ADVERTISEMENT

ಕದ್ದ ಚಿನ್ನಾಭರಣದಲ್ಲಿ ಶೋಕಿ: ಸಿಕ್ಕಿಬಿದ್ದ ಕಳ್ಳರು!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 9:17 IST
Last Updated 21 ಏಪ್ರಿಲ್ 2019, 9:17 IST
ಚಿನ್ನಾಭರಣದ ಮಾಲೀಕರೊಂದಿಗೆ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ ಮಾತನಾಡಿದರು. ಡಿಸಿಪಿ ಡಾ. ಶಿವಕುಮಾರ ಗುಣಾರೆ ಮತ್ತು ಇನ್‌ಸ್ಪೆಕ್ಟರ್ ಎಸ್‌.ಎಸ್. ಕೌಜಲಗಿ ಇದ್ದಾರೆ
ಚಿನ್ನಾಭರಣದ ಮಾಲೀಕರೊಂದಿಗೆ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ ಮಾತನಾಡಿದರು. ಡಿಸಿಪಿ ಡಾ. ಶಿವಕುಮಾರ ಗುಣಾರೆ ಮತ್ತು ಇನ್‌ಸ್ಪೆಕ್ಟರ್ ಎಸ್‌.ಎಸ್. ಕೌಜಲಗಿ ಇದ್ದಾರೆ   

ಹುಬ್ಬಳ್ಳಿ: ಕದ್ದ ಚಿನ್ನಾಭರಣ ಮತ್ತು ಬೈಕ್‌ನಲ್ಲಿ ಶೋಕಿ ಮಾಡುತ್ತಿದ್ದ ಮೂವರು ಆರೋಪಿಗಳು, ಇದೀಗ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.

ಮೀಸೆ ಮೂಡುವುದಕ್ಕೆ ಮುಂಚೆ ಮನೆಗಳ್ಳತನಕ್ಕಿಳಿದಿದ್ದ ನೇಕಾರನಗರದ ಸೈಫ್‌ಅಲಿ (18), ಜನ್ನತ್‌ನಗರದ ಸಾಧಿಕ್ (18) ಹಾಗೂ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನಾಭರಣ, ಬೈಕ್ ಹಾಗೂ ಕ್ಯಾಮೆರಾ ಸೇರಿದಂತೆ ಒಟ್ಟು ₹ 26 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಇದರಿಂದಾಗಿ, ಹಳೇ ಹುಬ್ಬಳ್ಳಿಯಲ್ಲಿ ಠಾಣೆಯಲ್ಲಿ ದಾಖಲಾಗಿದ್ದ ಮೂರು ಹಾಗೂ ಗೋಕುಲ ರೋಡ್‌ ಠಾಣೆಯಲ್ಲಿ ದಾಖಲಾಗಿದ್ದ ಒಂದು ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ತಲೆ ಮರೆಸಿಕೊಂಡಿರುವ ಮತ್ತಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ADVERTISEMENT

‘ಬಾಗಿಲು ಹಾಕಿರುವ ಮನೆಗಳ ಮೇಲೆ ಎರಡು ದಿನ ಕಣ್ಣಿಡುತ್ತಿದ್ದ ಆರೋಪಿಗಳು, ಮೂರನೇಯ ದಿನ ಬೀಗ ಮುರಿದು ಒಳನುಗ್ಗಿ ಕಳ್ಳತನ ಮಾಡುತ್ತಿದ್ದರು. ಕೃತ್ಯ ನಡೆದು ಎರಡು–ಮೂರು ದಿನದ ಬಳಿಕ, ಕುಟುಂಬದವರು ಮನೆಗೆ ಬಂದಾಗ ಪ್ರಕರಣ ಘಟನೆ ಬೆಳಕಿಗೆ ಬರುತ್ತಿತ್ತು’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೃತ್ಯ ಎಸಗಿದ್ದ ಈ ಐವರ ಗ್ಯಾಂಗ್‌ನ ಪೈಕಿ, ಇಬ್ಬರು ತಲೆ ಮರೆಸಿಕೊಂಡಿದ್ ಬಂಧನಕ್ಕೆ ಬಲೆ ಬೀಸಲಾಗಿದೆ. ಹುಬ್ಬಳ್ಳಿಯಲ್ಲಷ್ಟೇ ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳು ಸೇರಿದಂತೆ ಪಕ್ಕದ ಗೋವಾ ಮತ್ತು ಮಹಾರಾಷ್ಟ್ರದಲ್ಲೂ ಕೃತ್ಯ ಎಸಗಿರುವುದು ಮೇಲ್ನೊಟಕ್ಕೆ ಗೊತ್ತಾಗಿದೆ. ತನಿಖೆ ಚುರುಕುಗೊಳಿಸಲಾಗಿದೆ’ ಎಂದು ಹೇಳಿದರು.

ಕೃತ್ಯ ನಡೆದ ವಾರದೊಳಗೆ ಆರೋಪಿಗಳನ್ನು ಬಂಧಿಸಿರುವ ಡಿಸಿಪಿ ಶಿವಕುಮಾರ ಗುಣಾರೆ, ಎಸಿಪಿ ಶ್ರೀಕಾಂತ ಕಟ್ಟೀಮನಿ ಹಾಗೂ ಹಳೇ ಹುಬ್ಬಳ್ಳಿ ಠಾಣೆ ಇನ್‌ಸ್ಪೆಕ್ಟರ್ ಎಸ್‌.ಎಸ್. ಕೌಜಲಗಿ ನೇತೃತ್ವದ ತಂಡಕ್ಕೆ ಕಮಿಷನರ್ ಎಂ.ಎನ್. ನಾಗರಾಜ ಅವರು, ₹10 ಸಾವಿರ ನಗದು ಬಹುಮಾನ ಘೋಷಿಸಿದರು.

ತ್ರಿಬಲ್ ರೈಡ್ ಹೋಗುವಾಗ ಬಲೆಗೆ

‘ಆರೋಪಿಗಳು ಕದ್ದ ಚಿನ್ನದ ಸರಗಳನ್ನು ಧರಿಸಿಕೊಂಡು, ಬೈಕ್‌ನಲ್ಲಿ ಓಡಾಡುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳಿಗ್ಗೆ ಸಿದ್ಧಾರೂಢ ಮಠದ ಮಹಾದ್ವಾರದ ಬಳಿ, ತ್ರಿಬಲ್ ರೈಡ್ ಹೋಗುತ್ತಿದ್ದ ಆರೋಪಿಗಳನ್ನು ತಡೆದು ಪರಿಶೀಲಿಸಿದಾಗ, ಜೇಬಿನಲ್ಲಿ ಎರಡು ಚಿನ್ನದ ಸರ ಸಿಕ್ಕವು. ಬಳಿಕ, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಕೃತ್ಯಗಳನ್ನು ಬಾಯ್ಬಿಟ್ಟರು’ ಎಂದು ಹಳೇ ಹುಬ್ಬಳ್ಳಿ ಠಾಣೆ ಇನ್‌ಸ್ಪೆಕ್ಟರ್ ಎಸ್‌.ಎಸ್. ಕೌಜಲಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.