ಹುಬ್ಬಳ್ಳಿ: ನಗರದಲ್ಲಿ ಬುಧವಾರ ಸಂಜೆ ಎರಡು ತಾಸು ಜೋರಾಗಿ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು.
ಮಧ್ಯಾಹ್ನದ ವೇಳೆ ಕೆಲಹೊತ್ತು ತುಂತುರು ಮಳೆಯಾಗಿತ್ತು. ಸಂಜೆ ಸುರಿದ ರಭಸದ ಮಳೆಗೆ ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವು ಪ್ರದೇಶಗಳಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ತುಂಬಿ ಹರಿದಿದೆ.
ಜನತಾ ಬಜಾರ್, ದಾಜಿಬಾನ ಪೇಟೆ, ಲೋಕಪ್ಪನ ಹಕ್ಕಲ, ಅಶೋಕನಗರ ಬ್ರಿಡ್ಜ್, ಬಸವವನ ಸೇರಿದಂತೆ ಕೆಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿತ್ತು. ಹೊಸೂರು ಬಿಆರ್‌ಟಿಎಸ್ ಬಸ್ ನಿಲ್ದಾಣ, ಪ್ರೆಸಿಡೆಂಟ್ ಹೋಟೆಲ್ ಮುಂಭಾಗ ಹಾಗೂ ಎಸ್‌ಡಿಎಂ ದಂತ ಮಹಾವಿದ್ಯಾಲಯದ ಎದುರಿನ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿತ್ತು.
ನಿರಂತರವಾಗಿ ಸುರಿದ ಮಳೆಯ ಪರಿಣಾಮ, ದಂತ ಮಹಾವಿದ್ಯಾಲಯದ ಎದುರಿನ ಹು–ಧಾ ಮುಖ್ಯ ರಸ್ತೆಯ ಸುಮಾರು ಒಂದು ಕಿ.ಮೀ. ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಎರಡು–ಮೂರು ಅಡಿಯಷ್ಟು ನೀರು ನಿಂತ ಪರಿಣಾಮ ವಾಹನ ಸವಾರರು ತೀವ್ರ ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.