
ಧಾರವಾಡ: ‘ಹಿಂದೂ ಎಂಬುವುದು ಜಾತಿ, ಮತ, ಪಂಥವಲ್ಲ, ಅದೊಂದು ಜೀವನದ ಪದ್ಧತಿ. ಇದು ಪ್ರತಿಯೊಬ್ಬರ ಮಸ್ತಕದಲ್ಲಿ ಬಂದಾಗ ಹಿಂದೂ ಧರ್ಮದ ಉಳಿವು ಸಾಧ್ಯ’ ಎಂದು ಭಾರತೀಯ ಶಿಕ್ಷಣ ಮಂಡಳದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಶಂಕರಾನಂದ ಹೇಳಿದರು.
ಕಮಲಾಪೂರ-ಮಾಳಾಪುರ ಉಪನಗರ ಹಿಂದೂ ಸಮ್ಮೇಳನ ಸಮಿತಿಯು ನಗರದ ಕಮಲಾಪೂರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ಹಿಂದೂ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ಹಿಂದೂ ಭಾರತದ ಪ್ರಾಣ. ಹಿಂದೂ ಧರ್ಮ ಜನಿವಾರ, ಉಡದಾರವಲ್ಲ ಅದೊಂದು ಮನಸ್ಸುಗಳನ್ನು ಜೋಡಿಸುವ ಸೇತುವೆ. ಒಬ್ಬ ವ್ಯಕ್ತಿ ಮಹಾನ್ ಮಾನವನಾಗುವ ಜೊತೆಗೆ ಮಾಧವನಾಗುವುದೇ ಹಿಂದೂ ಧರ್ಮದ ಮೂಲ ಧ್ಯೇಯವಾಗಿದೆ’ ಎಂದು ತಿಳಿಸಿದರು.
‘ಪ್ರತಿ ಮನೆ, ಮನ ಹಾಗೂ ಸಮಾಜ ಹಿಂದುತ್ವ ಉಸಿರಾಡಬೇಕು. ಆಚಾರ-ವಿಚಾರ, ಆಹಾರ-ವಿಹಾರ, ಉಡುಗೆ-ತೊಡುಗೆಯಲ್ಲಿ ದೇಶಿಯತೆ ಪ್ರಜ್ವಲಿಸಬೇಕು. ನಾಡಿನ ಹಿಂದೂಗಳು ಒಗ್ಗೂಡಿ ಬಾಳಬೇಕು’ ಎಂದರು.
ನಯಾಗರದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಮಂಜುನಾಥ ಮಕ್ಕಳಗೇರಿ ಇದ್ದರು.
ಸಮ್ಮೇಳನದ ಅಂಗವಾಗಿ ಗಣಪತಿ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆಗೆ ಜೋಡೆತ್ತಿನ ಮೆರವಣಿಗೆ, ಮಹಿಳೆಯರ ಪೂರ್ಣಕುಂಭ, ಮೈಸೂರು ಬೊಂಬೆ ಕುಣಿತ, ಝಾಂಜ್ ಮೇಳ, ಕೌಂಸಾಳಿ, ವೀರಪುರುಷರ ಪುಟಾಣಿಗಳ ಛೇದ್ಮವೇಷ ಮೆರಗು ನೀಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.