ADVERTISEMENT

ಪೌರ ಕಾರ್ಮಿಕರ ಸೌಲಭ್ಯಗಳಿಗೆ ಅಬ್ಬಯ್ಯ ಅಡ್ಡಗಾಲು

ಆರೋಪಗಳ ಬಹಿರಂಗ ಚರ್ಚೆಗೆ ಸಿದ್ಧ: ವಿಜಯ ಗುಂಟ್ರಾಳ ಸವಾಲು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 14:19 IST
Last Updated 10 ಅಕ್ಟೋಬರ್ 2020, 14:19 IST

ಹುಬ್ಬಳ್ಳಿ: ‘ಮಹಾನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಿಗದಂತೆ ಶಾಸಕ ಪ್ರಸಾದ ಅಬ್ಬಯ್ಯ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಎಂ. ಗುಂಟ್ರಾಳ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಬ್ಬಯ್ಯ ಸೂಚನೆಯಂತೆ ಕೆಲ ಮುಖಂಡರು ಪೌರ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಸಚಿವ ಜಗದೀಶ ಶೆಟ್ಟರ್‌ ಮನೆ ಮುಂದೆ ಶುಕ್ರವಾರ ಪ್ರತಿಭಟಿಸಿದ್ದಾರೆ’ ಎಂದರು.

‘ಗುತ್ತಿಗೆ ಪೌರ ಕಾರ್ಮಿಕರಿಗೆ ಸಂಬಂಧವಿಲ್ಲದವರು, ಮೀಟರ್‌ ಬಡ್ಡಿ ವ್ಯಾಪಾರ ಮಾಡುವವರು, ಸ್ವಚ್ಛತಾ ಗುತ್ತಿಗೆದಾರರು, ಗುತ್ತಿಗೆದಾರರ ಸಂಬಂಧಿಕರು ಮತ್ತು ನಕಲಿ ಪೌರಕಾರ್ಮಿಕರ ಸಂಬಂಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು’ ಎಂದು ದೂರಿದರು.

ADVERTISEMENT

‘ಪೌರ ಕಾರ್ಮಿಕರ ಸಲುವಾಗಿಎರಡು ದಶಕಗಳಿಂದ ಹೋರಾಟ ಮಾಡುತ್ತಿದ್ದೇನೆ. ಇಷ್ಟು ವರ್ಷ ಇವರೆಲ್ಲ ಎಲ್ಲಿದ್ದರು? ಪ್ರತಿಭಟನೆಯಲ್ಲಿ ಪಾಲ್ಗೊಂಡವರೆಲ್ಲ ಗುತ್ತಿಗೆದಾರರ ರಕ್ಷಣೆಗೆ ನಮ್ಮ ವಿರುದ್ಧ ಮೆರವಣಿಗೆ ಮಾಡಿದ್ದರು. ಗುತ್ತಿಗೆದಾರನನ್ನು ರಕ್ಷಿಸಲು ನಾಲ್ಕು ವರ್ಷಗಳಿಂದ ನೇರ ನೇಮಕಾತಿ ಮತ್ತು ನೇರ ವೇತನ ಪಾವತಿಗೆ ಅಡ್ಡಿಪಡಿಸಿದ್ದಾರೆ’ ಎಂದು ಆರೋಪಿಸಿದರು.

‘ಪರಿಶಿಷ್ಟರ ಹೆಸರಿನಲ್ಲಿ ಮತಗಳನ್ನು ಪಡೆದು ಆಯ್ಕೆಯಾಗಿರುವ ಅಬ್ಬಯ್ಯ, ಈಗ ಅದೇ ಸಮಾಜದವರನ್ನು ತೇಜೋವಧೆ ಮಾಡುತ್ತಿದ್ದಾರೆ. ನಮ್ಮ ನಡುವೆ ಒಡಕು ತಂದು ಸರ್ವಾಧಿಕಾರಿಯಂತೆ ಮೆರೆಯಲು ಷಡ್ಯಂತ್ರ ನಡೆಸಿದ್ದಾರೆ. ನೇರವೇತನ ಮತ್ತು ನೇರ ನೇಮಕಾತಿಗೆ ಆಗ್ರಹಿಸಿ 17 ದಿನಗಳಿಂದ ಅಹೋರಾತ್ರಿ ಧರಣಿ ಮಾಡುತ್ತಿರುವ ನಮ್ಮ ಹೋರಾಟದ ಯಶಸ್ಸನ್ನು ಪಡೆಯಲು ಹವಣಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ನಮ್ಮ ಹೋರಾಟದ ವಿರುದ್ಧದ ಆಧಾರರಹಿತ ಸುಳ್ಳು ಆರೋಪಗಳನ್ನು ನಿಲ್ಲಿಸಬೇಕು. ಈ ಬಗ್ಗೆ ಚರ್ಚೆ ನಡೆಸಲು ಬಹಿರಂಗ ಚರ್ಚೆಗೆ ಬರಬೇಕು. ಬೇಕಿದ್ದರೆ ದಿನಾಂಕ ಮತ್ತು ಸಮಯವನ್ನು ಅಬ್ಬಯ್ಯ ಅವರೇ ನಿಗದಿಪಡಿಸಲಿ’ ಎಂದು ಸವಾಲು ಹಾಕಿದರು.

ಸಂಘದ ಪದಾಧಿಕಾರಿಗಳಾದ ಗಾಳೆಪ್ಪ ದ್ವಾಸಲಕೇರಿ, ಶಿವಮ್ಮ ಬೇವಿನಮರದ, ಗಂಗಮ್ಮ ಸಿದ್ರಾಮಪುರ, ಕನಕಪ್ಪ ಕೊಟಬಾಗಿ ಇದ್ದರು.

ಆಧಾರ ರಹಿತ ಆರೋಪ: ಅಬ್ಬಯ್ಯ

ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ನಿರಾಧಾರ. ಪೌರ ಕಾರ್ಮಿಕರ ಹಿತಕ್ಕಾಗಿ ನಾನು ಏನು ಮಾಡಿದ್ದೇನೆ ಎನ್ನುವುದು ಪೌರಕಾರ್ಮಿಕರಿಗೆ ಚೆನ್ನಾಗಿ ಗೊತ್ತಿದೆ. ಈ ಕುರಿತು ಅನೇಕ ಸಲ ಜಗದೀಶ ಶೆಟ್ಟರ್‌ ಮತ್ತು ಪ್ರಲ್ಹಾದ ಜೋಶಿ ಅವರ ಬಳಿಯೂ ಮಾತನಾಡಿದ್ದೇನೆ. ಶೀಘ್ರದಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.