ADVERTISEMENT

ಉಪ್ಪಿನಬೆಟಗೇರಿ | ಐತಿಹಾಸಿಕ ಹಿನ್ನಲೆಯ ಯಲ್ಲಮ್ಮ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 5:08 IST
Last Updated 24 ಫೆಬ್ರುವರಿ 2024, 5:08 IST
ಉಪ್ಪಿನಬೆಟಗೇರಿ ಗ್ರಾಮದ ಹೊಸಪೇಟೆ ಓಣಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ರೇಣುಕಾ ಯಲ್ಲಮ್ಮ ದೇವಿ ಮೂರ್ತಿ
ಉಪ್ಪಿನಬೆಟಗೇರಿ ಗ್ರಾಮದ ಹೊಸಪೇಟೆ ಓಣಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ರೇಣುಕಾ ಯಲ್ಲಮ್ಮ ದೇವಿ ಮೂರ್ತಿ   

ಉಪ್ಪಿನಬೆಟಗೇರಿ: ಭಾರತ ಹುಣ್ಣಿಮೆ ಪ್ರಯುಕ್ತ ಉಪ್ಪಿನಬೆಟಗೇರಿ ಗ್ರಾಮದ ಸುಪ್ರಸಿದ್ಧ ರೇಣುಕಾ ಯಲ್ಲಮದೇವಿಯ 9ನೇ ವರ್ಷದ ಜಾತ್ರಾಮಹೋತ್ಸವ ಫೆ.24ರಂದು ಜರುಗಲಿದೆ.

ಅಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಯಲ್ಲಮ್ಮದೇವಿಯ ಪಂಚಲೋಹದ ಉತ್ಸವ ಮೂರ್ತಿಗೆ ಅರ್ಚಕ ಈರಯ್ಯ ಕೆಂಬಾಗಿಮಠ ರುದ್ರಾಭಿಷೇಕ ಹಾಗೂ ವಿವಿಧ ಪೂಜೆ ನೆರವೇರಿಸುವರು. ನಂತರ ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ಸಕಲ ಮಂಗಳ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.

ನಂತರ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿ, ಮಮದಾಪುರದ ಅಭಿನವ ಮುರುಘೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜ್ಯೋತಿಷ್ಯ ಮಹಾದೇವಪ್ಪ ಅಷ್ಟಗಿ ಅಧ್ಯಕ್ಷತೆ ವಹಿಸುವವರು, ನಂತರ ಮಹಾಪ್ರಸಾದ ಜರುಗಲಿದೆ.

ADVERTISEMENT

ಹಿನ್ನೆಲೆ

ಐತಿಹಾಸಿಕ ಹಿನ್ನೆಲೆಯುಳ್ಳ ರೇಣುಕಾ ಯಲ್ಲಮ್ಮ ದೇವಸ್ಥಾನವು ರಟ್ಟರ ಆಳ್ವಿಕೆಯಲ್ಲಿ ಗ್ರಾಮದ ದೊಡ್ಡ ಮನೆತನವಾಗಿದ್ದ, ರಾಮಪ್ಪ ನಾಗಪ್ಪ ಪೂಜಾರ ಎಂಬುವರ ಸ್ವಪ್ನದಲ್ಲಿ ಬಂದು ಪ್ರತಿಷ್ಠಾಪನೆ ಮಾಡುವಂತೆ ಹೇಳಿದ್ದಳು’ ಎಂದು ಗ್ರಾಮದ ಹಿರಿಯರಾದ ರವಳಪ್ಪ ಶಿನಗಾರಿ ಹೇಳಿದರು.

ಅಳಿವಿನಂಚಿನಲ್ಲಿದ್ದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಸಮಿತಿಯೊಂದನ್ನು ರಚಿಸಲಾಗಿದೆ. ಭಕ್ತರು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ ಸುಂದರವಾದ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಗರ್ಭ ಗುಡಿಯೊಳಗೆ ಸ್ಥಳೀಯ ನಿವೃತ್ತ ಶಿಕ್ಷಕ ದಿ.ಕೆ.ಎಂ.ಸಾಬಣ್ಣವರ ಅವರು ಕಪ್ಪುಶಿಲೆಯಲ್ಲಿ ಕೆತ್ತಲಾದ ರೇಣುಕಾ ಯಲ್ಲಮ್ಮ ದೇವಿಯ ಸುಂದರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ದೇವಸ್ಥಾನದ ಸುತ್ತಲಿರುವ ಕಟ್ಟಡದ ಪೌಳಿಗಳಿಂದ ಪುರಾತನ ಇತಿಹಾಸವಿದೆ ಎಂದು ತಿಳಿದು ಬರುತ್ತದೆ. ಭಾರತ ಹುಣ್ಣಿಮೆಗೆ ಸವದತ್ತಿ ರೇಣುಕಾಯಲ್ಲಮ್ಮ ದೇವಿಗೆ ತೆರಳುವ ಭಕ್ತರು ಉಪ್ಪಿನಬೆಟಗೇರಿ ಗ್ರಾಮದ ಯಲ್ಲಮ್ಮ ದೇವಸ್ಥಾನಕ್ಕೆ ಭಂಡಾರ ಉಗ್ಗುತ್ತ ಉದೋ,ಉದೋ.. ಎನ್ನುತ್ತ ಬಂದು ಹಡ್ಡಲಿಗೆ ತುಂಬಿಸುತ್ತಾರೆ. ಧಾರವಾಡ ಜಿಲ್ಲೆ ಹಾಗೂ ಬೇರೆ ಜಿಲ್ಲೆಗಳ ಭಕ್ತರು ಇಲ್ಲಿಗೆ ಆಗಮಿಸಿ ಹರಕೆ ತೀರಿಸಿ ಹೋಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.