ADVERTISEMENT

ಪ್ಲಾನೇ ಇಲ್ಲ ಅಂದ್ರೆ ಇನ್ನೇನು ಆಗುತ್ತೆ?

ಬಿ.ಎನ್.ಶ್ರೀಧರ
Published 10 ಆಗಸ್ಟ್ 2019, 9:32 IST
Last Updated 10 ಆಗಸ್ಟ್ 2019, 9:32 IST
ಬಿಆರ್‌ಟಿಎಸ್‌ ಅವೈಜ್ಞಾನಿಕ ಕಾಮಗಾರಿಗೆ ಧಾರವಾಡದ ಟೋಲ್‌ನಾಕಾ ಉತ್ತಮ ನಿದರ್ಶನ -ಚಿತ್ರಗಳು: ಈರಪ್ಪ ನಾಯ್ಕರ್‌/ ಬಿ.ಎಂ.ಕೇದಾರನಾಥ
ಬಿಆರ್‌ಟಿಎಸ್‌ ಅವೈಜ್ಞಾನಿಕ ಕಾಮಗಾರಿಗೆ ಧಾರವಾಡದ ಟೋಲ್‌ನಾಕಾ ಉತ್ತಮ ನಿದರ್ಶನ -ಚಿತ್ರಗಳು: ಈರಪ್ಪ ನಾಯ್ಕರ್‌/ ಬಿ.ಎಂ.ಕೇದಾರನಾಥ   

ದೂರದೃಷ್ಟಿಯಿಲ್ಲದ ಯೋಜನೆ ಗಳಿದ್ದರೆ, ಅಭಿವೃದ್ಧಿ ಯೋಜನೆಗೆ ಸಮಗ್ರ ಆಯಾಮಗಳಿಂದ ಯೋಚಿಸದಿದ್ದರೆ ಅವು ಜನರ ಅನುಕೂಲಕ್ಕಿಂತ ನಗರ ನಲಗುವುದಕ್ಕೇ ಮಾಡಿದಂತಾಗುತ್ತದೆ. ಮಹಾಮೇಘಸ್ಫೋಟದಂತೆ ಸುರಿಯುತ್ತಿರುವ ಮಳೆ ನಿರ್ವಹಿಸ ಲಾಗದೇ ಇರಲು ಕಾರಣ ನಮ್ಮಲ್ಲಿ ಪರಿಪೂರ್ಣವಾದ ಯೋಜನೆ ಇಲ್ಲದಿರುವುದು... ದೋಷಗಳನ್ನು ಇನ್ನೊಬ್ಬರ ಹೆಗಲಿಗೆ ಜಾರಿಸುವ ಮನೋಭಾವ.. ಒಟ್ಟಿನಲ್ಲಿ ನಗರದ ನರಳಾಟ ತಪ್ಪುತ್ತಲೇ ಇಲ್ಲ. ನಗರ ಪರಿಸ್ಥಿತಿಗೆ ಕಾರಣವನ್ನಿಲ್ಲಿ ವಿಶ್ಲೇಷಿಸಲಾಗಿದೆ.

ಹುಬ್ಬಳ್ಳಿ– ಧಾರವಾಡ ಅವಳಿನಗರ ಮಹಾಮಳೆಗೆ ತತ್ತರಿಸಿ ಹೋಗಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಹೌದು, ಮಹಾ ಮಳೆ ಅಂದ್ರೆ ಹೀಗೇ ಅಲ್ಲವೇ? ಆದರೂ ಮಳೆ ಬರುತ್ತೆ, ಬಂದಾಗ ಎಲ್ಲೆಲ್ಲಿ ನೀರು ನಿಲ್ಲುತ್ತೆ/ನುಗ್ಗುತ್ತೆ; ಹಾಗೆ ಬರದಂತೆ ನಮ್ಮ ಅಭಿವೃದ್ಧಿ ಯೋಜನೆಗಳನ್ನು ಹೇಗೆಲ್ಲ ರೂಪಿಸಬೇಕು ಎನ್ನುವುದೇ ಪ್ಲಾನ್‌ ಅಲ್ಲವೇ?

ADVERTISEMENT

ಆದರೆ, ಅಂತಹ ಸಣ್ಣ ಪ್ರಯತ್ನವೂ ಅವಳಿ ನಗರದಲ್ಲಿ ನಡೆಯದಿರುವುದಕ್ಕೆ ಈ ಮಹಾಮಳೆಯೇ ಸಾಕ್ಷಿ. ಇನ್ನೂ ಉದ್ಘಾಟನೆಯೂ ಆಗದ ಬಿಆರ್‌ಟಿಎಸ್‌ ಕಾರಿಡಾರ್‌ನ ಅವ್ಯವಸ್ಥೆಯನ್ನು ನೋಡಿದರೆ ಎಂತಹವರಿಗೂ ಮರುಕ ಉಂಟಾಗದಿರದು. ನಮ್ಮ ಅಧಿಕಾರಿಗಳು, ಎಂಜಿನಿಯರ್‌ಗಳಿಗೆ ಕನಿಷ್ಠ ದೂರದೃಷ್ಟಿ ಇರುವ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲವೇ ಎಂದು ವ್ಯಥೆಪಡುವಂತಾಗಿದೆ.

ಬಿಆರ್‌ಟಿಎಸ್‌ ಯೋಜನೆಗೆ ಬರೋಬ್ಬರಿ ₹1,000 ಕೋಟಿ ಖರ್ಚು ಮಾಡಲಾಗಿದೆ. ಇಷ್ಟಾದರೂ ಆ ರಸ್ತೆ ಮೇಲೆ ನೀರು ನಿಲ್ಲದಂತೆ ನಿರ್ಮಿಸಲಾಗಲಿಲ್ಲ. ಈ ಯೋಜನೆ 30– 40 ವರ್ಷಗಳ ಹಿಂದೆ ಜಾರಿ ಆಗಿದ್ದರೆ, ಹೋಗಲಿ ಬಿಡು ಆಗ ಅಂತಹ ಆಧುನಿಕ ತಂತ್ರಜ್ಞಾನ ಇರಲಿಲ್ಲ ಅಂದುಕೊಳ್ಳಬಹುದಿತ್ತು. ಆದರೆ, ಜಾರಿಯಾಗಿರುವುದು ತಂತ್ರಜ್ಞಾನ ಯುಗದಲ್ಲಿ! ಎಲ್ಲಿ ಎಷ್ಟು ನೀರು ನಿಲ್ಲುತ್ತದೆ ಎಂಬುದನ್ನು ರಸ್ತೆ ನಿರ್ಮಿಸುವುದಕ್ಕೂ ಮೊದಲೇ ತಿಳಿಯುವ ವ್ಯವಸ್ಥೆ ಈಗಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಏನು? ಅಲ್ಲಿ ನೀರು ನಿಂತರೆ ಅದನ್ನು ಹೇಗೆ ತಪ್ಪಿಸಬಹುದು ಎನ್ನುವುದು ಮೊದಲೇ ತಿಳಿಯುತ್ತದೆ. ಆ ಪ್ರಕಾರವೇ ನಮ್ಮ ಯೋಜನೆ ಅನುಷ್ಠಾನ ಮಾಡಬೇಕು. ಆದರೆ, ಇಲ್ಲಿ ಆಗಿರುವುದೇನು? ಯೋಜನೆ ಅನುಷ್ಠಾನಕ್ಕೂ ಮತ್ತು ಈಗಿನ ಅವ್ಯವಸ್ಥೆಗೂ ಸಂಬಂಧವೇ ಇಲ್ಲದಂತಾಗಿದೆ. ಆಗಿರುವ ಎಡವಟ್ಟುಗಳನ್ನಾದರೂ ಸರಿಪಡಿಸುವ ಕೆಲಸವನ್ನು ಬಿಆರ್‌ಟಿಎಸ್‌ ಮಾಡುತ್ತಿದೆಯೇ? ಖಂಡಿತ ಇಲ್ಲ. ಬಿಆರ್‌ಟಿಎಸ್‌ ಅಧಿಕಾರಿಗಳನ್ನು ಕೇಳಿದರೆ ಈ ರಸ್ತೆ ನಿರ್ಮಿಸಿದ್ದು ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಎನ್ನುತ್ತಾರೆ. ಇನ್ನು ಜನಪ್ರತಿನಿಧಿಗಳಂತೂ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಮುಲಾಮು ಹಚ್ಚುವುದು ಯಾರು?

ಧಾರವಾಡದ ಟೋಲ್‌ನಾಕಾವನ್ನೇ ತೆಗೆದುಕೊಳ್ಳಿ. ಸಣ್ಣ ಮಳೆಗೇ ಇಲ್ಲಿನ ಬಿಆರ್‌ಟಿಎಸ್‌ ರಸ್ತೆ ಮೇಲೆ 3–4 ಅಡಿ ನೀರು ನಿಲ್ಲುತ್ತದೆ. ಈ ಸಮಸ್ಯೆಗೆ ರಸ್ತೆ ನಿರ್ಮಿಸುವ ಸಂದರ್ಭದಲ್ಲೇ ಪರಿಹಾರ ಕಂಡುಕೊಳ್ಳಬಹುದಿತ್ತು.

ಬಿಆರ್‌ಟಿಎಸ್‌ ಪ್ಲೈಓವರ್‌ ಮೇಲೂ ನಿಲ್ಲುವ ಮಳೆನೀರಿನ ಮೇಲೆ ಚಿಗರಿ ಬಸ್‌ ಸಾಗುವಾಗ ಕೆಳರಸ್ತೆಯಲ್ಲಿ ಸಂಚರಿಸುವವರ ಮೇಲೆ ನೀರಿನ ಪ್ರೋಕ್ಷಣೆಯಾಗಲಿದೆ. ಮಾಡುವಾಗಲೇ ಸರಿಯಾಗಿ ಮಾಡಿದ್ದರೆ ಈಗಿನ ಸಮಸ್ಯೆ ಇರುತ್ತಿರಲಿಲ್ಲ. ಈಗ ಪುನಃ ಟೆಂಡರ್‌, ಗುತ್ತಿಗೆ ಎಂದು ದುಂದುವೆಚ್ಚ ಆಗುವುದನ್ನು ತಪ್ಪಿಸಬಹುದಿತ್ತಲ್ಲವೇ?

ಇದೊಂದೇ ಅಲ್ಲ, ಇತ್ತೀಚೆಗೆ ಸುಮಾರು ₹600 ಕೋಟಿ ವೆಚ್ಚದಲ್ಲಿ ಸಿಆರ್‌ಎಫ್‌ ಅನುದಾನದಡಿ ‘ಅದ್ಭುತ’ವಾದ ಕಾಂಕ್ರೀಟ್‌ ರಸ್ತೆಗಳನ್ನು ಅವಳಿ ನಗರದಲ್ಲಿ ನಿರ್ಮಿಸಲಾಗಿದೆ (ಸದ್ಯ ಈ ರಸ್ತೆಗಳಷ್ಟೇ ಜನ ಸಂಚಾರಕ್ಕೆ ಉಳಿದಿರುವುದು!). ಹೇಗೆ ನಿರ್ಮಿಸಿದ್ದಾರೆ ಅಂದ್ರೆ; 50–60 ವರ್ಷಗಳ ಹಿಂದೆ (ಕೆಲವು ಇನ್ನೂ ಹೆಚ್ಚು ವರ್ಷ ಆಗಿವೆ) ಅಡ್ಡಾದಿಡ್ಡಿಯಾಗಿ ನಿರ್ಮಿಸಿದ್ದ ಡಾಂಬರು ರಸ್ತೆಗಳ ಮೇಲೆಯೇ ಕಾಂಕ್ರಿಟ್‌ ಹಾಕಲಾಗಿದೆ. ರಸ್ತೆ ಅಕ್ಕಪಕ್ಕದ ಮನೆಗಳು ರಸ್ತೆ ಮಟ್ಟದಿಂದ ಮೇಲಿವೆಯೊ ಅಥವಾ ಕೆಳಗಿವೆಯೊ ಎಂಬುದರ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ರಸ್ತೆಗಿಂತ ಕೆಳ ಮಟ್ಟದಲ್ಲಿ ಮನೆಗಳಿದ್ದರೆ ಮಳೆಗಾಲದಲ್ಲಿ ನೀರು ನುಗ್ಗುತ್ತದೆ ಎನ್ನುವ ಕನಿಷ್ಠ ಜ್ಞಾನ ಕೂಡ ಇಲ್ಲದಂತೆ ನಿರ್ಮಿಸಲಾಗಿದೆ. ಇದರ ಜತೆಗೆ ರಸ್ತೆಯ ಎರಡೂ ಕಡೆ ನಿರ್ಮಿಸಿರುವ ಕಾಂಕ್ರಿಟ್‌ ಚರಂಡಿಗಳಿಗೆ ಮಳೆ ನೀರು ಹೋಗುವುದಕ್ಕೆ ಜಾಗ ಕೂಡ ಬಿಟ್ಟಿಲ್ಲ (ಕಿಂಡಿ)! ಇತ್ತೀಚೆಗೆ ‘ಪ್ರಜಾವಾಣಿ’ ಈ ವಿಷಯವನ್ನು ಅಭಿಯಾನದ ರೀತಿಯಲ್ಲಿ ಕೈಗೆತ್ತಿಕೊಂಡಾಗ ಅಲ್ಲೊಂದು ಇಲ್ಲೊಂದು ಕಾಟಾಚಾರಕ್ಕೆ ಕಿಂಡಿ ಕೊರೆಯಲಾಗಿದೆ. ಮೊದಲೇ ಮಾಡಿದ್ದರೆ ಕಾಂಕ್ರೀಟ್‌ ಒಡೆಯುವುದನ್ನು ತಪ್ಪಿಸಬಹುದಿತ್ತಲ್ಲವೇ? ಇದು ನಮ್ಮ ಎಂಜಿನಿಯರ್‌ಗಳಿಗೆ ಮೊದಲೇ ಏಕೆ ಗೊತ್ತಾಗಲಿಲ್ಲ?

ಉಣಕಲ್‌ ಕೆರೆ ಕೆಳಭಾಗದ ಪ್ರದೇಶಗಳ ದುಃಸ್ಥಿತಿಯಂತೂ ಹೇಳತೀರದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕೆರೆ ತುಂಬಿರಲಿಲ್ಲ; ಆದರೂ ಹೆಚ್ಚು ಮಳೆಯಾದಾಗ ತುಂಬಿದರೆ ಕೆಳಭಾಗದ ಬಡಾವಣೆಗಳ ಜನರ ಸ್ಥಿತಿ ಏನಾಗುತ್ತದೆ? ತೊಂದರೆ ಆಗದಂತೆ ಏನೆಲ್ಲ ಮಾಡಬೇಕಿತ್ತು ಎನ್ನುವುದು ಕೂಡ ಪ್ಲಾನ್‌ ಅಲ್ಲವೇ? ಹಾಗೆ ಮಾಡದ ಕಾರಣ ಕೆರೆ ಕೋಡಿ ಬಿದ್ದು ನೀರೆಲ್ಲ ಬಡಾವಣೆಗಳಿಗೆ ನುಗ್ಗಿದೆ. ಮನೆ, ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣ... ಎಲ್ಲಿಲ್ಲ? ಎಲ್ಲ ಕಡೆಗೂ ನೀರು ನುಗ್ಗಿದೆ. ರಾಜಕಾಲುವೆ ಒತ್ತುವರಿ ತಡೆದು; ಅದನ್ನು ಸರಿಯಾಗಿ ಅಭಿವೃದ್ಧಿಪಡಿಸಿದ್ದರೆ ಈ ಅವಾಂತರ ತಪ್ಪಿಸಬಹುದಿತ್ತಲ್ಲವೇ?

ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಟೆಂಡರ್‌ ಶ್ಯೂ ರಸ್ತೆಯನ್ನು ₹36 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿಯಲ್ಲಿ ನಿರ್ಮಿಸುತ್ತಿದ್ದು, ಇನ್ನಷ್ಟೇ ಉದ್ಘಾಟನೆ ಆಗಬೇಕಿದೆ. ಈ ರಸ್ತೆಯ ಮಳೆ ಚರಂಡಿಗೇ ತೋಳನಕೆರೆ ನಾಲೆಯ ಸಂಪರ್ಕ ಕಲ್ಪಿಸಿರುವುದು ಅಕ್ಷಯ ಕಾಲೊನಿಯ ಹಲವು ಅಪಾರ್ಟ್‌ಮೆಂಟ್‌, ನೂರಾರು ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದೆ. ನಾಲೆಯ ನೀರನ್ನು ಸಣ್ಣ ಚರಂಡಿಗೆ ಸಂಪರ್ಕ ಕಲ್ಪಿಸಿದರೆ ಹೇಗೆ?

ಇನ್ನು ಅವಳಿನಗರದಲ್ಲಿನ ಡಾಂಬರು ರಸ್ತೆಗಳ ಸ್ಥಿತಿಯಂತೂ ಹೇಳತೀರದು. ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ. ರಸ್ತೆಗಳ ಅಕ್ಕಪಕ್ಕದಲ್ಲಿ ಮಳೆ ನೀರು ಹರಿದುಹೋಗುವ ಚರಂಡಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ!

ಇತ್ತೀಚೆಗೆ ಉದ್ಘಾಟನೆಯಾದ ಹುಬ್ಬಳ್ಳಿಯ ಕೋರ್ಟ್‌ ಸಂಕೀರ್ಣಕ್ಕೂ ನೀರು ನುಗ್ಗಿದೆ. ಪಕ್ಕದಲ್ಲೇ ರಾಜಕಾಲುವೆ ಇದ್ದು, ಎಂದಾದರೂ ನೀರು ನುಗ್ಗಿದರೆ ಹೇಗೆ ಎಂದು ಏಕೆ ಯೋಚನೆ ಮಾಡಲಿಲ್ಲ? ಕೋಟ್ಯಂತರ ರೂಪಾಯಿ ಖರ್ಚು ಮಾಡುವಾಗ ಪೂರ್ವತಯಾರಿ ಮಾಡಬೇಕಿತ್ತಲ್ಲವೇ?

ಹೀಗೆ ಅವಳಿ ನಗರದಲ್ಲಿ ಎಲ್ಲೇ ಹೋಗಿ ನೋಡಿ, ಈ ರೀತಿಯ ಎಡವಟ್ಟುಗಳು ಕಣ್ಣಿಗೆ ರಾಚುತ್ತವೆ. ಪೂರ್ವಯೋಜನೆ ಇಲ್ಲದ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಅವುಗಳಿಗೆ ಕಡಿವಾಣ ಹಾಕುವುದು ತುರ್ತಾಗಿ ಆಗಬೇಕಾಗಿದೆ. ಆಗಿರುವ ತಪ್ಪುಗಳನ್ನೂ ಸರಿಪಡಿಸಬೇಕಿದೆ.

ಹುಬ್ಬಳ್ಳಿಯಲ್ಲಿ ವಸತಿ ಸಮುಚ್ಚಯಕ್ಕೆ ನುಗ್ಗಿದ ಉಣಕಲ್‌ ಕೆರೆ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.