ADVERTISEMENT

ಹಿಂಗಾರು– ಮುಂಗಾರು ಬೆಳೆ ವಿಮೆ, ಪರಿಹಾರಕ್ಕಾಗಿ ಬೀದಿಗಿಳಿದ ಅನ್ನದಾತರು

ರೈತರ ಖಾತೆಗೆ ಹಣ ಜಮೆ ಆಗದಿದ್ದರೆ ಹೋರಾಟ: ಕೋನರಡ್ಡಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 15:35 IST
Last Updated 9 ಡಿಸೆಂಬರ್ 2021, 15:35 IST
ಅಣ್ಣಿಗೇರಿ ಪುರಸಭೆಯ ಹತ್ತಿರದ ರೈತ ಸಂಪರ್ಕ ಕೇಂದ್ರ ಮುಂಭಾಗ ಗುರುವಾರ ರೈತರು ರಸ್ತೆ ತಡೆ, ಪ್ರತಿಭಟನೆ ನಡೆಸಿದರು
ಅಣ್ಣಿಗೇರಿ ಪುರಸಭೆಯ ಹತ್ತಿರದ ರೈತ ಸಂಪರ್ಕ ಕೇಂದ್ರ ಮುಂಭಾಗ ಗುರುವಾರ ರೈತರು ರಸ್ತೆ ತಡೆ, ಪ್ರತಿಭಟನೆ ನಡೆಸಿದರು   

ಅಣ್ಣಿಗೇರಿ: ತಾಲ್ಲೂಕಿನಲ್ಲಿ ಮಳೆಯಿಂದ ಹಾಳಾದ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ವಿಮಾ ಕಂಪನಿ ಹಾಗೂ ಸರ್ಕಾರದಿಂದ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಇಲ್ಲಿನಬಸ್ ನಿಲ್ದಾಣದಿಂದ ರೈತ ಸಂಪರ್ಕ ಕೇಂದ್ರದವರೆಗೆ ರೈತರು ಗುರುವಾರ ರ್‍ಯಾಲಿ ನಡೆಸಿದರು.

ಜೆಡಿಎಸ್‌ ಮುಖಂಡ ಎನ್.ಎಚ್.ಕೋನರಡ್ಡಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ, ತಹಶೀಲ್ದಾರ್‌ಗೆಮನವಿ ಸಲ್ಲಿಸಲಾಯಿತು.

ಮೆಣಸಿನಕಾಯಿ, ಈರುಳ್ಳಿ, ಹತ್ತಿ ಅಕಾಲಿಕ ಮಳೆಯಿಂದ ಸಂಪೂರ್ಣ ಹಾನಿಯಾಗಿವೆ. ತಕ್ಷಣವೇ ನೆರವು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

‘2016-17ರಲ್ಲಿ ಅಣ್ಣಿಗೇರಿ ವ್ಯಾಪ್ತಿಯ ರೈತರಿಗೆ ಮೆಣಸಿನಕಾಯಿ ಬೆಳೆಗೆ ಬೆಳೆ ಪರಿಹಾರ ಘೋಷಣೆಯಾದರೂ ಈವರೆಗೆ ರೈತರಿಗೆ ತಲುಪಿಲ್ಲ. 2018-19ರಿಂದ 2021ರ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತರ ವಂತಿಗೆ ಖಾಸಗಿ ವಿಮಾ ಕಂಪನಿಗಳಿಗೆ ಹಣ ಪಾವತಿಸಿವೆ’ ಎಂದು ರೈತರು ತಿಳಿಸಿದರು.

‘ಖಾಸಗಿ ವಿಮಾ ಕಂಪನಿಯವರು ಕೇವಲ ಹಿಂಗಾರು ಬೆಳೆಗೆ ಮಾತ್ರ ಅರ್ಜಿ ಸ್ವೀಕರಿಸುತ್ತಿದ್ದಾರೆ. ಆದರೆ, ನಿರಂತರವಾಗಿ ಸುರಿದ ಮಳೆಯಿಂದ ಮುಂಗಾರು ಬೆಳೆಗಳಾದ ಮೆಣಸಿನಕಾಯಿ, ಹತ್ತಿ, ಈರುಳ್ಳಿ, ಗೋವಿನಜೋಳ ಹಾನಿಯಾಗಿವೆ. ಕೊಯ್ಲಿಗೆ ಬಂದಿದ್ದ ಈ ಬೆಳೆಗಳು ವಾಯುಭಾರ ಕುಸಿತ, ಮಳೆಯಿಂದ ಗಿಡದಲ್ಲಿಯೇ ಸಂಪೂರ್ಣವಾಗಿ ಕೊಳೆತಿವೆ. ರೋಗ ತಗುಲಿ ಮೆಣಸಿನಕಾಯಿ ನಾಶವಾಗಿದೆ. ಆದರೂ ವಿಮಾ ಕಂಪನಿಯವರು ಮುಂಗಾರು ಬೆಳೆಗೆ ಅರ್ಜಿ ಸ್ವೀಕರಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಹಿಂಗಾರು ಬೆಳೆಗಳಾದ ಕಡಲೆ, ಗೋಧಿ, ಕುಸುಬಿ ಬೆಳೆಗಳನ್ನು ಮಾತ್ರ ಪರಿಹಾರಕ್ಕೆ ಪರಿಗಣಿಸುತ್ತಿದ್ದಾರೆ. ರಸಗೊಬ್ಬರ, ಕೀಟನಾಶಕ ಬಳಸಿ ಬಿತ್ತನೆಗೆ ಮಾಡಿದ ಖರ್ಚು ಹಾಗೂ ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆದವರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ರೈತರಾದ ಸಿ.ಜಿ.ಪಾಟೀಲ, ರಾಜು ನೂಲ್ವಿಗೌಡರ, ಚನಬಸಯ್ಯ ದುಂಡಯ್ಯನವರಮಠ, ಬಸಪ್ಪ ಕರ್ಲವಾಡ, ದೇವಿಂದ್ರಪ್ಪ ಹಳ್ಳದ, ಶರಣು ಯಮನೂರ, ರವಿ ಶಟ್ಟರ, ಮಲ್ಲಿಕಾರ್ಜುನ ಮುಂಡಾಸದ, ಶಿವಣ್ಣಾ ಹುಬ್ಬಳ್ಳಿ, ಮಲ್ಲೇಶಪ್ಪ ಅಸುಂಡಿ, ಶರಣಪ್ಪ ಉಳ್ಳಾಗಡ್ಡಿ, ಶಂಕ್ರಪ್ಪ ಕುರಿ, ನಿಂಗಪ್ಪ ಬಡೆಪ್ಪನವರ, ಹನಮಂತ ಕಂಬಳಿ. ಮುತ್ತಣ್ಣಾ ಮುಂಡಾಸದ, ನಿಂಗಪ್ಪ ನಾವಳ್ಳಿ, ಭಗವಂತಪ್ಪ ಪುಟ್ಟಣ್ಣವರ, ಮಲ್ಲಪ್ಪ ಬ್ಯಾಹಟ್ಟಿ, ಮುದಕಣ್ಣಾ ಶಿರಕೋಳ, ಶಿವಪ್ಪ ಶಿರಕೋಳ, ಹಸನಸಾಬ ಘುಡುನಾಯ್ಕರ ದಾವಲಸಾಬ್ ದರವಾನ, ಗುರುಬಸಪ್ಪ ಕಲ್ಲೂರ, ಬಸಣ್ಣಾ ಯಳವತ್ತಿ, ಮಂಜು ಉಣಕಲ್ಲ, ಕಾಶಪ್ಪ ಕಪ್ಪತ್ತನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.