ADVERTISEMENT

ಧಾರವಾಡ: ಕಸ, ಪ್ಲಾಸ್ಟಿಕ್‌ ಬಾಟಲಿಗಳಿಂದ ತುಂಬಿದ ಸಪ್ತಾಪುರ ಬಾವಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:07 IST
Last Updated 21 ಡಿಸೆಂಬರ್ 2025, 5:07 IST
<div class="paragraphs"><p>ಧಾರವಾಡದ ಸಪ್ತಾಪುರ ಬಾವಿಯಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್‌ ಬಾಟಲಿಗಳು ತುಂಬಿವೆ</p></div>

ಧಾರವಾಡದ ಸಪ್ತಾಪುರ ಬಾವಿಯಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್‌ ಬಾಟಲಿಗಳು ತುಂಬಿವೆ

   

ಒಂದು ಕಾಲದಲ್ಲಿ ಇಡೀ ಧಾರವಾಡ ನಗರಕ್ಕೆ ಕುಡಿಯುವ ನೀರಿನ ದಾಹ ತೀರಿಸಿದ ಬಾವಿಗಳ‌ಲ್ಲಿ ಸ್ವಚ್ಛತೆಯ ಕೊರತೆ ಕಾಡುತ್ತಿದೆ. ಕೆಲ ಬಾವಿಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ.

ನಗರದ ಪ್ರಮುಖ ಬಾವಿಗಳಲ್ಲಿ ಸಪ್ತಾಪುರ ಬಾವಿಯೂ ಒಂದು. 1942ರಲ್ಲಿ ನಿರ್ಮಿಸಲಾದ ಈ ಬಾವಿಯು ಸಪ್ತ ನಗರಗಳಿಗೆ ಕುಡಿಯುವ ನೀರು ಒದಗಿಸುವ ಕಾರಣ ‘ಸಪ್ತಾಪುರ ಬಾವಿ’ ಎಂಬ ಹೆಸರು ಬಂತು ಎಂಬುದು ಸ್ಥಳೀಯರ ಮಾತು.

ADVERTISEMENT

ವಿದ್ಯಾಕಾಶಿ ಎಂದು ಪ್ರಸಿದ್ಧಿ ಪಡೆದ ಧಾರವಾಡ ನಗರದಲ್ಲಿ ‘ಸಪ್ತಾಪುರ ಬಾವಿ’ ಎಂದು ಸ್ಥಳ ಗುರುತಿಸಲು ಮಾತ್ರ ಇರುವ ಈ ಬಾವಿಯಲ್ಲಿ ಅಂಗಡಿ ತ್ಯಾಜ್ಯ, ಕಸ, ಪ್ಲಾಸ್ಟಿಕ್‌ ಬಾಟಲಿಗಳು ತುಂಬಿದ್ದು, ಬಾವಿಯು ಸ್ವಚ್ಛತೆಯಿಂದ ವಂಚಿತಗೊಂಡಿದೆ.

ನಗರದಲ್ಲಿ ಇದೊಂದೇ ಪ್ರಾಚೀನ ಬಾವಿಯಲ್ಲ. ನುಚ್ಚಂಬ್ಲಿ ಬಾವಿ, ಕೊಪ್ಪಮ್ಮನ ಬಾವಿ, ಅಗಸರ ಬಾವಿ, ಉಡುಪಿರಾಯರ ಬಾವಿ ಎಂಬ ಅನೇಕ ಬಾವಿಗಳಿವೆ. ಇವುಗಳ ಆಳ, ಅಳತೆ ಮತ್ತು ಬಳಕೆಗಳ ಕುರಿತ ಸಂಪೂರ್ಣ ಇತಿಹಾಸ ನ.ಹ. ಕಟಗೇರಿ ಅವರು ಬರೆದ ‘ಗತಕಾಲದ ಧಾರವಾಡ’ ಪುಸ್ತಕದಲ್ಲಿ ಉಲ್ಲೇಖವಿದೆ.

17ನೇ ಶತಮಾನದಲ್ಲಿ ನಿರ್ಮಿಸಲಾದ ನುಚ್ಚಂಬ್ಲಿ ಬಾವಿಯು ಧಾರವಾಡ ನಗರದಲ್ಲಿ ಪ್ರಮುಖ ಬಾವಿಯಾಗಿದ್ದು, ಇದೀಗ ಸಾರ್ವಜನಿಕ ಗಣಪತಿ ವಿಸರ್ಜನೆಗೆ ಮಾತ್ರ ಸೀಮಿತವಾಗಿದೆ. ಈ ಬಾವಿಯನ್ನು ಮಹಾನಗರ ಪಾಲಿಕೆ ವತಿಯಿಂದ 2017ರಲ್ಲಿ ಅಭಿವೃದ್ಧಿ ಕಾಮಗಾರಿ ಮತ್ತು ಹೂಳೆತ್ತುವ ಕಾರ್ಯ ನಡೆಸಲಾಗುತ್ತದೆ.

ಪ್ರಾಚೀನ ಕಾಲದಲ್ಲಿ ನಿರ್ಮಿಸಲಾದ ಕೆಲ ಬಾವಿಗಳು ರಸ್ತೆ ಮಧ್ಯದಲ್ಲಿದ್ದು, ಅನೇಕ ಕಾರಣ ಸೂಚಿಸಿ ಸ್ಥಳೀಯ ಆಡಳಿತ ವತಿಯಿಂದ ಮುಚ್ಚಿ ಹಾಕಲಾಗಿದೆ. ಆಧುನಿಕತೆ ಭರದಲ್ಲಿ ಸಾಗಿದ ಜಗತ್ತಿನಲ್ಲಿ ಬಾವಿಗಳ ಅಸ್ತಿತ್ವ ಕಣ್ಮರೆ ಅಗುತ್ತಿರುದು ಶೋಚನೀಯ.

ಬಾವಿ ಸ್ವಚ್ಛತೆಗೆ ಕ್ರಮ ಅಗತ್ಯ: ‘ಧಾರವಾಡ ನಗರದಾದ್ಯಂತ ಇರುವ ಬಾವಿಗಳ ಸ್ವಚ್ಛತೆ ಕಾಪಾಡಲು ಮಹಾನಗರ ಪಾಲಿಕೆ ಕ್ರಮ ಅಗತ್ಯ. ಬಾವಿಗಳ ಸ್ವಚ್ಛತೆ ಕೊರತೆಯಿಂದ ಮಲೇರಿಯಾ ಸೇರಿ ವಿವಿಧ ರೀತಿಯ ರೋಗ ಹರಡುವ ಭೀತಿಯಲ್ಲಿಯೇ ಸಾರ್ವಜನಿಕರು ಜೀವನ ನಡೆಸುವಂತಾಗಿದೆ. ಸ್ವಚ್ಛತೆ ಕುರಿತಾದ ನಾಮಫಲಕ ಅಳವಡಿಕೆ, ಬಾವಿ ಕಟ್ಟೆಗೆ ತಂತಿ ಬೇಲಿ ಅಳವಡಿಕೆ ಸೇರಿ ವಿವಿಧ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ’ ಎಂದು ಸ್ಥಳೀಯ ನಿವಾಸಿ ಫಕ್ಕೀರಪ್ಪ ಹಾದಿಮನಿ ಹೇಳಿದರು.

ಮುಚ್ಚಿದ ಜಕ್ಕಣಿ ಬಾವಿ
‘ಧಾರವಾಡ ನಗರದ ಟಿಕಾರೆ ರಸ್ತೆ ಪಕ್ಕದಲ್ಲಿರುವ ಜಕ್ಕಣಿ ಬಾವಿಯನ್ನು 18ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಕುಡಿಯುವ ನೀರಿಗೆ ಯೋಗ್ಯವುಳ್ಳ ಬಾವಿಯಾಗಿತ್ತು. ಪಕ್ಕದ ಶಿವನ ದೇವಸ್ಥಾನ ಪೂಜೆಗೆ ಈ ಬಾವಿಯಿಂದಲೇ ನೀರು ತೆಗೆದುಕೊಂಡು ಹೋಗುತ್ತಿದ್ದರು. 150 ವರ್ಷಗಳ ಹಿಂದೆ ಸ್ಥಳೀಯ ಆಡಳಿತವು ಮರು ನವೀಕರಿಸಿ, ಕುಡಿಯುವ ನೀರಿಗಾಗಿ ಸಾರ್ವಜನಿಕರ ಅನುಕೂಲ ಮಾಡಿಕೊಟ್ಟಿತ್ತು. ಇದೀಗ ನಾನಾ ಕಾರಣಗಳಿಂದ ಬಾವಿ ಮುಚ್ಚಲಾಗಿದೆ’ ಎಂದು ಸಂಶೋಧಕ ಎಂ.ವೈ. ಸಾವಂತ ತಿಳಿಸಿದರು.