ADVERTISEMENT

ದೇವಸ್ಥಾನದಲ್ಲೇ ಬಾಣಂತಿಗೆ ಆರೈಕೆ!

ಅಮರಗೋಳ: ಮಳೆಗೆ ಕುಸಿದ ಮನೆ ಗೋಡೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:30 IST
Last Updated 16 ಆಗಸ್ಟ್ 2019, 19:30 IST
ಮಳೆಗೆ ಮನೆ ಕುಸಿದಿದ್ದರಿಂದ ದೇವಸ್ಥಾನದಲ್ಲಿ ಮಗುವಿನೊಂದಿಗೆ ಆಶ್ರಯ ಪಡೆದಿರುವ ಬಾಣಂತಿ ಶಿಲ್ಪಾ ಲದ್ದಿ, ತಾಯಿ ಈರವ್ವ ಲದ್ದಿ ಇದ್ದಾರೆ  –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಮಳೆಗೆ ಮನೆ ಕುಸಿದಿದ್ದರಿಂದ ದೇವಸ್ಥಾನದಲ್ಲಿ ಮಗುವಿನೊಂದಿಗೆ ಆಶ್ರಯ ಪಡೆದಿರುವ ಬಾಣಂತಿ ಶಿಲ್ಪಾ ಲದ್ದಿ, ತಾಯಿ ಈರವ್ವ ಲದ್ದಿ ಇದ್ದಾರೆ  –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿತಗೊಂಡು ಅತಂತ್ರ ಸ್ಥಿತಿಯಲ್ಲಿದ್ದ ಬಾಣಂತಿ ಹಾಗೂ ನವಜಾತ ಶಿಶುವಿಗೆ ಗ್ರಾಮದ ದೇವಸ್ಥಾನವೇ ಆಶ್ರಯ ತಾಣವಾಗಿದ್ದು, ಹತ್ತು ದಿನಗಳಿಂದ ಇಬ್ಬರಿಗೂ ದೇಗುಲದಲ್ಲೇ ಆರೈಕೆ ಮಾಡಲಾಗುತ್ತಿದೆ.

ಅಮರಗೋಳದ ಶಿಲ್ಪಾ ಲದ್ದಿ ಅವರು ಧಾರವಾಡದ ಸರ್ಕಾರಿ ಆಸ್ಪತ್ರೆಯಲ್ಲಿ 20 ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯಿಂದ ಮನೆಗೆ ಬಂದ ಎರಡೇ ದಿನದಲ್ಲಿ ಭಾರೀ ಮಳೆಗೆ ಅವರಿದ್ದ ಮನೆಯ ಗೋಡೆಗಳು ರಾತ್ರಿ ಕುಸಿದವು. ಅದೃಷ್ಟವಶಾತ್ ಅಪಾಯದಿಂದ ಪಾರಾದ ಮನೆಯವರು, ಮಳೆಯಲ್ಲೇ ಬಾಣಂತಿ ಹಾಗೂ ಮಗುವಿನೊಂದಿಗೆ ಗ್ರಾಮದಲ್ಲಿರುವ ಕೊಟ್ಟೂರು ಬಸವೇಶ್ವರ ದೇವಸ್ಥಾನಕ್ಕೆ ಬಂದು ಆಶ್ರಯ ಪಡೆದರು.

‘ಧಾರಾಕಾರವಾಗಿ ಸುರಿದ ಮಳೆಗೆ ಮಗಳು ಹಾಗೂ ಹಸುಗೂಸು ಮಲಗಿದ್ದ ಕೋಣೆಯ ಪಕ್ಕದಲ್ಲೇ ಗೋಡೆ ಕುಸಿಯಿತು. ರಾತ್ರಿಯಾಗಿದ್ದರಿಂದ ಎಲ್ಲಿಗೆ ಹೋಗುವುದೆಂದು ತೋಚಲಿಲ್ಲ. ತಕ್ಷಣ ಮಗಳು ಹಾಗೂ ಮಗುವನ್ನು ಕರೆದುಕೊಂಡು ಸಮೀಪದ ದೇವಸ್ಥಾನದಲ್ಲಿ ಬಿಟ್ಟು ಬಂದೆವು. ಬಳಿಕ, ಮನೆಗೆ ಬಂದು ಹೊದಿಕೆ ಸೇರಿದಂತೆ ಅಗತ್ಯ ವಸ್ತುಗಳನ್ನು ದೇವಸ್ಥಾನಕ್ಕೆ ಸಾಗಿಸಿದೆವು’ ಎಂದು ಶಿಲ್ಪಾ ಲದ್ದಿ ಅವರ ತಾಯಿ ಈರವ್ವ ಲದ್ದಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಮಳೆಗೆ ಊರಿನಲ್ಲಿ ಹಲವು ಮನೆಗಳು ಕುಸಿದಿದ್ದರಿಂದ ಆ ಮನೆಗಳ ಕುಟುಂಬ ಸದಸ್ಯರು ಹಾಗೂ 15ಕ್ಕೂ ಹೆಚ್ಚು ಮಕ್ಕಳು ದೇವಸ್ಥಾನದಲ್ಲೇ ತೆರೆದಿರುವ ಪರಿಹಾರ ಕೇಂದ್ರದಲ್ಲಿ ಉಳಿದುಕೊಂಡಿದ್ದರು. ರಾತ್ರಿ ದೇಗುಲದ ಸಭಾಂಗಣದಲ್ಲಿ ಇರಲು ಸ್ಥಳವಿರಲಿಲ್ಲ. ಹಾಗಾಗಿ, ಗರ್ಭಗುಡಿ ಪಕ್ಕವೇ ಸಣ್ಣ ಮಂಚವನ್ನು ಇಟ್ಟು ಅದರ ಸುತ್ತ, ಟಾರ್ಪಲಿನ್‌ನಿಂದ ಟೆಂಟ್‌ ನಿರ್ಮಿಸಿ ತಾಯಿ ಮತ್ತು ಮಗು ಮಲಗಲು ವ್ಯವಸ್ಥೆ ಮಾಡಿದೆವು’ ಎಂದು ಹೇಳಿದರು.

ಗ್ರಾಮಸ್ಥರಿಂದ ನೆರವು:

‘ಬಾಣಂತಿ ಹಾಗೂ ಮಗುವಿಗೆ ನಿತ್ಯ ಸ್ಥಾನಕ್ಕೆ ಬೇಕಾದ ಬಿಸಿ ನೀರನ್ನು ಮನೆಯ ಅಕ್ಕಪಕ್ಕದವರು ಒದಗಿಸುತ್ತಿದ್ದಾರೆ. ಕೆಲವರು ಬಿಸಿ ಆಹಾರವನ್ನು ತಂದು ಕೊಡುತ್ತಿದ್ದಾರೆ. ಮನೆ ಕುಸಿತವಾಗಿರುವುದರಿಂದ ತಾಲ್ಲೂಕು ಆಡಳಿತವು ₹ 28 ಸಾವಿರ ಪರಿಹಾರದ ಚೆಕ್ ನೀಡಿದೆ. ಮನೆಯ ಗೋಡೆಗಳನ್ನು ನಿರ್ಮಿಸಿದ ಬಳಿಕ, ತಾಯಿ ಮತ್ತು ಮಗುವನ್ನು ಮನೆಗೆ ಕರೆದೊಯ್ಯಲಾಗುವುದು’ ಎಂದು ಈರವ್ವ ಲದ್ದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.