ADVERTISEMENT

ಏ ಬೊಮ್ಮಣ್ಣ, ಎಲ್ಲಿದಿಯಾ? ಏನ್ ಮಾಡ್ತಿದಿಯಾ?: ಸಿಎಂ ವಿರುದ್ಧ ಇಬ್ರಾಹಿಂ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2022, 16:15 IST
Last Updated 13 ಫೆಬ್ರುವರಿ 2022, 16:15 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಹುಬ್ಬಳ್ಳಿ: ‘ಏ ಬೊಮ್ಮಣ್ಣ, ಎಲ್ಲಿದಿಯಾ? ಏನ್ ಮಾಡ್ತಿದಿಯಾ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೆ.ಎಸ್‌. ಈಶ್ವರಪ್ಪ ವಿರುದ್ಧ ಮುಖ್ಯಮಂತ್ರಿ ಕ್ರಮ ಕೈಗೊಳ್ಳದಿದ್ದರೆ ನಾವೇ ಪ್ರಕರಣ ದಾಖಲಿಸಿ, ಬಂಧಿಸುವಂತೆ ಆಗ್ರಹಿಸುತ್ತೇವೆ. ರಾಮ ಮಂದಿರ, ಗೋಹತ್ಯೆ ನಿಷೇಧ ಆಯ್ತು, ಈಗ ಹಿಜಾಬ್ ಶುರುವಾಗಿದೆ. ಈ ವಿಚಾರದಲ್ಲಿ ಬಿ.ಎಸ್‌. ಯಡಿಯೂರಪ್ಪ ಮಧ್ಯೆ ಪ್ರವೇಶ ಮಾಡಬೇಕು’ ಎಂದು ಆಗ್ರಹಿಸಿದರು.

ಹಿಂದೂ ಮಹಿಳೆಯರು ಸೀರೆಯ ಸೆರಗನ್ನು ಹಾಕಿಕೊಳ್ಳುವ ಹಾಗೆ, ಮುಸ್ಲಿಂ ಸಮುದಾಯದಲ್ಲಿ ಹಿಜಾಬ್ ಧರಿಸುತ್ತಾರೆ. ಅದು ಮುಸ್ಲಿಂ ಸಮುದಾಯದ ಸಂಪ್ರದಾಯ. ಹೆಣ್ಣುಮಕ್ಕಳು ತಲೆಗೆ ಬಟ್ಟೆ ಹಾಕಿಕೊಳ್ಳಬಾರದು ಎಂದು ಪ್ರಪಂಚದಲ್ಲಿ ಎಲ್ಲಿಯೂ ನಿಯಮವಿಲ್ಲ. ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಪುತ್ರನೇ ಕೇಸರಿ ಶಾಲು ಹಂಚುವ ಕೆಲಸ ಮಾಡಿದ್ದಾನೆ. ಹೀಗಿದ್ದಾಗ, ಅವರು ದೆಹಲಿಯ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ನೀಡುತ್ತಾರೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಲಗಿದ್ದಾರಾ? ಪೊಲೀಸ್ ಮಹಾನಿರ್ದೇಶಕ ನಿದ್ದೆ ಮಾಡುತ್ತಿದ್ದಾರಾ? ಯಾಕೆ ಈಶ್ವರಪ್ಪ ಅವರ ಮೇಲೆ ಪ್ರಕರಣ ದಾಖಲಿಸಿಲ್ಲ? ರಾಷ್ಟ್ರಪತಿ ಬಿಟ್ಟರೆ ಬೇರೆ ಯಾರೂ ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸುವುದಿಲ್ಲ. ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಯೊಬ್ಬ ಈ ರೀತಿ ಮಾತನಾಡಿದರೂ ಮುಖ್ಯಮಂತ್ರಿ ಯಾಕೆ ಮೌನವಾಗಿದ್ದಾರೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.