಲ್ಲಿ 4.3 ಸೆ.ಮೀ ಮಳೆಯಾಗಿದೆ.

5 ಮನೆಗಳು ಕುಸಿತ: ಎರಡು ಎಮ್ಮೆಗಳು ಸಾವು

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನಾದ್ಯಂತ ರಾತ್ರಿ ಸುರಿದ ಮಳೆಗೆ ವಿವಿಧ ಗ್ರಾಮಗಳಲ್ಲಿ ಐದು ಮನೆಗಳು ಭಾಗಶಃ ಕುಸಿದಿವೆ. ತಾಲ್ಲೂಕಿನ ಉತ್ತಂಗಿಯಲ್ಲಿ ಮೂರು, ಅರಳಿಹಳ್ಳಿ ಮತ್ತು ಗೋವಿಂದಪುರ ತಾಂಡದಲ್ಲಿ ತಲಾ ಒಂದು ಮನೆ ಭಾಗಶಃ ಕುಸಿದು ಬಿದ್ದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಎ.ಎಚ್.ಮಹೇಂದ್ರ ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಗೌಳಿ ದಡ್ಡಿಯಲ್ಲಿ ಎರಡು ಎಮ್ಮೆಗಳು ಸಿಡಿಲಿಗೆ ಮೃತಪಟ್ಟಿವೆ.

***

ಮಳೆಯಿಂದಾಗಿ ಈರುಳ್ಳಿ, ಮೆಣಸಿನ ಬೆಳೆಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಆದರೆ, ಈ ಮಳೆ ಕಡಲೆ, ಜೋಳ, ಕುಸುಬೆ, ಗೋಧಿ ಬೆಳೆಗೆ ಅನುಕೂಲಕಾರಿಯಾಗಿದೆ

-ರುದ್ರೇಶಪ್ಪ ಟಿ.ಎಸ್‌., ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.